ಸುದ್ದಿಮೂಲ ವಾರ್ತೆ
ಬೆಂಗಳೂರು, ಏ.8: ಕನ್ನಡಿಗರ ನೆಚ್ಚಿನ ನಟ ಕಿಚ್ಚ ಸುದೀಪ್ ಅವರ ನಿಲುವನ್ನು ಪ್ರಶ್ನಿಸುವ ಮತ್ತು ಅವರನ್ನು ಅವಮಾನಿಸಿದ ಕಾಂಗ್ರೆಸ್- ಜೆಡಿಎಸ್ ಪಕ್ಷಕ್ಕೆ ಪ್ರಜ್ಞಾವಂತ ಜನತೆ ಈ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯ ಹೇಳಿದರು.
ಮಲ್ಲೇಶ್ವರದ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್, ಜೆಡಿಎಸ್ ಪಕ್ಷದ ಮುಖಂಡರು ತಮ್ಮ ಮೂಗಿನ ನೇರಕ್ಕೆ ಮಾತನಾಡುತ್ತಾರೆ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ತಮಗೆ ಬೇಕಾದಂತೆ ವಿಶ್ಲೇಷಿಸಿ ಬಳಸುತ್ತಾರೆ ಎಂದು ಟೀಕಿಸಿದರು.
ಕಿಚ್ಚ ಸುದೀಪ್ ಅವರು ಪ್ರಜಾಸತ್ತೆಯ ಸ್ವಾತಂತ್ರ್ಯದ ಆಧಾರದಲ್ಲಿ ಬಸವರಾಜ ಬೊಮ್ಮಾಯಿ ಅವರನ್ನು ಮತ್ತು ಬಿಜೆಪಿ ಬೆಂಬಲಿಸುವ ನಿರ್ಣಯ ತೆಗೆದುಕೊಂಡಿದ್ದಾರೆ. ಆದರೆ, ಇವೆರಡು ಪಕ್ಷಗಳು ಕಿಚ್ಚ ಸುದೀಪ್ ವಿರುದ್ಧ ಟೀಕೆ ಮಾಡುತ್ತಿವೆ. ವಿವಿಧ ಏಜೆನ್ಸಿಗಳಿಂದ ತನಿಖೆ ತಪ್ಪಿಸಿಕೊಳ್ಳಲು ಹೀಗೆ ಮಾಡಿದ್ದಾಗಿ ಟೀಕಿಸುತ್ತಿವೆ ಎಂದು ಆಕ್ಷೇಪಿಸಿದರು.
ಕಾಂಗ್ರೆಸ್ ಸಮರ್ಥನೆ ಮಾಡುವವರಾದರೆ ಅದು ಪ್ರಜಾಸತ್ತೆಗೆ ಪೂರಕ ಎನ್ನುವ ನಿಲುವು ಆ ಪಕ್ಷದ ಮುಖಂಡರದು. ಬಿಜೆಪಿಯಲ್ಲಿ ಪ್ರಚಾರಕ್ಕೆ ಹೊರಗಿನ ಅಗತ್ಯವಿದೆ ಎಂದು ಆಕ್ಷೇಪಿಸಿದ್ದಾರೆ. ಇದು ಸರಿಯಲ್ಲ ಎಂದು ತಿಳಿಸಿದರು.
ರಾಹುಲ್ ಗಾಂಧಿ ವಿದೇಶದಲ್ಲಿ ಭಾರತದ ಪ್ರಜಾಪ್ರಭುತ್ವದ ವಿರುದ್ಧ ಮಾತನಾಡಿದರೆ ಅದು ಅಭಿವ್ಯಕ್ತಿ ಸ್ವಾತಂತ್ರ್ಯ ಎಂದು ಕಾಂಗ್ರೆಸ್ ಹೇಳುತ್ತದೆ. ಆದರೆ, ಕಿಚ್ಚ ಸುದೀಪ್ ಅವರಂಥ ಸಿನಿತಾರೆ ತಮ್ಮ ಬೆಂಬಲವನ್ನು ಯಾರಿಗೆ ಕೊಡಬೇಕೆಂದು ಆಯ್ಕೆ ಮಾಡುವುದು ಅಭಿವ್ಯಕ್ತಿ ಸ್ವಾತಂತ್ರ್ಯ ಅಲ್ಲವೇ? ಎಂದು ಕೇಳಿದರು. ಬಿಜೆಪಿ ರಾಷ್ಟ್ರಪತಿ ಸ್ಥಾನವನ್ನು ಬುಡುಕಟ್ಟು ಸಮುದಾಯಕ್ಕೆ ಕೊಟ್ಟಿದೆ ಎಂದು ನೆನಪಿಸಿದರು.
ಡಿ.ಕೆ.ಶಿವಕುಮಾರ್, ಕಿಚ್ಚ ಸುದೀಪ್ ಅವರನ್ನು ಭೇಟಿ ಮಾಡಿ ತಮಗೆ ಬೆಂಬಲ ಕೊಡಲು ಕೋರಿದ್ದರು ಎಂಬ ಮಾಹಿತಿ ಇದೆ ಎಂದ ಅವರು, ಕಾಂಗ್ರೆಸ್ ಎಂದರೆ ಭ್ರಷ್ಟಾಚಾರಕ್ಕೆ ಮತ್ತು ಕುಟುಂಬ ರಾಜಕೀಯಕ್ಕೆ ಸ್ಪಷ್ಟ ಉದಾಹರಣೆ ಎಂದು ತಿಳಿಸಿದರು.
ಈ ಚುನಾವಣಾ ಸಮರ ರಾಷ್ಟ್ರಹಿತ ವಿಚಾರಧಾರೆಯ ಆಧಾರದಲ್ಲಿ ಮುಂದುವರಿಯಲಿದೆ ಎಂದು ಅವರು ತಿಳಿಸಿದರು. ರಾಜ್ಯ ಮುಖ್ಯ ವಕ್ತಾರ ಎಂ.ಜಿ. ಮಹೇಶ್ ಮತ್ತು ರಾಜ್ಯ ಹಾಲು ಉತ್ಪಾದಕರ ಪ್ರಕೋಷ್ಠದ ರಾಜ್ಯ ಸಂಚಾಲಕ ವೆಂಕಟೇಶ್ ಅವರು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.