ಸುದ್ದಿಮೂಲ ವಾರ್ತೆ
ಆನೇಕಲ್,ಅ.28:ಮನುಷ್ಯನ ಹುಟ್ಟಿನಿಂದ ಅವನ ಜಾತಿಯನ್ನು ಅಳೆಯಲು ಸಾಧ್ಯವಿಲ್ಲ ಎಂದು ಗ್ರಾ. ಪಂ. ಸದಸ್ಯ ಶುಭಾನಂದ ಅಭಿಪ್ರಾಯಪಟ್ಟರು.
ಇಂಡ್ಲವಾಡಿ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತಿಯಲ್ಲಿ ಮಾತನಾಡಿದ ಅವರು, ವಾಲ್ಮೀಕಿ ಮಹಾಋಷಿಯಾಗಿ ಮಹಾಕವಿಯಾಗಿ ಮಾನವ ಕುಲಕ್ಕೆ ಬೆಳಕನ್ನು ಚೆಲ್ಲಿದ್ದಾರೆ. ವ್ಯಕ್ತಿಗೆ ಯಾವ ವಯಸ್ಸಿನಲ್ಲಾದರೂ ಜ್ಞಾನವನ್ನು ಗಳಿಸಲು ಸಾಧ್ಯವಿದೆ ದಕ್ಕಿಸಿಕೊಳ್ಳುವ ಇರಾದೆ ಮಾತ್ರ ಮನುಷ್ಯನಿಗೆ ಬಿಟ್ಟದ್ದು. ಪಡೆದುಕೊಂಡ ಜ್ಞಾನವನ್ನು ಸಮಾಜಕ್ಕೆ ಯಾರು ಕೊಟ್ಟು ಹೋಗುತ್ತಾರೋ ಅವರೆಲ್ಲರೂ ಮಹಾಪುರುಷರಾಗಲಿಕ್ಕೆ ಸಾಧ್ಯವಿದೆ ಇದಕ್ಕೆ ವಾಲ್ಮೀಕಿ ಅವರೇ ಸಾಕ್ಷಿ ಎಂದು ತಿಳಿಸಿದರು.
ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಬೆಟ್ಟಪ್ಪ ಮಾತನಾಡಿ, ವಾಲ್ಮೀಕಿ ಅವರ ಆದರ್ಶಗಳು ಪ್ರತಿಯೊಬ್ಬ ವ್ಯಕ್ತಿಯೂ ಅಳವಡಿಸಿಕೊಂಡರೆ ಉತ್ತಮ ಸಮಾಜವನ್ನು ನಿರ್ಮಾಣ ಮಾಡಬಹುದಾಗಿದೆ. ವಾಲ್ಮೀಕಿ ಜನಿಸಿ ಹಲವಾರು ಶತಮಾನಗಳಾದರೂ ಅವರ ತತ್ವಗಳು ಇಂದಿಗೂ ಸಕಲ ಜೀವಕೋಟಿಗೆ ಅಗತ್ಯವಾಗಿದೆ. ರಾಮನನ್ನು ಜಗತ್ತಿಗೆ ಪರಿಚಯ ಮಾಡಿಕೊಟ್ಟ ವಾಲ್ಮೀಕಿಯ ದಿವ್ಯ ದೃಷ್ಟಿ ಎಲ್ಲರಿಗೂ ಲಭಿಸುವುದಿಲ್ಲ. ಇಂತಹ ಮಹಾನ್ ವ್ಯಕ್ತಿಗಳು ಕಾಲಕಾಲಕ್ಕೂ ಹುಟ್ಟಿ ಸಮಾಜವನ್ನು ತಹಬದಿಗೆ ತರುತ್ತಿದ್ದಾರೆ ಎಂದು ಸೂಚ್ಯವಾಗಿ ತಿಳಿಸಿದರು.
ಪಂಚಾಯತಿ ಅಧ್ಯಕ್ಷೆ ರತ್ನಮ್ಮ ಅಶ್ವತಪ್ಪ ಮಾತನಾಡಿ, ಮಹಾನ್ ವ್ಯಕ್ತಿಗಳಿಗೆ ಜಾತಿಯ ಲೇಪನವನ್ನು ಹಚ್ಚುತ್ತಿರುವುದು ದುರಾದೃಷ್ಟ. ಇಂದು ಪ್ರತಿಯೊಬ್ಬ ಸಾಧಕನಿಗೂ, ಜ್ಞಾನಿಗಳಿಗೂ ಜಾತಿ ಸಮುದಾಯಗಳ ಸರಪಳಿಗಳನ್ನು ಕಟ್ಟಿ ಬೀದಿಯಲ್ಲಿ ಪ್ರತಿಮೆಗಳನ್ನಾಗಿಸಿದ್ದೇವೆ. ಇದು ಬಹಳ ನೋವಿನ ಸಂಗತಿಯಾಗಿದೆ ಎಂದು ಹೇಳಿದರು.
ಯುವ ಮುಖಂಡರಾದ ಚಿಕ್ಕನಹಳ್ಳಿ ಈರಣ್ಣ ಮಾತನಾಡಿ, ಸಂಸಾರ ಸಾಗಿಸಲು ದರೋಡೆ ವೃತ್ತಿಯನ್ನು ಮಾಡುತ್ತಿದ್ದ ವಾಲ್ಮೀಕಿ ರವರನ್ನು ಪರಿವರ್ತಿಸಿದ ತ್ರಿಕಾಲ ಜ್ಞಾನಿ ನಾರದ ಮಹರ್ಷಿಗಳು ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರಾದ ಆದೂರು ಪ್ರಕಾಶ್ ನಾಗಯ್ಯನದೊಡ್ಡಿ, ಮುನಿರಾಜು, ಮಹೇಶ್, ನಲ್ಲಯ್ಯನ ದೊಡ್ಡಿ ಮಾದೇಶ್, ಬಿಲ್ ಕಲೆಕ್ಟರ್ ಶ್ರೀನಿವಾಸ್, ಶಿವು ಸೇರಿದಂತೆ ಹಲವರು ಉಪಸ್ಥಿತರಿದ್ದರು.