ಸುದ್ದಿಮೂಲ ವಾರ್ತೆ
ಬೆಂಗಳೂರು, ಸೆ.1: ಬೆಂಗಳೂರು ಹೊರವಲಯದಲ್ಲಿ ಸುಮಾರು 2000 ಎಕರೆ ಪ್ರದೇಶದಲ್ಲಿ ‘ಜ್ಞಾನ, ಆರೋಗ್ಯ, ಆವಿಷ್ಕಾರ ಮತ್ತು ಸಂಶೋಧನಾ’ ಸಿಟಿ ಸ್ಥಾಪಿಸುವ ಉದ್ದೇಶವಿದ್ದು, ಯೋಜನೆಗೆ ಶೀಘ್ರದಲ್ಲೇ ಚಾಲನೆ ನೀಡಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಎಂ.ಬಿ. ಪಾಟೀಲ್ ಹೇಳಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ 100 ದಿನ ಪೂರೈಸಿದ ಸಂದರ್ಭದಲ್ಲಿ ಇಲಾಖೆಯ ಸಾಧನೆಗಳು, ಕೈಗೊಂಡಿರುವ ಪ್ರಮುಖ ಕ್ರಮಗಳ ಬಗ್ಗೆ ಮಾಹಿತಿ ನೀಡಲು ವಿಧಾನಸೌಧದಲ್ಲಿ ಶುಕ್ರವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಬೆಂಗಳೂರು ಹೊರವಲಯದಲ್ಲಿ ಸುಮಾರು 2000 ಎಕರೆ ಪ್ರದೇಶದಲ್ಲಿ ‘ನಾಲೆಡ್ಜ್ -ಹೆಲ್ತ್- ಇನ್ನೋವೇಶನ್ ಅಂಡ್ ರೀಸರ್ಚ್’ ಸಿಟಿ ಸ್ಥಾಪಿಸಲು ಯೋಜಿಸಲಾಗಿದೆ. ಮೊದಲ ಹಂತದಲ್ಲಿ 1000 ಎಕರೆ ಪ್ರದೇಶವನ್ನು ಅಭಿವೃದ್ಧಿ ಪಡಿಸಲಾಗುವುದು. ಈ ಸಿಟಿಯಲ್ಲಿ ವಿಶ್ವದರ್ಜೆಯ ವಿಶ್ವವಿದ್ಯಾಲಯ, ಆಸ್ಪತ್ರೆ, ಆವಿಷ್ಕಾರ- ಸಂಶೋಧನಾ ಕೇಂದ್ರಗಳಿರಲಿವೆ. ಈ ಯೋಜನೆ ಜಾಗತಿಕ ವಲಯದಲ್ಲಿ ಬೆಂಗಳೂರಿನ ಹೆಸರನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವುದರಲ್ಲಿ ಸಂದೇಹವಿಲ್ಲ ಎಂದು ಅವರು ತಿಳಿಸಿದರು.
‘ಕೈಗಾರಿಕಾ ಪ್ರದೇಶಗಳ ಮೂಲ ಸೌಕರ್ಯಗಳ ಸುಧಾರಣೆಗಾಗಿ ನಾವು ಮತ್ತೊಂದು ದಿಟ್ಟ ಹೆಜ್ಜೆ ಇಡುತ್ತಿದ್ದೇವೆ. ಸ್ಥಳೀಯ ಕೈಗಾರಿಕಾ ಅಸೋಸಿಯೇಷನ್ಗಳಿಗೆ ಪ್ರದೇಶದ ನಿರ್ವಹಣೆಯ ಜವಾಬ್ದಾರಿ ವಹಿಸಲಾಗುವುದು. ಇದರಿಂದ ಮೂಲಸೌಕರ್ಯದ ಬಹುತೇಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಲಿದೆ ಎಂಬ ವಿಶ್ವಾಸವಿದೆ, ಎಂದರು.
