ಸುದ್ದಿಮೂಲ ವಾರ್ತೆ
ಯಾದಗಿರಿ,ಜೂ.17: ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ (ಕೆಕೆಆರ್ಡಿಬಿ) ನಿರ್ವಹಿಸಲಾಗುತ್ತಿರುವ ಕಾರ್ಮಗಾರಿಗಳ ನಿರ್ವಹಣೆಯಲ್ಲಿ ಕಾಲವಿಳಂಬ ಮಾಡದೇ ಗುಣಮಟ್ಟದ ಕಾಮಗಾರಿಗಳನ್ನು ನಿರ್ಮಿಸಲು ಜಿಲ್ಲೆಯ ಎಲ್ಲಾ ಅನುಷ್ಠಾನ ಅಧಿಕಾರಿಗಳಿಗೆ ಕೆಕೆಆರ್ಡಿಬಿ ಕಾರ್ಯದರ್ಶಿ ಅನಿರುದ್ದ್ ಶ್ರವಣ್ ಅವರು ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ ಅನುಷ್ಠಾನಗೊಳ್ಳುತ್ತಿರುವ ಜಿಲ್ಲೆಯ ಇಲಾಖಾವಾರು ಪ್ರಗತಿ ಪರಿಶೀಲನಾ ಸಭೆ ನಡೆಸಿ ಅವರು ಮಾತನಾಡಿದರು.
ಗ್ರಾಮೀಣ ಭಾಗದಲ್ಲಿನ ಕಾಮಗಾರಿಗಳಿಗೆ ಕೆಲವರು ಕಾರಣವಿಲ್ಲದೇ ಅಡ್ಡಿಪಡಿಸಿ , ಕಾಮಗಾರಿ ವಿಳಂಬ ಮಾಡುತ್ತಿದ್ದರೆ ಸಂಬಂಧಿಸಿದ ಮೇಲಾಧಿಕಾರಿಗಳ ಗಮನಕ್ಕೆ ತರಬೇಕು ಹಾಗೂ ಅವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕಟ್ಟುನಿಟ್ಟಾಗಿ ಅವರು ಸೂಚಿಸಿದರು.
ಜಿಲ್ಲೆಯಲ್ಲಿ ಕೆಕೆಆರ್ಡಿಬಿ ಅನುದಾನದಡಿಯಲ್ಲಿ ವಿವಿಧ ಇಲಾಖೆಗಳ ವತಿಯಿಂದ ಅನುಷ್ಠಾನಗೊಳ್ಳುತ್ತಿರುವ ಆಯಾ ಇಲಾಖೆಗಳಿಗೆ ರಾಜ್ಯದಿಂದ ನಿಗದಿಯಂತೆ ಬಿಡುಗಡೆಯಾಗುವ ಅನುದಾನದಲ್ಲಿ ನಿಯಮಿತ ಕಾಮಗಾರಿಗಳನ್ನು ನಡೆಸಬೇಕು. ಅದೇ ರೀತಿ ಅಗತ್ಯ ವಸ್ತುಗಳನ್ನು ಪೂರೈಸಿಕೊಳ್ಳಬೇಕು ಎಂದರು.
2021-22 ಹಾಗೂ 22-23 ನೇ ಸಾಲಿನಲ್ಲಿ ಪ್ರಾರಂಭಿಸಬೇಕಾದ ಕಾಮಗಾರಿಗಳನ್ನು ಪ್ರಾರಂಭಿಸಿದ ಮತ್ತು ಪ್ರಗತಿಯಲ್ಲಿರುವ ಕಾಮಗಾರಿಗಳನ್ನು ಪೂರ್ಣಗೊಳಿಸಲು ಆಯಾ ಏಜೆನ್ಸಿ, ಇಲಾಖೆಗಳು ಹೆಚ್ಚಿನ ಗಮನಹರಿಸಬೇಕು. ಪ್ರಸಕ್ತ ವರ್ಷದ ಕಾಮಗಾರಿಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
2021-22 ನೇ ಸಾಲಿನ ಪಿಡಬ್ಲ್ಯೂಡಿ ಮತ್ತು ಪಿ ಆರ್ ಇ ಡಿ ಯ ಇಲಾಖೆಗಳ ಕ್ರಮವಾಗಿ ಪ್ರಾರಂಭಿಸಬೇಕಾದ ಕಾಮಗಾರಿಗಳನ್ನು ತಕ್ಷಣ ಪ್ರಾರಂಭಿಸಿ ಮುಗಿಸಬೇಕೆಂದು ಕಟ್ಟುನಿಟ್ಟಾಗಿ ಸೂಚಿಸಿದರು.
ಜಿಲ್ಲೆಯಲ್ಲಿ ರಕ್ತನಿಧಿ ಕೋಶ ಸ್ಥಾಪನೆ ಗೆ ಪ್ರಸ್ತಾವನೆ ಸಲ್ಲಿಸಿ ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಅವರು ಸೂಚಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಸ್ನೇಹಲ್ ಆರ್, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಗರಿಮಾ ಪನ್ವಾರ, ಅಪರ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೊಳ, ಪ್ರಾದೇಶಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಾಜೋಲ್ ಪಾಟೀಲ್ ಹಾಗೂ ಇನ್ನಿತರ ಇಲಾಖಾವಾರು ಅಧಿಕಾರಿಗಳು ಉಪಸ್ಥಿತರಿದ್ದರು