ಸುದ್ದಿಮೂಲ ವಾರ್ತೆ
ಕೆಜಿಎಫ್, ಆ. 2 : ನಗರಸಭೆ ಬಸ್ ನಿಲ್ದಾಣ ಮತ್ತು ಎಂಜಿ ಮಾರುಕಟ್ಟೆಗೆ ನಗರಸಭೆ ಪೌರಾಯುಕ್ತ ಪವನ್ ಕುಮಾರ್ ಭೇಟಿ ನೀಡಿದರು.
ನಗರಸಭೆ ಬಸ್ ನಿಲ್ದಾಣದಲ್ಲಿ ಸ್ವಚ್ಛತೆ ಮರಿಚಿಕೆಯಾಗಿರುವ ಕುರಿತು ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು. ಇದನ್ನು ವೀಕ್ಷಣೆ ಮಾಡಿ ಕೂಡಲೇ ಸ್ವಚ್ಛತಾ ಕಾರ್ಯವನ್ನು ಆರಂಭಿಸುವಂತೆ ನಗರಸಭೆ ಸಿಬ್ಬಂದಿಗಳಿಗೆ ಸೂಚಿಸಿದರು.
ಅಂಗಡಿಗಳನ್ನು ಚರಂಡಿ ಮೇಲೆ ನಿರ್ಮಿಸಿ, ಚರಂಡಿ ನೀರು ಹೊರ ಬರುತ್ತಿತ್ತು. ಇದನ್ನು ವೀಕ್ಷಿಸಿ ಅಂಗಡಿ ಮಾಲೀಕರಿಗೆ ಎಚ್ಚರಿಕೆ ನೀಡಿ ದಂಡ ವಿಧಿಸಲಾಯಿತು. ನಂತರ ಹೋಟೆಲ್, ಸ್ವೀಟ್ ಶಾಪ್ ಬೇಕರಿಗಳಲ್ಲಿ ಸ್ವಚ್ಛತೆ ಇಲ್ಲದ ಮತ್ತು ಪ್ಲಾಸ್ಟಿಕ್ ಬಳಕೆಗೆ ದಂಡ ವಿಧಿಸಲಾಯಿತು.
ಎಂಜಿ ಮಾರುಕಟ್ಟೆಗೆ ಭೇಟಿ ನೀಡಿದ ಆಯುಕ್ತರು, ಕಸದ ವಿಲೇವಾರಿ ಬಗ್ಗೆ ಸಿಬ್ಬಂದಿಗಳೊಂದಿಗೆ ಚರ್ಚಿಸಿದರು. ರಸ್ತೆಯನ್ನು ಆಕ್ರಮಿಸಿಕೊಂಡಿದ್ದ ಅಂಗಡಿ ಮಾಲೀಕರಿಗೆ ಮತ್ತು ವರ್ತಕರಲ್ಲಿ ಅಂಗಡಿಗಳನ್ನು ರಸ್ತೆಯಲ್ಲಿಟ್ಟುಕೊಂಡರೆ ಗ್ರಾಹಕರಿಗೆ ತೊಂದರೆಯಾಗುತ್ತದೆ. ಅಂಗಡಿ ವಸ್ತುಗಳನ್ನು ನೀವು ಅಂಗಡಿ ಒಳ ಭಾಗದಲ್ಲಿ ಇಟ್ಟುಕೊಳ್ಳಬೇಕೆಂದು ಅರಿವು ಮೂಡಿಸಿದರು. ಇದನ್ನು ಪುನಃ ಮುಂದುವರೆಸಿಕೊಂಡು ಹೋದರೆ ಅಂಗಡಿಗೆ ಬೀಗ ಹಾಕುವುದಾಗಿ ಎಚ್ಚರಿಸಿದರು.
ಎಂಜಿ ಮಾರುಕಟ್ಟೆ ಶೌಚಾಲಯ ಪಕ್ಕದಲ್ಲಿ ಕಸ ವಿಲೇವಾರಿ ಮಾಡದೆ ಇದ್ದಿದ್ದನ್ನು ಗಮನಿಸಿದರು. ನಗರಸಭೆ ಸಿಬ್ಬಂದಿಗೆ ತರಾಟೆ ತೆಗೆದುಕೊಂಡರು. ಸಿಬ್ಬಂದಿಯವರು ಇಲ್ಲಿ ತೆಂಗಿನಕಾಯಿ ಮೂಟೆಗಳನ್ನು ಶೇಖರಣೆ ಮಾಡಿರುತ್ತಾರೆ. ನಗರಸಭೆ ಆಟೋ ಬರೋದಕ್ಕೆ ತೊಂದರೆ ಆಗುತ್ತದೆ ಎಂದು ಉತ್ತರಿಸಿದರು. ಕೂಡಲೇ ಅಂಗಡಿ ಮಾಲೀಕರನ್ನು ತರಾಟೆಗೆ ತೆಗೆದುಕೊಂಡು ಈ ತೆಂಗಿನಕಾಯಿ ಮೂಟೆಗಳನ್ನು ತೆರವುಗೊಳಿಸಬೇಕೆಂದು ಸೂಚಿಸಿದರು.
ನಗರವನ್ನು ಸ್ವಚ್ಛವಾಗಿಡಲು ಸಾರ್ವಜನಿಕರು ಸಹಕರಿಸಬೇಕೆಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ನಗರಸಭೆ ಮಾಜಿ ಅಧ್ಯಕ್ಷರು ರಮೇಶ್ ಜೈನ್, ಆರೋಗ್ಯಧಿಕಾರಿ ಸರಸ್ವತಿ, ಮುರಳಿ ಆರ್ ಓ, ಮಂಜುನಾಥ್ ಸೇರಿದಂತೆ ಸಿಬ್ಬಂದಿ ಹಾಜರಿದ್ದರು.