ಸುದ್ದಿಮೂಲ ವಾರ್ತೆ
ಚಿಕ್ಕಬಳ್ಳಾಪುರ,ಅ.28 : ಮಹರ್ಷಿ ವಾಲ್ಮೀಕಿ ಅಪ್ಪಟ ಜ್ಞಾನವಂತ, ಸುಸಂಸ್ಕೃತ, ಸಂಸ್ಕಾರವಂತ. ಹಾಡಿಗಳಲ್ಲಿ ಬೆಳೆದು ಬದುಕಿದ್ದರೂ ಇಡೀ ಜಗತ್ತಿಗೆ ತಾವು ಬದುಕಿದಂತೆಯೇ ಬದುಕಬೇಕು ಎಂಬುದನ್ನು ಹೇಳುತ್ತಲೇ ಆರ್ಯ ಜನಾಂಗದ ಆದರ್ಶಗಳನ್ನು ತಮ್ಮ ಮಹಾಕಾವ್ಯದ ಮೂಲಕವೇ ಸಾರಿ ಹೇಳಿದವರು ವಾಲ್ಮೀಕಿ ಎಂದು ಉನ್ನತ ಶಿಕ್ಷಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ. ಸುಧಾಕರ್ ತಿಳಿಸಿದರು.
ನಗರದ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಶನಿವಾರ ಆಯೋಜಿಸಿದ್ದಮಹರ್ಷಿ ವಾಲ್ಮೀಕಿ ಜಯಂತಿಯ ಅಂಗವಾಗಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ರತ್ನಾಕರನಿಂದ ಮಹರ್ಷಿ ವಾಲ್ಮೀಕಿಯಾಗಿ ಹಿಂದುಗಳ ಪವಿತ್ರ ಗ್ರಂಥ ರಾಮಾಯಣ ರಚಿಸಿದವರು. ಈ ಗ್ರಂಥದಲ್ಲಿ ಅವರ ವ್ಯಕ್ತಿತ್ವ , ಜ್ಞಾನ, ದಾರ್ಶನಿಕರಾಗಿಯೂ, ಸಮಾಜ ಸುಧಾರಕರಾಗಿ ಕಾಣಬಹುದು. ಕುಟುಂಬದಲ್ಲಿ ಹೇಗೆ ಇರಬೇಕು ಎಂಬುದನ್ನು ತನ್ನ ಮಹಾಕಾವ್ಯ. ಮಹಾಕಾವ್ಯಗಳನ್ನು ಓದುವ ಮೂಲಕ ಮಹರ್ಷಿ ವಾಲ್ಮೀಕಿಯಾಗಲು ಪ್ರಯತ್ನಿಸಬೇಕು ಎಂದರು.
ಶಾಸಕ ಪ್ರದೀಪ್ ಈಶ್ವರ್ ಮಾತನಾಡಿ, ಈ ಸಮುದಾಯದ ಮಕ್ಕಳು ಶೈಕ್ಷಣಿಕವಾಗಿ ಬೆಳೆಯಬೇಕು. ಇವರು ಶೈಕ್ಷಣಿಕವಾಗಿ ಬೆಳೆಯಲು ನನ್ನ ವೈಯುಕ್ತಿಕ ಸಹಕಾರದೊಂದಿಗೆ ಉನ್ನತ ಶಿಕ್ಷಣ ಮಾಡಲು ಬಯಸುವ ವಿದ್ಯಾರ್ಥಿಗಳಿಗೆ ಅಂದರೆ ವೈದ್ಯಕೀಯ ಶಿಕ್ಷಣ ಪಡೆಯಲು ಪ್ರೋತ್ಸಾಹ ನೀಡುತ್ತೇನೆ ಎಂದರು.
ಈ ವೇಳೆ ಕಳೆದ ಸಾಲಿನ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಿ ಬಹುಮಾನ ವಿತರಿಸಲಾಯಿತು.
ನಂತರ ವಾಲ್ಮೀಕಿ ಅಭಿವೃದ್ಧಿ ನಿಗಮದ ವತಿಯಿಂದ ವಿವಿಧ ಯೋಜನೆಗಳನ್ನು ಪಡೆದ ಫಲಾನುಭವಿಗಳಿಗೆ ಹಾಗೂ ಮಹಿಳಾ ಸ್ವಸಹಾಯ ಸಂಘದ ಮಹಿಳೆಯರಿಗೆ ಸಹಾಯಧನ ಸೌಲಭ್ಯದ ಚೆಕ್ ಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿಲ್.ನಾಗೇಶ್, ಅಪರ ಜಿಲ್ಲಾಧಿಕಾರಿ ಡಾ.ಎನ್.ತಿಪ್ಪೇಸ್ವಾಮಿ, ಉಪವಿಭಾದಾಧಿಕಾರಿ ಡಿ.ಹೆಚ್.ಅಶ್ವಿನ್, ತಹಸೀಲ್ದಾರ್ ಅನಿಲ್, ತಾಲ್ಲೂಕು ಕಾರ್ಯನಿರ್ವಾಹಕಾಧಿಕಾರಿ ಮಂಜುನಾಥ್, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಪಾಂಡುರಂಗ, ಸಮುದಾಯದ ಮುಖಂಡರಾದ ಕೆ.ವಿ.ಗವಿರಾಯಪ್ಪ, ನರಸಿಂಹರಾಜು, ಕೆ.ಟಿ.ನಾರಾಯಣಸ್ವಾಮಿ ಉಪಸ್ಥಿತರಿದ್ದರು.