ಸುದ್ದಿಮೂಲ ವಾರ್ತೆ
ಬೆಂಗಳೂರು, ಜು 30 : ತಿರುಪತಿ ತಿಮ್ಮಪ್ಪನಿಗೂ ಕೆಎಂಎಫ್ ನಂದಿನಿ ತುಪ್ಪಕ್ಕೂ ಅವಿನಾಭಾವ ಸಂಬಂಧ. ತಿಮ್ಮಪ್ಪನ ಲಡ್ಡು ಪ್ರಸಾದದ ಸ್ವಾದಿಷ್ಟ ರುಚಿಗೆ ನಂದಿನಿ ತುಪ್ಪವನ್ನೇ ಬಳಸಲಾಗುತ್ತಿತ್ತು. ಆದರೆ, ಇನ್ಮುಂದೆ ನಂದಿನಿ ತುಪ್ಪದ ಲಡ್ಡು ಸಿಗುವುದಿಲ್ಲ.
ಇನ್ಮೇಲೆ ತಿರುಪತಿ ಲಡ್ಡು ಪ್ರಸಾದದಲ್ಲಿ ನಂದಿನಿ ತುಪ್ಪ ಇರಲ್ಲ. ಸುಮಾರು 20 ವರ್ಷದ ಬಳಿಕ ತಿರುಪತಿ ತಿಮ್ಮಪ್ಪ ಹಾಗೂ ನಂದಿನಿ ತುಪ್ಪದ ಸಂಬಂಧ ಕಡಿತವಾಗಿದೆ. ತಿಮ್ಮಪ್ಪನ ಲಡ್ಡು ಪ್ರಸಾದಕ್ಕೆ ರಾಜ್ಯದಿಂದ ಸರಬರಾಜು ಆಗುತ್ತಿದ್ದ ನಂದಿನಿ ತುಪ್ಪ ಸರಬರಾಜು ಇರುವುದಿಲ್ಲ ಎಂದು ಕೆಎಂಎಫ್ ಅಧ್ಯಕ್ಷ ಭೀಮಾ ನಾಯಕ್ ಮಾಹಿತಿ ನೀಡಿದ್ದಾರೆ.
ತಿರುಪತಿ ಲಡ್ಡು ಪ್ರಸಾದ ಎಂದರೆ ದೇವರನ್ನು ನೋಡಿದಷ್ಟೇ ಪುಣ್ಯ ಎಂದು ಸ್ವೀಕರಿಸುತ್ತಾರೆ. ಲಡ್ಡು ಪ್ರಸಾದಕ್ಕೆ ಕಳೆದ 20 ವರ್ಷದಿಂದ ನಂದಿನಿ ತುಪ್ಪ ಬಳಸಲಾಗುತ್ತಿತ್ತು. ತಿರುಮಲಕ್ಕೆ ಕೆಎಂಎಫ್ನಿಂದ ತಾಜಾ ತುಪ್ಪ ಸರಬರಾಜು ಆಗುತ್ತಿತ್ತು.
ತಿರುಪತಿಗೆ 6 ತಿಂಗಳಿಗೆ 14 ಲಕ್ಷ ಕೆಜಿಯಷ್ಟು ತುಪ್ಪ ಕೊಡಬೇಕು. ಇಷ್ಟು ದೇವಸ್ಥಾನಕ್ಕೆಂದು ರಿಯಾಯಿತಿ ದರದಲ್ಲಿ ತುಪ್ಪ ಪೂರೈಕೆ ಮಾಡಲಾಗುತ್ತಿತ್ತು. ಆದರೆ, ಈ ಬಾರಿ ಕೆಎಂಎಫ್ ರಿಯಾಯಿತಿ ದರದಲ್ಲಿ ನಂದಿನಿ ತುಪ್ಪ ನೀಡುವ ತಿರುಪತಿ ಟೆಂಡರ್ ಅನ್ನು ಕೈ ಬಿಟ್ಟಿದೆ. ಕಡಿಮೆ ಬೆಲೆಗೆ ತುಪ್ಪ ಕೊಡಲಾಗುವುದಿಲ್ಲ ಎಂದು ಟೆಂಡರ್ ನಿಲ್ಲಿಸಲಾಗಿದೆ.
ಕರ್ನಾಟಕದಲ್ಲಿ ಸದ್ಯ ಹಾಲಿನ ಕೊರತೆ ಹೆಚ್ಚಾಗುತ್ತಲೇ ಇದೆ. ಹಾಲಿನ ಕೊರತೆಯಿಂದ ಉಪ ಉತ್ಪನ್ನಗಳ ದರ ಏರಿಕೆ ಮಾಡುವುದು ಅನಿವಾರ್ಯ. ಇದರಿಂದಾಗಿ ನಂದಿನಿ ತುಪ್ಪದ ದರವೂ ಹೆಚ್ಚಳವಾಗಿದೆ. ತಿರುಪತಿ ದೇವಸ್ಥಾನಕ್ಕೆ ರಿಯಾಯಿತಿ ದರದಲ್ಲಿ ತುಪ್ಪ ಪೂರೈಕೆ ಮಾಡೋದಕ್ಕೆ ಒಪ್ಪಿಕೊಂಡಿದ್ದ ಕೆಎಂಎಫ್ ಈಗಿನ ಪರಿಸ್ಥಿತಿಯಲ್ಲಿ ರಿಯಾಯಿತಿ ದರದಲ್ಲಿ ಕೊಟ್ರೆ ಲಾಸ್ ಆಗುತ್ತೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಕಡಿಮೆ ಬೆಲೆಗೆ ನಂದಿನಿ ತುಪ್ಪ ಮಾರಾಟ ಮಾಡದಿರಲು ಕೆಎಂಎಫ್ ನಿರ್ಧಾರ ಮಾಡಿದೆ.