ದೇವನಹಳ್ಳಿ ಆ.10: ಒಂದು ಸಮುದಾಯಕ್ಕೆ ಸೀಮಿತವಾಗದೆ ಎಲ್ಲರ ಏಳಿಗೆಗೆ ಶ್ರಮಿಸಿದವರು ನಾಡಪ್ರಭು ಕೆಂಪೇಗೌಡರು. ಬೆಂಗಳೂರು ನಗರವು ವಿಶ್ವದಲ್ಲಿ ಹೆಸರು ಮಾಡಲು ಕಾರಣ ಎಂದರೆ ಅದು ಕೆಂಪೇಗೌಡರ ಕೊಡುಗೆ ಎಂದು ಸಚಿವ ಕೆ.ಹೆಚ್.ಮುನಿಯಪ್ಪ ಹೇಳಿದರು.
ದೇವನಹಳ್ಳಿ ತಾಲ್ಲೂಕಿನ ಬೀರಸಂದ್ರ ಗ್ರಾಮದ ಜಿಲ್ಲಾಡಳಿತ ಭವನದ ಮುಂಭಾಗದ ಆವರಣದಲ್ಲಿ ಇಂದು ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡರ ಕಂಚಿನ ಪುತ್ಥಳಿ ಅನಾವರಣಗೊಳಿಸಿ ಹಾಗೂ ಜಯಂತ್ಯೋತ್ಸವ ಸಮಾರಂಭ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನಾಡಪ್ರಭು ಕೆಂಪೇಗೌಡರ ವಂಶಸ್ಥರ ಮೂಲ ಸ್ಥಾನ ದೇವನಹಳ್ಳಿಯ ಆವತಿ ಗ್ರಾಮ ಎಂದು ಇತಿಹಾಸ ಹೇಳುತ್ತದೆ. ದೇವನಹಳ್ಳಿ ವ್ಯಾಪ್ತಿಯಲ್ಲಿ 20 ಎಕರೆ ಜಾಗ ಗುರ್ತಿಸಿ ಕೆಂಪೇಗೌಡರ ಜೀವನ ಚರಿತ್ರೆ, ತ್ಯಾಗ, ಹೋರಾಟ, ಸಮಾಜ ಸೇವೆಗಳ ಸಮಗ್ರ ಇತಿಹಾಸವನ್ನು ತಿಳಿಸುವ ಸಲುವಾಗಿ ಅವರ ನೆನಪಿನಲ್ಲಿ ಸ್ಮಾರಕವನ್ನು ಸಂಸ್ಥೆ ನಿರ್ಮಾಣ ಮಾಡಲಾಗುವುದು ಎಂದರು.
ಸಚಿವ ಕೃಷ್ಣ ಬೈರೇಗೌಡ ಮಾತನಾಡಿ, ಜಿಲ್ಲಾಡಳಿತ ಭವನದ ಆವರಣದಲ್ಲಿ ನಾಡಪ್ರಭು ಕೆಂಪೇಗೌಡರ ಕಂಚಿನ ಪ್ರತಿಮೆ ಅನಾವರಣ ಮಾಡಿರುವುದು ಬಹಳ ಹೆಮ್ಮೆಯ ವಿಷಯ. ಕೆಂಪೇಗೌಡರ ತತ್ವ ಸಿದ್ಧಾಂತಗಳನ್ನು, ಆದರ್ಶಗಳನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿ ಅವರು ಮಾತನಾಡಿ, ನಾಡಪ್ರಭು ಕೆಂಪೇಗೌಡರು ದೂರದೃಷ್ಟಿ ಹೊಂದಿದ್ದ ನಾಯಕರಾಗಿದ್ದರು. ಎಲ್ಲಾ ಸಮುದಾಯದವರನ್ನು ಗೌರವದಿಂದ ಕಾಣುತ್ತಿದ್ದರು. ಬೆಂಗಳೂರಿನಲ್ಲಿ ಹಲವು ಕುಲ ಕಸುಬುಗಳನ್ನು ಪರಿಚಯಿಸಿ, ಹಲವರಿಗೆ ಉದ್ಯೋಗ ಸೃಷ್ಟಿಸಿದರು. ಬೆಂಗಳೂರು ಇಂದು ತಂತ್ರಜ್ಞಾನ, ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿದೆ ಎಂದರೆ ನಾಡಪ್ರಭು ಕೆಂಪೇಗೌಡರ ದೂರದೃಷ್ಟಿ ಯೋಜನೆಗಳ ಫಲ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಶಾಸಕ ಶರತ್ ಕುಮಾರ್ ಬಚ್ಚೇಗೌಡ, ವಿಧಾನ ಪರಿಷತ್ ಸದಸ್ಯರಾದ ಎಸ್.ರವಿ, ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಡಾ. ಶಿವಶಂಕರ.ಎನ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಅನುರಾಧ.ಕೆ.ಎನ್, ಅಪರ ಪೊಲೀಸ್ ವರಿಷ್ಠಾಧಿಕಾರಿ ಪುರುಷೋತ್ತಮ, ಉಪ ವಿಭಾಗಾಧಿಕಾರಿ ಶ್ರೀನಿವಾಸ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ರಮೇಶ್ ಸೇರಿದಂತೆ ಸಮುದಾಯದ ಮುಖಂಡರಾದ ಕೆ.ಸಿ ವೆಂಕಟೇಗೌಡ, ಬಿ.ಮುನೇಗೌಡ, ಜೊನ್ನಹಳ್ಳಿ ಮುನಿರಾಜು, ಚನ್ನಹಳ್ಳಿ ರಾಜಣ್ಣ, ಕೆ.ಸಿ.ಮಂಜುನಾಥ್, ಕೆ.ಅರ್, ನಾಗೇಶ್, ನೀಲೇರಿ, ಕೆ.ಪಿ.ಸಿ.ಸಿ.ಸದಸ್ಯ ವಿ.ಶಾಂತಕುಮಾರ್, ಅಂಬರೀಶ್ ಗೌಡ, ನರಗನಹಳ್ಳಿ ಶ್ರೀನಿವಾಸ್, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.