ಸುದ್ದಿಮೂಲ ವಾರ್ತೆ
ನಾಗಮಂಗಲ, ಜೂ,8 : ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ಸರ್ಕಾರದ ವತಿಯಿಂದ ಇದೇ 27 ರಂದು ಆಚರಿಸಲಿದ್ದು, ತಾಲೂಕು ಮಟ್ಟದಲ್ಲಿ ಜೂ.28 ರಂದು ವಿಜೃಂಭಣೆಯಿಂದ ಆಚರಿಸಲಾಗುವುದು ಎಂದು ಕೃಷಿ ಸಚಿವ ಎನ್. ಚೆಲುವರಾಯಸ್ವಾಮಿ ಹೇಳಿದರು.
ಪಟ್ಟಣದ ತಾಲೂಕು ಆಡಳಿತಸೌಧದ ನ್ಯಾಯಾಲಯದ ಸಭಾಂಗಣದಲ್ಲಿ ನಡೆದ ಕೆಂಪೇಗೌಡ ಜಯಂತಿ ಸಂಬಂಧ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ನಾಡಿಗೆ ಕೆಂಪೇಗೌಡರ ಕೊಡುಗೆ ಅಪಾರವಾಗಿದ್ದು ಅಂತಹ ಮಹನೀಯರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಬೇಕಿರುವುದು ನಾಡಿನ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಜೂ.27 ರಂದು ಜಯಂತಿ ಇದ್ದರೂ, ಜೂ.28 ರಂದು ತಾಲೂಕಿನಲ್ಲಿ ಆಚರಣೆ ಮಾಡಲಿದ್ದೇವೆ.
ತಾಲೂಕಿನ ವಿವಿಧ ಸಂಘ-ಸಂಸ್ಥೆಗಳು ಹಾಗೂ ಎಲ್ಲಾ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಜಯಂತಿಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಿದೆ. ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ನಾಡಫ್ರಭು ಕೆಂಪೇಗೌಡರ ಭಾವಚಿತ್ರವನ್ನು ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ತಾಲೂಕು ಆಡಳಿತಸೌಧದ ಆವರಣದ ವೇದಿಕೆಗೆ ಕರೆತರಲಾಗುವುದು. ಕೆಂಪೇಗೌಡರನ್ನು ಯಾವುದೇ ಒಂದು ಜಾತಿಗೆ ಸೀಮಿತಗೊಳಿಸದೆ ಎಲ್ಲಾ ಸಮುದಾಯದವರೂ ಕೂಡ ಈ ಜಯಂತಿಯಲ್ಲಿ ಪಾಲ್ಗೊಳ್ಳುವಂತೆ ತಿಳಿಸಿದರು.
ಸಚಿವರ ಎದುರೇ ವಾಗ್ವಾದ:
ಜಯಂತಿ ಆಚರಣೆಗೆ ಸಂಬಂಧಿಸಿದಂತೆ ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಜೆ.ಕುಮಾರ್ ಅವರಿಗೆ ಸಲಹೆ ನೀಡುವಂತೆ ಸಚಿವ ಎನ್.ಚೆಲುವರಾಯಸ್ವಾಮಿ ಹೇಳುತ್ತಿದ್ದಂತೆ ಸಚಿವರಿದ್ದ ವೇದಿಕೆಯಲ್ಲಿಯೇ ಕುಳಿತಿದ್ದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಜೆ.ರಾಜೇಶ್ ಆಕ್ರೋಶಗೊಂಡು, ಶಾಲೆಗೆ ಬಾರದವರಿಗೆ ಸಲಹೆ ನೀಡುವಂತೆ ಕೇಳುವುದು ಬೇಡ. ಮಕ್ಕಳಿಗೆ ಪಾಠ ಮಾಡದಿರುವವರು ಸಲಹೆ ನೀಡುವ ಅಗತ್ಯವಿಲ್ಲ ಎಂದು ಸಚಿವರ ಎದುರೇ ಸಿ.ಜೆ.ಕುಮಾರ್ ವಿರುದ್ದ ಹರಿಹಾಯ್ದರು.
ಈ ಸಂದರ್ಭ ಅದಕ್ಕೆ ಪ್ರತಿಯಾಗಿ ಸಿ.ಜೆ.ಕುಮಾರ್ ನೀನು ಈ ಸಭೆಗೆ ಬಂದಿರುವುದೇ ತಪ್ಪು, ನೀನು ಸಭೆಗೆ ಬರುವಂತಿಲ್ಲ ಎಂದು ಹೇಳುತ್ತಿದ್ದಂತೆ ಸಭೆಯಲ್ಲಿದ್ದ ಕೆಲವು ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭ ಇಬ್ಬರ ನಡುವೆ ವಾಗ್ವಾದ ವಿಕೋಪಕ್ಕೆ ಹೋಗುತ್ತಿದ್ದನ್ನು ಅರಿತ ಸಚಿವರು ಮಧ್ಯಪ್ರವೇಶಿಸಿ ಇಬ್ಬರನ್ನು ಸಮಾಧಾನಪಡಿಸಿದರು.
