ಸುದ್ದಿಮೂಲ ವಾರ್ತೆ
ಕಲಬುರಗಿ, ಮೇ.22: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿನ ಕಾಂಗ್ರೆಸ್ ಪಕ್ಷದ ಗೆಲುವು ಕರ್ನಾಟಕ ಜನತೆಯ ಗೆಲುವಾಗಿದೆ. ಹಿಂದಿನ ಭ್ರಷ್ಟ ಸರಕಾರ ತೆಗೆದು ಹಾಕಲು ಜನ ನಿರ್ಧಾ ಕೈಗೊಂಡಿದ್ದರು. ಅದರ ಫಲ ಕಾಂಗ್ರೆಸ್ ಗೆ ಸಿಕ್ಕಿದೆ. ನಾವು ನೀಡಿರುವ ಭರವಸೆ ಈಡೇರಿಸುವುದು ನಮ್ಮ ಸರಕಾರದ ಜವಾಬ್ದಾರಿಯಾಗಿದೆ ಎಂದು ಎಐಸಿಸಿ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಗೆಲುವಿಗೆ ಕಾರಣವಾದ ಗ್ಯಾರೆಂಟಿಗಳನ್ನು ಶೀಘ್ರವೇ ಅನುಷ್ಠಾನಕ್ಕೆ ತರಬೇಕಿದೆ. ಸರಕಾರ ಆ ನಿಟ್ಟಿನಲ್ಲಿ ನಿರ್ಣಯ ಕೈಗೊಂಡಿದೆ. ಸದ್ಯದಲ್ಲೇ ಅನುಷ್ಠಾನಕ್ಕೆ ತಂದು ಜನರಿಗೆ ತಲುಪಿಸಲಿದ್ದೇವೆ. ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರ ಐದು ಗ್ಯಾರೆಂಟಿ ಈಡೇರಿಸಲುವ ಬಗ್ಗೆ ನಿರ್ಣಯ ಕೈಗೊಂಡಿದ್ದು ಸ್ವಾಗತಾರ್ಹವಾಗಿದೆ ಎಂದರು.
ಕಲ್ಯಾಣಕ್ಕೆ ಇನ್ನು ನಾಲ್ಕೈದು ಸಚಿವ ಸ್ಥಾನ:
ಆಡಳಿತಾತ್ಮಕ ಅನುಮೋದನೆಯ ಹಿನ್ನೆಲೆಯಲ್ಲಿ ಕೇವಲ ಎಂಟು ಜನ ಸಚಿವರ ಸರಕಾರ ರಚನೆ ಮಾಡಲಾಗಿದೆ. ಪೂರ್ಣ ಪ್ರಮಾಣದ ಸಚಿವ ಸಂಪುಟ ಶೀಘ್ರವೇ ವಿಸ್ತರಣೆಯಾಗಲಿದ್ದು, ಕಲ್ಯಾಣ ಕರ್ನಾಟಕಕ್ಕೆ ಇನ್ನೂ ನಾಲ್ಕೈದು ಸಚಿವ ಸ್ಥಾನ ಸಿಗಲಿದೆ ಎಂದು ಹೇಳಿದರು.
ಸಾಮಾಜಿಕ ನ್ಯಾಯವನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಜಾತಿವಾರು ಸಚಿವ ಸ್ಥಾನ ನೀಡುವ ಉದ್ದೇಶ ಇರುವುದರಿಂದ ಉತ್ತರ ಕರ್ನಾಟಕ, ಮುಂಬೈ ಕರ್ನಾಟಕ ಭಾಗಗಳಲ್ಲೂ ಕೂಡ ಜಾತಿವಾರು ಪ್ರಾತಿನಿಧ್ಯದ ಆಧಾರದ ಮೇಲೆ ಮತ್ತು ಸಣ್ಣ ಸಣ್ಣ ಸಮುದಾಯಗಳಿಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಸಚಿವ ಸ್ಥಾನಗಳ ಘೋಷಣೆಯಾಗುವ ಸಾಧ್ಯತೆಯಿದೆ ಎಂದರು.
