ಸುದ್ದಿಮೂಲ ವಾರ್ತೆ
ತುಮಕೂರು, ಅ.29 : ಮನೆಯಲ್ಲಿ ಯಾರೂ ಇಲ್ಲದನ್ನು ತಿಳಿದ ಕಳ್ಳರು ಬಾಗಿಲಿನ ಬೀಗ ಮುರಿದು ಕೈ ಚಳಕ ತೋರಲು ಹೋಗಿ ಸಿಕ್ಕಿ ಬಿದ್ದಿದ್ದಾರೆ.
ಹಾಡಹಗಲೇ ಪೊಲೀಸರ ಮನೆಗೆ ನುಗ್ಗಿ ಚಿನ್ನಾಭರಣವನ್ನೆಲ್ಲಾ ದೋಚುವಾಗಲೇ ಖದೀಮರಿಗೆ ಪೊಲೀಸರು ಲಾಕ್ ಹಾಕಿದ್ದಾರೆ. ತುಮಕೂರಿನ ಶಿರಾ ನಗರದ ವಿದ್ಯಾನಗರದಲ್ಲಿ ಘಟನೆ ನಡೆದಿದೆ.
ಬಡವನಹಳ್ಳಿ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಮಹೇಶ್ ಅವರು ಕುಟುಂಬ ಸಮೇತ ಹೊರಗೆ ಹೋಗಿದ್ದರು. ಕಾರೊಂದರಲ್ಲಿ ಬಂದಿದ್ದ ನಾಲ್ವರು ಖದೀಮರು ಮನೆ ಬಾಗಿಲಿಗೆ ಬೀಗ ಹಾಕಿದ್ದನ್ನೂ ಗಮನಿಸಿದ್ದಾರೆ. ಕೂಡಲೇ ಅಲರ್ಟ್ ಆದ ಅವರು ಕೈಗೆ ಗ್ಲೌಸ್ ಹಾಕಿಕೊಂಡು ಮಾರಕಾಸ್ತ್ರಗಳನ್ನು ಹಿಡಿದು ಬಾಗಿಲ ಬೀಗ ಮುರಿದಿದ್ದಾರೆ. ಮನೆಯೊಳಗೆ ಇಬ್ಬರು ಹೋದರೆ, ಮತ್ತಿಬ್ಬರು ಕಾರಿನೊಳಗೆ ಕುಳಿತು ವಾಚ್ ಮಾಡುತ್ತಿದ್ದರು.
ಆದರೆ ಈ ಖದೀಮರ ಚಲನವಲನ ಗಮನಿಸಿದ ಅಕ್ಕ-ಪಕ್ಕದ ಮನೆಯವರು ಅನುಮಾನಗೊಂಡು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ತಕ್ಷಣವೇ ಸ್ಥಳಕ್ಕಾಗಮಿಸಿದ್ದನ್ನು ಕಂಡು ಮನೆಯ ಹೊರಗೆ ಕಾರಿನಲ್ಲಿ ಕುಳಿತಿದ್ದ ಇಬ್ಬರು ಖದೀಮರು ಪರಾರಿ ಆಗಿದ್ದಾರೆ.
ಇತ್ತ ಮನೆಯೊಳಗೆ ಇನ್ನಿಬ್ಬರು ಇರುವುದನ್ನು ಖಚಿತ ಪಡಿಸಿಕೊಂಡ ಪೊಲೀಸರು ಒಳಗೆ ನುಗ್ಗಿದ್ದಾರೆ. ಚಿನ್ನಾಭರಣವನ್ನೆಲ್ಲ ದೋಚಿಕೊಳ್ಳುತ್ತಿದ್ದ ಖದೀಮರನ್ನು ಹಿಡಿಯಲು ಪೊಲೀಸರು ಮುಂದಾಗಿದ್ದಾರೆ. ಈ ವೇಳೆ ಪೊಲೀಸರ ಮೇಲೆಯೇ ಡ್ರ್ಯಾಗರ್ನಿಂದ ಹಲ್ಲೆಗೆ ಯತ್ನಿಸಿದ್ದಾರೆ. ಶಿರಾ ನಗರ ಪೊಲೀಸ್ ಠಾಣೆಯ ಕ್ರೈಂ ಸಿಬ್ಬಂದಿ ಧರ್ಮೇಶ್ ಮತ್ತು ಖಲೀಲ್ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ. ಆದರೆ ಪೊಲೀಸರು ಸಿಕ್ಕ ಕಳ್ಳರನ್ನು ಸದೆಬಡಿದಿದ್ದಾರೆ.
ಖದೀಮನೊಬ್ಬ ಚಾಕುವಿನಿಂದ ತಾನೇ ಹೊಟ್ಟೆಗೆ ಚುಚ್ಚಿಕೊಂಡು ಹೈಡ್ರಾಮಾ ಮಾಡಿದ್ದಾನೆ. ಸ್ಥಳೀಯರ ಸಹಾಯದೊಂದಿಗೆ ಸೆರೆ ಸಿಕ್ಕ ಇಬ್ಬರು ಖದೀಮರನ್ನು ಹಗ್ಗದಿಂದ ಕಟ್ಟಿ ಹಾಕಿದ್ದಾರೆ. ಬಂಧಿತರು ರಿಯಾದ್ ಮತ್ತು ಖಾಲಿದ್ ಎಂದು ತಿಳಿದು ಬಂದಿದೆ. ಗಾಯಗೊಂಡಿದ್ದ ಪೊಲೀಸ್ ಸಿಬ್ಬಂದಿ ಹಾಗೂ ಆರೋಪಿಗೆ ಶಿರಾ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಶಿರಾ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. ಪರಾರಿ ಆಗಿರುವ ಮತ್ತಿಬ್ಬರು ಖದೀಮರಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.