ಸುದ್ದಿಮೂಲ ವಾರ್ತೆ
ತುಮಕೂರು, ಅ.13 : ಕಿತ್ತೂರು ರಾಣಿ ಚೆನ್ನಮ್ಮಳ ಹೋರಾಟ ಇಂದಿನ ಮಹಿಳಾ ಸಬಲೀಕರಣಕ್ಕೆ ಸ್ಫೂರ್ತಿ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಕೆ.ಎಸ್. ಸಿದ್ಧಲಿಂಗಪ್ಪ ತಿಳಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಂಗಳೂರಿನಲ್ಲಿ ಚಾಲನೆ ನೀಡಿದ್ದ ಕಿತ್ತೂರು ಉತ್ಸವ ವೀರಜ್ಯೋತಿ ಯಾತ್ರೆಯನ್ನು ತುಮಕೂರಿನಲ್ಲಿ ಜಿಲ್ಲಾಡಳಿತದಿಂದ ಭವ್ಯವಾಗಿ ಸ್ವಾಗತಿಸಿದ ನಂತರ ಮಾತನಾಡಿದ ಅವರು, ಚೆನ್ನಮ್ಮ ಬ್ರಿಟೀಷರ ವಿರುದ್ಧ ಕರನಿರಾಕರಣೆ ಚಳವಳಿ ಮಾಡಿದರಲ್ಲದೆ, ಸಾಮ್ರಾಜ್ಯ ಸಂರಕ್ಷಣೆಗೆ ಹೋರಾಟ ಮಾಡಿದ ಕೆಚ್ಚೆದೆಯ ಮಹಿಳೆ. ಇಂದಿಗೂ ಕೂಡ ಚೆನ್ನಮ್ಮ ಅವರ ಧೈರ್ಯ ಮತ್ತು ಸಾಹಸದ ಬಗ್ಗೆ ಶಾಲಾ-ಕಾಲೇಜಿನ ಪಠ್ಯದಲ್ಲಿ ಕಾಣಬಹುದು. ಚೆನ್ನಮ್ಮ ಅವರ ಹೋರಾಟ ನಮ್ಮೆಲ್ಲರಿಗೂ ದಾರಿ ದೀಪವಾಗಿದೆ ಎಂದು ತಿಳಿಸಿದರು.
ಬೆಳಗಾವಿಯ ಕಿತ್ತೂರಿನಲ್ಲಿ ಅ. 23, 24 ಹಾಗೂ 25ರಂದು ಹಮ್ಮಿಕೊಂಡಿರುವ ಮೂರು ದಿನಗಳ ಕಿತ್ತೂರು ಉತ್ಸವವು ನಾಡು-ನುಡಿಯನ್ನು ಬಿಂಬಿಸುವ, ಸ್ವಾತಂತ್ರ್ಯ ಕಹಳೆಯನ್ನು ನೆನಪಿಸುವ ಕಾರ್ಯಕ್ರಮವಾಗಬೇಕು ಎಂದು ಆಶಿಸಿದರು.
ತಹಶೀಲ್ದಾರ್ ಸಿದ್ದೇಶ್ ಮಾತನಾಡಿ, ಬ್ರಿಟೀಷರ ವಿರುದ್ಧ ಹೋರಾಟ ಮಾಡುವ ಮೂಲಕ ಸ್ವಾತಂತ್ರ್ಯಕ್ಕೆ ಮುನ್ನುಡಿ ಬರೆದ ವೀರ ಮಹಿಳೆ ಎಂದು ಕಿತ್ತೂರು ರಾಣಿ ಚೆನ್ನಮ್ಮ ಸಾಹಸದ ಬಗ್ಗೆ ಬಣ್ಣಿಸಿದರು.
ಕಿತ್ತೂರು ಉತ್ಸವ ವೀರಜ್ಯೋತಿ ಯಾತ್ರೆಯನ್ನು ನಗರದ ಕನ್ನಡ ಭವನದ ಬಳಿ ಕಲಾ ತಂಡಗಳೊಂದಿಗೆ ಮೆರವಣಿಗೆ ಮಾಡುವ ಮೂಲಕ ಚಿತ್ರದುರ್ಗ ಜಿಲ್ಲೆಗೆ ಬೀಳ್ಕೊಡಲಾಯಿತು.
ಕಾರ್ಯಕ್ರಮದಲ್ಲಿ ರೇಷ್ಮೆ ಇಲಾಖೆಯ ಉಪನಿರ್ದೇಶಕ ವೈ.ಕೆ.ಬಾಲಕೃಷ್ಣಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಕುಮಾರ್, ಸುರೇಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.