ಸುದ್ದಿಮೂಲ ವಾರ್ತೆ
ದೇವನಹಳ್ಳಿ, ಜು 15 : ಟ್ಟಣದಲ್ಲಿ ಅಗತ್ಯವಾಗಿರುವ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಕ್ರಮಕೈಗೊಳ್ಳುವುದಾಗಿ ಆಹಾರ ನಾಗರೀಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದರು.
ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಚಿವರಿಗೆ ಪೌರಸನ್ಮಾನ ಹಾಗೂ ಪಟ್ಟಣದ ಅಭಿವೃದ್ಧಿಯ ಕುರಿತು ಅಧಿಕಾರಿಗಳು ಹಾಗೂ ಸದಸ್ಯರೊಂದಿಗೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ಪಟ್ಟಣದ ಜನತೆಗೆ ಮೂಲಭೂತವಾಗಿ ಬೇಕಾಗಿರುವುದು ಶಾಶ್ವತ ಕುಡಿಯುವ ನೀರು, ಒಳಚರಂಡಿ, ರಸ್ತೆ ಇವುಗಳಿಗೆ ಹೆಚ್ಚು ಒತ್ತು ನೀಡಲು , ಜಿಲ್ಲಾಧಿಕಾರಿಗಳು ಪ್ರತಿ ವಾರ್ಡಿಗೆ ತೆರಳಿ ಅಲ್ಲಿನ ಸ್ಥಿತಿಗತಿಗಳನ್ನು ಅವಲೋಕನ ಮಾಡಲಿದ್ದಾರೆ. ಎಲ್ಲೆಲ್ಲಿ ರಾಜಕಾಲುವೆ, ಚರಂಡಿ ರಸ್ತೆ ಒತ್ತುವರಿಯಾಗಿದೆ, ಅವುಗಳನ್ನು ಪಟ್ಟಿಮಾಡಿ ವರದಿ ನೀಡಲಿದ್ದಾರೆ. ನಂತರ ನಾನು ಪ್ರತಿ ವಾರ್ಡಿಗೆ ಭೇಟಿ ನೀಡಿ ಶಾಶ್ವತ ಕಾಮಗಾರಿಗಳಿಗೆ ಆದ್ಯತೆ ನೀಡಿ ದೇವನಹಳ್ಳಿಯನ್ನು ಸ್ಮಾರ್ಟ್ ಸಿಟಿಯಾಗಿ ಮಾಡಲಿದ್ದೇನೆ ಎಂದರು.
ಪಟ್ಟಣದಲ್ಲಿ ಶಾಶ್ವತ ಕಾಮಗಾರಿಗಳನ್ನು ಮಾಡಲು ಕ್ರಮವಹಿಸಲಾಗುವುದು. ರಸ್ತೆ ಡಾಂಬರೀಕರಣದ ನಂತರ ಎಲ್ಲೆಂದರಲ್ಲಿ ಅಗೆಯುವುದು ನಿಲ್ಲಿಸಬೇಕು. ಅದಕ್ಕೆ ಕಡಿವಾಣ ಹಾಕುವ ಕೆಲಸ ಅಧಿಕಾರಿಗಳು ಮಾಡಬೇಕು. ಸದಸ್ಯರು ಶಾಶ್ವತ ಕಾಮಗಾರಿಗಳ ಬಗ್ಗೆ ಆದ್ಯತೆ ನೀಡಬೇಕು. ದೇವನಹಳ್ಳಿ ಪಟ್ಟಣದಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಂಡಿಗಳು ಬಿದ್ದಿದ್ದು, ನಂದಿ ಉಪಚಾರ್ ಹೋಟಲ್ನಿಂದ ಕೆಂಪೇಗೌಡ ಸರ್ಕಲ್ವರೆಗೆ ಸಿಸಿ ರಸ್ತೆ, ಪುಟ್ಬಾತ್ ಬೆಂಗಳೂರು ನಗರದ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದು ತಿಳಿಸಿದರು.
ಇದೇ ವೇಳೆ ಮುಖ್ಯಕಾರ್ಯನಿರ್ವಹಣಾಧಿಕಾರಿ ಅನುರಾಧ, ಯೋಜನಾ ನಿರ್ದೇಶಕರಾದ ಆರ್.ಶಾಲಿನಿ, ಪುರಸಭೆ ಮುಖ್ಯಾಧಿಕಾರಿ ದೊಡ್ಡಮಲ್ಲಯ್ಯ, ತಹಶಿಲ್ದಾರ್ ಶಿವರಾಜ್, ದೊಡ್ಡಬಳ್ಳಾಪುರ ಉಪವಿಭಾಗಾಧಿಕಾರಿ ಶ್ರೀನಿವಾಸ್, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಪುರಸಭೆ ಸದಸ್ಯರು, ಹಾಗೂ ಸಿಬ್ಬಂದಿ ವರ್ಗದವರಾದ ಕಂದಾಯ ಅಧಿಕಾರಿ ಶಿವಮೂರ್ತಿ, ಕಂದಾಯ ನಿರೀಕ್ಷಕ ಎ.ಮಂಜುನಾಥ್, ದ್ವಿ.ದರ್ಜೆ ಸಹಾಯಕ ಮಂಜಪ್ಪ, ಎಂ.ಆರ್.ಶ್ರೀನಿವಾಸ್ ವ್ಯವಸ್ಥಾಪಕಿ ಸರಸ್ವತಿ, ಜ್ಯೋತಿ, ವಿ.ಮಂಜುನಾಥ್, ಚಂದ್ರಶೇಖರ್, ಬೈರಪ್ಪ, ಹಿರಿಯ ಆರೋಗ್ಯ ನಿರೀಕ್ಷಕಿ ಶ್ರೀದೇವಿ, ದೀಕ್ಷಿತ ಪೌರಕಾರ್ಮಿಕರು ಇದ್ದರು.