ವಿಧಾನಸಭಾ ಚುನಾವಣೆಯೇ ಬೇರೆ, ಲೋಕಸಭಾ ಚುನಾವಣೆಯೇ ಬೇರೆ. ಆದರೂ, ರಾಜ್ಯದ ಜನರ ಈ ತೀರ್ಮಾನ ನೋಡಿದರೆ, ರಾಜ್ಯದಲ್ಲಿ ಎಂ.ಪಿ ಚುನಾವಣೆಯಲ್ಲೂ ನಮಗೆ ಬಹುಮತ ಬರುತ್ತೆ ಎಂಬ ವಿಶ್ವಾಸವಿದೆ. ದೇಶಾದ್ಯಂತ ಬಹುಮತ ಪಡೆಯುವ ದಿಕ್ಕಿನಲ್ಲಿ ಪ್ರಯತ್ನ ನಡೆಯುತ್ತಿದೆ. ಈ ನಿಟ್ಟಿನಲ್ಲಿ ದೆಹಲಿಯಲ್ಲಿ ಪ್ರತಿಪಕ್ಷಗಳ ಸಂಘಟನೆಗಾಗಿ ಸಭೆ ಕರೆದಿದ್ದೇನೆ. ಸಮಾನ ಮನಸ್ಕರನ್ನ ಕರೆಸಿ ಮಾತನಾಡುತ್ತೇವೆ. ವಿಪಕ್ಷಗಳಿಗೆ ಯಶಸ್ಸು ಸಿಗುತ್ತೇ ಎನ್ನುವ ನಂಬಿಕೆ ಇದೆ ಎಂದು ಹೇಳಿದರು.
ಸಂಸತ್ ಭವನ ಉದ್ಘಾಟನೆ ರಾಷ್ಟ್ರಪತಿಯಿಂದ ಆಗಬೇಕು :
ನೂತನ ಸಂಸತ್ ಭವನ ಉದ್ಘಾಟನೆಯನ್ನ ರಾಷ್ಟ್ರದ ಪ್ರಥಮ ಪ್ರಜೆ ರಾಷ್ಟ್ರಪತಿಗಳಿಂದ ಆಗಬೇಕು. ಆದರೆ, ಉದ್ಘಾಟನೆಗೆ ರಾಷ್ಟ್ರಪತಿಗಳನ್ನು ಕರೆಸದೆ, ಪ್ರಧಾನಿ ಮೋದಿ ಅವರೇ ಮಾಡುತ್ತಿರುವುದು ಎಷ್ಟು ಸರಿ. ಇದು ರಾಷ್ಟ್ರದ ಪ್ರತಿಷ್ಠೆಯ ಪ್ರೆಶ್ನೆಯಾಗಿದೆ ಎಂದರು.
ಅಡಿಗಲ್ಲು ಹಾಕಲೂ ಮೋದಿ, ಉದ್ಘಾಟನೆಗೂ ಮೋದಿ, ಸಿಂಹ ಅಳವಡಿಕೆಗೂ ಮೋದಿ, ಎಲ್ಲದಕ್ಕೂ ಮೋದಿನೇ ಬೇಕಾ? ಸಂಸತ್ ಭವನ ಉದ್ಘಾಟನೆಗೆ ರಾಷ್ಟ್ರಪತಿ ಅವರಿಗೆ ಕೊಡಬಾರದಾ? ಹಿಂದುಳಿದವರಿಗೆ ರಾಷ್ಟ್ರಪತಿ ಮಾಡಿದ್ದಿವಿ ಅಂತಿರಿ ಆದರೆ, ಇಂತದ್ದಕ್ಕೆಲ್ಲಾ ನೀವೆ ಮುಂದಾಗುತ್ತೀರಾ. ಬರೀ ತೋರಿಸಲಿಕ್ಕೆ ಮಾಡಿದರೆ ಏನ್ ಉಪಯೋಗ ? ಎಂದು ಮಲ್ಲಿಕಾರ್ಜುನ ಖರ್ಗೆ ಅವರು ವಾಗ್ದಾಳಿ ನಡೆಸಿದರು. ಡಿಸಿಸಿ ಅಧ್ಯಕ್ಷ ಜಗದೇವ ಗುತ್ತೇದಾರ, ರಾಜಗೋಪಾಲರೆಡ್ಡಿ ಮುದಿರಾಜ್ ಇದ್ದರು.