ಬಿಇಒಗೆ ಸಚಿವರಿಂದ ಕ್ಲಾಸ್
ಜಯಂತಿಯ ಪೂರ್ವಭಾವಿ ಸಭೆಯ ಅಂತಿಮಘಟ್ಟದಲ್ಲಿ ಸಚಿವ ಎನ್.ಚೆಲುವರಾಯಸ್ವಾಮಿ ಕೆಲವು ಇಲಾಖೆಗಳಿಗೆ ಸಂಬಂಧಿಸಿದ ಮಾಹಿತಿ ಕೇಳುತ್ತಿದ್ದರು. ಈ ಸಂದರ್ಭ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಎನ್.ಜೆ.ರಾಜೇಶ್ ಮಧ್ಯಪ್ರವೇಶ ಮಾಡಿ ನಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸರಿಯಾಗಿ ಶಿಕ್ಷಕರು ಬಾರದಿರುವುದರಿಂದ 10ಕ್ಕೂ ಶಾಲೆಗಳು ಮುಚ್ಚಿವೆ. ಬಿಇಒ ಶಿಕ್ಷಕರ ವಿರುದ್ದ ಕ್ರಮತೆಗೆದುಕೊಳ್ಳಬೇಕು ಎಂದು ಹೇಳಿದರು.
ಇದಕ್ಕೆ ಬಿಇಒ ಸುರೇಶ್ ಉತ್ತರಿಸುವ ಬರದಲ್ಲಿ ಆ ಶಾಲೆಗಳು ನನ್ನ ಅವಧಿಯಲ್ಲಿ ಮುಚ್ಚಿಲ್ಲ. ನಾನು ಬರುವುದಕ್ಕೂ ಮೊದಲು ಮುಚ್ಚಿವೆ. ನೀವು ಆಗ ಏನು ಮಾಡುತ್ತಿದ್ದೀರಿ ಎಂದು ಪ್ರತಿಯಾಗಿ ಹೇಳಿದರು. ಇದರಿಂದ ಬಾರಿ ಆಕ್ರೋಶಗೊಂಡ ಸಚಿವ ಎನ್.ಚೆಲುವರಾಯಸ್ವಾಮಿ, ಏ ಬಾಯಿ ಮುಚ್ಚು, ಏನು ರಾಜಕಾರಣಿಗಳ ರೀತಿ ನೀನು ಉತ್ತರ ನೀಡುತ್ತಿದ್ದೀಯಾ. ಅಧಿಕಾರಿಯಾಗಿ ಯಾವ ರೀತಿ ಉತ್ತರ ನೀಡಬೇಕು ಎಂದು ಗೊತ್ತಿಲ್ಲವಾ. ಈ ರೀತಿ ಉತ್ತರ ನೀಡುವುದು ಸರಿಯಲ್ಲ ಎಂದು ಬಿಇಒ ಸುರೇಶ್ಗೆ ಕ್ಲಾಸ್ ತೆಗೆದುಕೊಂಡರು.
ಸಭೆಯಲ್ಲಿ ತಹಸೀಲ್ದಾರ್ ನಯೀಂಉನ್ನಿಸಾ, ಡಿವೈಎಸ್ಪಿ ಲಕ್ಷ್ಮೀನಾರಾಯಣಪ್ರಸಾದ್, ತಾ.ಪಂ.ಇಒ ಚಂದ್ರಮೌಳಿ, ವೃತ್ತ ಆರಕ್ಷಕ ನಿರೀಕ್ಷಕ ನಿರಂಜನ್, ಪಟ್ಟಣ ಠಾಣೆ ಇನ್ಸ್ಪೆಕ್ಟರ್ ಅಶೋಕ್ಕುಮಾರ್ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಇದ್ದರು.
=============
೦೮ ಎನ್ಎಂವಿ ೦೧:
ನಾಗಮಂಗಲ ಪಟ್ಟಣದ ತಾಲೂಕು ಆಡಳಿತಸೌಧದ ಸಭಾಂಗಣದಲ್ಲಿ ಕೃಷಿಸಚಿವ ಎನ್..ಚೆಲುವರಾಯಸ್ವಾಮಿ ಅಧ್ಯಕ್ಷತೆಯಲ್ಲಿ ನಾಡಪ್ರಭು ಕೆಂಪೇಗೌಡ ಜಯಂತಿ ಸಂಬಂಧಿಸಿದಂತೆ ಪೂರ್ವಭಾವಿ ಸಭೆ ನಡೆಯಿತು.