ಸುದ್ದಿಮೂಲ ವಾರ್ತೆ
ಮಾಗಡಿ, ಅ.6: ಕೆಂಪೇಗೌಡರ ಸಮಾಧಿ ಸ್ಥಳ ಅಭಿವೃದ್ಧಿಗೆ ಸರ್ಕಾರ ಮುಂದಾಗಿದ್ದು, ಈ ಗ್ರಾಮದ ಜನರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿಕೊಡಲಾಗುವುದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ಮಾಗಡಿಯ ಕೆಂಪೇಗೌಡ ಕೋಟೆ, ಸಮಾಧಿ ಸ್ಥಳದ ಅಭಿವೃದ್ಧಿ ಕುರಿತ ಪ್ರಾತ್ಯಕ್ಷಿಕೆ ವೀಕ್ಷಣೆ ನಂತರ ಮಾತನಾಡಿದ ಶಿವಕುಮಾರ್ ಮಾತನಾಡಿದ ಅವರು, ನಾವು ಈ ಹಿಂದೆ ಕೆಂಪೇಗೌಡ ಪ್ರಾಧಿಕಾರ ಸ್ಥಾಪನೆ ಮಾಡಿದ್ದೆವು. ಕೆಂಪೇಗೌಡರ ಸಮಾಧಿ ಸ್ಥಳ ಅಭಿವೃದ್ಧಿ ಮಾಡಲು, ಈ ಊರಿನ ಜನರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವುದಾಗಿ ಮಾತು ನೀಡಿದ್ದೆವು. ಸ್ಥಳಾಂತರಕ್ಕೆ ಜಮೀನಿನ ವ್ಯವಸ್ಥೆ ಆಗಿದ್ದು, ಇದಕ್ಕೆ ಎಲ್ಲರ ಸಹಕಾರ ಸಿಕ್ಕಿದೆ ಎಂದು ಕೇಳಿ ಸಂತೋಷವಾಗಿದೆ. ಪ್ರತಿಯೊಬ್ಬರಿಗೂ ದಾಖಲೆಗಳ ಸಮೇತ ನಿವೇಶನ ನೀಡಬೇಕು, ಅವರ ಬದುಕಿಗೆ ಅನುಕೂಲ ಆಗುವ ವ್ಯವಸ್ಥೆ ಕಲ್ಪಿಸಲು ಶಾಸಕ ಬಾಲಕೃಷ್ಣ ಅವರಿಗೆ ತಿಳಿಸಿದ್ದೇನೆ ಎಂದು ಹೇಳಿದರು.
ಈ ಭಾಗದ ಅಭಿವೃದ್ಧಿಗೆ ಅಕ್ಕಪಕ್ಕದ 7-8 ಎಕರೆ ಜಮೀನು ಬೇಕಿದ್ದು, ಇದಕ್ಕೆ ಬದಲಿ ಜಮೀನು ನೀಡಲಾಗುವುದು. ಇದನ್ನು ಐತಿಹಾಸಿಕ ಹಾಗೂ ಪವಿತ್ರ ಕ್ಷೇತ್ರವಾಗಿ ಮಾಡಬೇಕು. ಇದು ದೇಶದ ಆಸ್ತಿ. ಇದಕ್ಕಾಗಿ ನೀವು ಸಹಕಾರ ನೀಡಬೇಕು. ಕೆಂಪೇಗೌಡರ ಜನ್ಮಸ್ಥಳ ಹಾಗೂ ಐಕ್ಯಸ್ಥಳ, ಶ್ರೀ ಶಿವಕುಮಾರಸ್ವಾಮಿಗಳ ಜನ್ಮಸ್ಥಳ, ಶ್ರೀ ಬಾಲಗಂಗಾಧರನಾಥ ಸ್ವಾಮಿಗಳ ಜನ್ಮಸ್ಥಳ ಮಾಗಡಿ ಕ್ಷೇತ್ರದಲ್ಲಿರುವುದು ವಿಶೇಷ. ಈ ಕ್ಷೇತ್ರಗಳ ಅಭಿವೃದ್ಧಿಗೆ ನಿಮ್ಮ ಸಹಕಾರ ಇರಲಿ ಎಂದು ತಿಳಿಸಿದರು.
ಲಿಂಗಾಯತರ ಅಸಮಾಧಾನದ ಬಗ್ಗೆ ಸಭೆ ನಡೆಯುತ್ತಿರುವ ಬಗ್ಗೆ ಕೇಳಿದಾಗ, “ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಕೆಲವು ಅಧಿಕಾರಿಗಳು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಎಲ್ಲಾ ಪಕ್ಷಗಳು ಅವರದೇ ಆದ ರಾಜಕಾರಣ ಮಾಡಲು ಹೊರಟಿವೆ. ರಾಜ್ಯದ ಎಲ್ಲಾ ಜಾತಿ, ಸಮುದಾಯದವರು ನಮಗೆ ಮತ ಹಾಕಿ ಜನರ ಸೇವೆ ಮಾಡಲು ನಮಗೆ ಅವಕಾಶ ಮಾಡಿಕೊಟ್ಟಿದ್ದಾರೆ. ನಾವು ಅದನ್ನು ಮುಂದುವರಿಸಿಕೊಂಡು ಹೋಗುತ್ತೇವೆ” ಎಂದು ತಿಳಿಸಿದರು.
ಪಂಚಾಯ್ತಿ ಮಟ್ಟದಲ್ಲಿ ಮದ್ಯದಂಗಡಿ ತೆರೆಯುವ ವಿಚಾರವಾಗಿ ಸಿಎಂ ಸ್ಪಷ್ಟನೆ ಕುರಿತು ಕೇಳಿದಾಗ, “ಇದು ಆರ್ಥಿಕ ಇಲಾಖೆ ನಿರ್ಧಾರ. ಕಳೆದ 30 ವರ್ಷಗಳಿಂದ ಯಾವುದೇ ಹೊಸ ಅಂಗಡಿಗಳಿಗೆ ಅನುಮತಿ ನೀಡಿಲ್ಲ. ಅನೇಕರು ಪರವಾನಗೆಯನ್ನು 4-5 ಕೋಟಿಗೆ ಮಾರುತ್ತಿದ್ದಾರೆ. ಹೆಚ್ಚಿನ ಜನರಿಗೆ ಉದ್ಯೋಗ ಸೃಷ್ಟಿ ಮಾಡಬೇಕು. ಎಲ್ಲಿ ಮದ್ಯದ ಅಂಗಡಿ ತೆರೆಯಬೇಕು ಎಂದು ಚರ್ಚೆ ಮಾಡುತ್ತೇವೆ. ಹಾಗೆಂದು ಹಳ್ಳಿ, ಹಳ್ಳಿಗಳಲ್ಲಿ ಮಾಡುವುದಿಲ್ಲ. ಕುಡಿತ ತಪ್ಪಿಸಲು ಆಗುವುದಿಲ್ಲ. ಮುಖ್ಯಮಂತ್ರಿಗಳು ಮುಂದಿನ ದಿನಗಳಲ್ಲಿ ಎಲ್ಲರ ಜೊತೆ ಚರ್ಚೆ ಮಾಡಿ ಸೂಕ್ತ ತೀರ್ಮಾನ ಮಾಡುತ್ತಾರೆ” ಎಂದು ತಿಳಿಸಿದರು.