‘ಇನ್ವೆಸ್ಟ್ ಕರ್ನಾಟಕ’ ವೇದಿಕೆ ಪುನಾರಚನೆ
ರಾಜ್ಯದಲ್ಲಿ ಸದೃಢ ಕೈಗಾರಿಕಾ ಪರಿಸರ ಸೃಷ್ಟಿ ಜತೆಗೆ ಬಂಡವಾಳ ಆಕರ್ಷಣೆಗೆ ‘ಇನ್ವೆಸ್ಟ್ ಕರ್ನಾಟಕ’ ವೇದಿಕೆಯನ್ನು ಪುನಾರಚಿಸಲಾಗುತ್ತಿದೆ. ಉದ್ಯಮದ ದಿಗ್ಗಜರು ಈ ಮಂಡಳಿಯ ಭಾಗವಾಗಿದ್ದಾರೆ. ವೆಂಚರ್ ಕ್ಯಾಪಿಟಲ್, ಪ್ರೈವೇಟ್ ಇಕ್ವಿಟಿ ಮತ್ತು ಮೂಲಸೌಕರ್ಯ ಅಭಿವೃದ್ಧಿಯಂತಹ ವಿವಿಧ ವಲಯಗಳ ಅನುಭವಿಗಳನ್ನು ಒಳಗೊಂಡ ‘ಕಾರ್ಯತಂತ್ರ ಹೂಡಿಕೆ ಸಮಿತಿ’ ರಚಿಸಲಾಗಿದೆ. ಇದಲ್ಲದೇ, ಸುಲಲಿತ ವ್ಯವಹಾರಕ್ಕೆ ಅನುವು ಮಾಡಲು ಅತ್ಯಾಧುನಿಕ ಏಕಗವಾಕ್ಷಿ ವ್ಯವಸ್ಥೆಯನ್ನು ರೂಪಿಸುವ ಕೆಲಸ ಆಗುತ್ತಿದೆ. ಈ ಸಂಬಂಧ ಹಲವಾರು ಸುತ್ತಿನ ಚರ್ಚೆಗಳು ನೆಡೆದಿದ್ದು, ಶೀಘ್ರದಲ್ಲೇ ಕ್ರಮ ವಹಿಸಲಾಗುತ್ತದೆ,ಎಂದು ಇಲಾಖೆಯಲ್ಲಿ ಕೈಗೊಂಡಿರುವ ಹೊಸ ಕ್ರಮಗಳನ್ನು ವಿವರಿಸಿದರು.
ಹೊಸ ಕೈಗಾರಿಕಾ ನೀತಿ ರಚಿಸಲು ನಮ್ಮ ಸರ್ಕಾರ ಮುಂದಾಗಿದ್ದು, ಇದರಲ್ಲಿ ರಫ್ತಿಗೆ ಹೆಚ್ಚಿನ ಒತ್ತು ನೀಡಲಾಗುವುದು. ಎಲೆಕ್ಟ್ರಿಕ್ ವೆಹಿಕಲ್ ಮತ್ತು ವೇರ್ಹೌಸಿಂಗ್ ಮತ್ತು ಲಾಜಿಸ್ಟಿಕ್ಸ್ ವಲಯಗಳಿಗೆ ಈಗಾಗಲೇ ಕರಡು ರೂಪುಗೊಂಡಿವೆ. ಸದ್ಯ ಇತರ ರಾಜ್ಯಗಳ ಕೈಗಾರಿಕಾ ನೀತಿಯ ಅಧ್ಯಯನ ನಡೆಯುತ್ತಿದ್ದು, ಶೀಘ್ರದಲ್ಲೇ ಪ್ರಗತಿಪರ ನೀತಿಯನ್ನು ಹೊರತರಲಿದ್ದೇವೆ. ಜತೆಗೆ, ಆಕರ್ಷಕ ಪ್ರೋತ್ಸಾಹಕ ಪ್ಯಾಕೇಜ್ಗಳನ್ನು ಘೋಷಿಸಲಿದ್ದೇವೆ, ಎಂದು ತಿಳಿಸಿದರು.
ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಬೆಳವಣಿಗೆಗೆ ಉತ್ತೇಜಿಸಲು 10 ಆದ್ಯತಾ ವಲಯಗಳಲ್ಲಿ ‘ವಿಷನ್ ಗ್ರೂಪ್’ ರಚಿಸುತ್ತೇವೆ. ಏರೋಸ್ಪೇಸ್ ಮತ್ತು ಡಿಫೆನ್ಸ್, ಮೆಷಿನ್ ಟೂಲ್ಸ್, ಇಎಸ್ಡಿಎಂ, ಫಾರ್ಮಾಸ್ಯುಟಿಕಲ್ಸ್, ಕೋರ್ ಮ್ಯಾನುಫ್ಯಾಕ್ಚರಿಂಗ್, ಆಟೋಮೋಟಿವ್/ಎಲೆಕ್ಟ್ರಿಕ್ ವೆಹಿಕಲ್ಸ್, ಇಂಡಸ್ಟ್ರಿ 5.0, ಟೆಕ್ಸ್ಟೈಲ್ಸ್ ಮತ್ತು ಗ್ರೀನ್ ಮತ್ತು ಉದಯೋನ್ಮುಖ ತಂತ್ರಜ್ಞಾನ ಒಳಗೊಂಡಿದೆ, ಎಂದರು 60,000 ಕೋಟಿ ರೂ. ಹೂಡಿಕೆ ಒಪ್ಪಂದ
ಹೂಡಿಕೆದಾರರ ನೆಚ್ಚಿನ ತಾಣ ಕರ್ನಾಟಕ ಎನ್ನುವುದರಲ್ಲಿ ಎರಡು ಮಾತಿಲ್ಲ. ಅದಕ್ಕೆ ಸಾಕ್ಷಿಯಾಗಿ,ಈ ಅವಧಿಯಲ್ಲಿ ಕರ್ನಾಟಕದಲ್ಲಿ ಬರೋಬ್ಬರಿ 60,000 ಕೋಟಿ ರೂ. ಬಂಡವಾಳ ಹೂಡಿಕೆ ಒಪ್ಪಂದ ಆಗಿದೆ, ಮುಖ್ಯವಾಗಿ ಇದರಿಂದ 30,000 ಹೊಸ ಉದ್ಯೋಗಗಳು ಸೃಷ್ಟಿಯಾಗಲಿವೆ. ಫಾಕ್ಸ್ಕಾನ್, ಜೆಎಸ್ಡಬ್ಲ್ಯೂ ಎನರ್ಜಿ, ಟಾಟಾ ಎಲೆಕ್ಟ್ರಾನಿಕ್ಸ್ ಮತ್ತು ಐಬಿಸಿ ಮುಂತಾದ ಕಂಪನಿಗಳೊಂದಿಗಿನ ಫಲಪ್ರದ ಮಾತುಕತೆ ನಡೆಸಲಾಗಿದೆ. ಈ ಕಂಪನಿಗಳು ದೊಡ್ಡ ಮೊತ್ತದ ಹೂಡಿಕೆ ಒಪ್ಪಂದಗಳಿಗೆ ಸಹಿ ಮಾಡಿವೆ ಎಂದು ಅವರು ತಿಳಿಸಿದರು.
20ಕ್ಕೂ ಹೆಚ್ಚು ಸಾಂಭಾವ್ಯ ಹೂಡಿಕೆದಾರರ ಜತೆ ಮಾತುಕತೆ ನಡೆಯುತ್ತಿದ್ದು, ಇದು ಸಫಲವಾದರೆ ರಾಜ್ಯಕ್ಕೆ 1,00,000 ಕೋಟಿ ರೂಪಾಯಿ ಬಂಡವಾಳ ಹರಿದು ಬರಲಿದೆ. ಸಂಭಾವ್ಯ ಹೂಡಿಕೆದಾರರ ಪೈಕಿ ತೈವಾನ್, ಕೊರಿಯಾ ಮೂಲದ ಬಹುರಾಷ್ಟ್ರೀಯ ಕಂಪನಿಗಳು ಮತ್ತು ಸಾರ್ವಜನಿಕ ಮತ್ತು ಖಾಸಗಿ ವಲಯದ ಪ್ರಮುಖ ಕಂಪನಿಗಳು ಸೇರಿವೆ, ಎಂದು ವಿವರ ನೀಡದರು.
ಸುದ್ದಿಗೋಷ್ಠಿಯಲ್ಲಿ ಸರ್ಕಾರದ ಪ್ರಧಾನ ಕಾರ್ಯದರ್ಶಿ ಡಾ. ಎಸ್. ಸೆಲ್ವಕುಮಾರ್, ಕೈಗಾರಿಕಾಭಿವೃದ್ಧಿ ಆಯುಕ್ತರಾದ ಗುಂಜನ್ ಕೃಷ್ಣ, ಕರ್ನಾಟಕ ಉದ್ಯೋಗ ಮಿತ್ರದ ವ್ಯವಸ್ಥಾಪಕ ನಿರ್ದೇಶಕ ದೊಡ್ಡಬಸವರಾಜು ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.