ಸುದ್ದಿಮೂಲ ವಾರ್ತೆ
ತುಮಕೂರು,ಆ.11:ನಾಡಪ್ರಭು ಕೆಂಪೇಗೌಡರು ಒಂದು ಜಾತಿಗೆ, ಸಮುದಾಯಕ್ಕೆ ಸೀಮಿತವಾಗಿರದೆ ಎಲ್ಲಾ ಶೋಷಿತ ವರ್ಗಗಳ ಶ್ರೇಯಸ್ಸಿಗಾಗಿ ಶ್ರಮಿಸಿದವರು ಎಂದು ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ: ಜಿ. ಪರಮೇಶ್ವರ್ ಅಭಿಪ್ರಾಯ ಪಟ್ಟರು.
ನಗರದ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿಂದು ನಾಡಪ್ರಭು ಕೆಂಪೇಗೌಡರ 514ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಬೆಂಗಳೂರು ಪಟ್ಟಣವನ್ನು ಅಂದೇ ಮುಂದಾಲೋಚನೆಯಿಂದ ಮೂಲಭೂತ ಸೌಕರ್ಯಗಳನ್ನು ಮಾಡಿದ್ದರು ಎಂದು ತಿಳಿಸಿದರು.
ಪೇಟೆಗಳ ಜನಸಂಖ್ಯೆಗೆ ಅನುಗುಣವಾಗಿ ಕುಡಿಯುವ ನೀರಿಗಾಗಿ ಹಾಗೂ ಕೃಷಿಗೆ ಅನುಕೂಲವಾಗುವ ರೀತಿಯಲ್ಲಿ ಕೆರೆಗಳನ್ನು ನಿರ್ಮಿಸಿದರು. ಕೆಂಪೇಗೌಡರ ಆದರ್ಶ ಮತ್ತು ದೂರದೃಷ್ಟಿಯನ್ನು ಇಟ್ಟುಕೊಂಡು ನಗರವನ್ನು ಅಭಿವೃದ್ದಿಪಡಿಸಿದ್ದರು. ಇಂತಹ ಮಹನೀಯರ ಇತಿಹಾಸವನ್ನು ಮುಂದಿನ ಪೀಳಿಗೆಯ ಮಕ್ಕಳು ತಿಳಿಯುವಂತಾಗಲಿ ಎಂದು ಹೇಳಿದರು.
ಬೆಂಗಳೂರು ನಗರಕ್ಕೆ ಪರ್ಯಾಯವಾಗಿ ತುಮಕೂರು ನಗರವನ್ನು ಅಭಿವೃದ್ದಿಪಡಿಸಲು ಚಿಂತನೆ ನಡೆಸಲಾಗುತ್ತಿದೆ. ಇಡೀ ವಿಶ್ವದಲ್ಲಿಯೇ ಅತಿ ಹೆಚ್ಚು ತಾಂತ್ರಿಕ ಇಂಜಿನಿಯರ್ಗಳನ್ನು ಉತ್ಪಾದನೆ ಮಾಡುವ ದೇಶ ಭಾರತವಾಗಿದೆ. ಪ್ರತಿ ವರ್ಷ15 ಲಕ್ಷ ಇಂಜಿನಿಯರ್ಗಳು ಮತ್ತು 1 ಲಕ್ಷ ವೈದ್ಯರುಗಳನ್ನು ಸಿದ್ಧಮಾಡುತ್ತದೆ. ಕೆಂಪೇಗೌಡರ ಇತಿಹಾಸವನ್ನು ಅಭಿವೃದ್ದಿಯ ಜೊತೆಗೆ ತೆಗೆದುಕೊಂಡು ಹೋಗಬೇಕೆ ಹೊರತು ಜಾತಿ ಅಥವಾ ಬೇರೆ ದೃಷ್ಠಿಯಲ್ಲಿ ನೋಡಬಾರದು ಎಂದು ಹೇಳಿದರು.
ಸಹಕಾರ ಸಚಿವ ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ. ಎನ್. ರಾಜಣ್ಣ ಅವರು ಮಾತನಾಡಿ, ನಾಡಪ್ರಭು ಕೆಂಪೇಗೌಡರ ಆಡಳಿತ ಮಾನವತಾವಾದಿಯರ ಆಡಳಿತ ಎಂದು ಹೇಳಿದರು.
ಯಾವೆಲ್ಲ ಸಮುದಾಯಗಳು ಶೋಷಣೆಗೆ ಒಳಗಾಗಿದ್ದವು ಆ ಸಮುದಾಯಗಳ ಶ್ರೇಯಸ್ಸಿಗಾಗಿ ದುಡಿದವರು. ರಾಜಕಾರಣಿಗಳಿಗೆ ಮುಂದಿನ ರಾಜಕೀಯ ಭವಿಷ್ಯದ ಕುರಿತು ಚಿಂತನೆ ಮಾಡುತ್ತಾರೆ ಆದರೆ ಮಹಾದರ್ಶನಿಕ ಆದವರು ಮಾತ್ರ ಮುಂದಿನ ಪೀಳಿಗೆಯ ಜನರ ಅಭಿವೃದ್ದಿಗಾಗಿ ಕೆಲಸ ಮಾಡುತ್ತಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಆದಿಚುಂನಗಿರಿಯ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಮಂಗಳನಾಥ ಸ್ವಾಮೀಜಿ, ಶಾಸಕರುಗಳಾದ ಶ್ರೀನಿವಾಸ್, ಸುರೇಶ್ ಗೌಡ, ಜ್ಯೋತಿ ಗಣೇಶ್,ರಂಗನಾಥ್, ಪಾಲಿಕೆ ಮೇಯರ್ ಪ್ರಭಾವತಿ ಸುಧಿಶ್ವರ್, ಮಾಜಿ ಲೋಕಸಭಾ ಸದಸ್ಯ ಮುದ್ದೇಹನುಮೆಗೌಡ, ಎಂಎಲ್ಸಿ ಚಿದಾನಂದ ಎಂ ಗೌಡ ಸೇರಿದಂತೆ ಮುಖಂಡರುಗಳು ಉಪಸ್ಥಿತರಿದ್ದರು.