ಸುದ್ದಿಮೂಲ ವಾರ್ತೆ
ಕೆ.ಆರ್.ಪುರ ಸೆ.11:ಪ್ರಯಾಣಿಕರ ಹಿತದೃಷ್ಟಿಯಿಂದ ಮಹದೇವಪುರ ಕ್ಷೇತ್ರದ ಕೊಡತಿ ಗ್ರಾಮದಲ್ಲಿ ನಿರ್ಮಿಸಿರುವ ಬಸ್ ನಿಲ್ದಾಣ ಅವ್ಯವಸ್ಥೆಯ ಆಗರವಾಗಿ ಉಪಯೋಗಕ್ಕೆ ಬಾರದಾಗಿದೆ.
ಈ ಹಿಂದೆ ಶಾಸಕರಾಗಿದ್ದ ಅರವಿಂದ ಲಿಂಬಾವಳಿ ಅವರು ತಮ್ಮ ಅನುದಾನದಲ್ಲಿ ಸುಸಜ್ಜಿತ ಬಸ್ ನಿಲ್ದಾಣ ನಿರ್ಮಿಸಲಾಗಿತ್ತು. ನಂತರದ ದಿನಗಳಲ್ಲಿ ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡದೆ ಇರುವುದರಿಂದ ಕೋಳಿ ಗೂಡಾಗಿ ಸ್ವಚ್ಛ ಕಾಣದಾಗಿದೆ. ಪೌರ ಕಾರ್ಮಿಕರು ಬಸ್ ನಿಲ್ದಾಣವನ್ನು ಸ್ವಚ್ಛ ಮಾಡದೆ ಇರುವುದು ಕಾರಣವಾಗಿದೆ ಎಂದು ಕೊಡತಿ ಗ್ರಾಮಸ್ಥರು ದೂರಿದರು.
ಬಸ್ ನಿಲ್ದಾಣದಿಂದ ಕೇವಲ 50 ಮೀಟರ್ ಅಡಿಗಳ ಅಂತರದಲ್ಲಿ ಇರುವ ಗ್ರಾಮ ಪಂಚಾಯತಿ ಕಾರ್ಯಾಲಯವಿದೆ. ಆದರೆ ಸಂಬಂಧಪಟ್ಟ ಅಧಿಕಾರಿಗಳು ಬಸ್ ನಿಲ್ದಾಣ ಬಗ್ಗೆ ನಿರ್ಲಕ್ಷ್ಯ ತೋರಿದ್ದಾರೆ. ಇದರ ಕುರಿತು ಕ್ರಮ ವಹಿಸುತ್ತಿಲ್ಲ ಎಂದು ಪ್ರಯಾಣಿಕ ಶ್ರೀನಾಥ್ ದೂರಿದರು.
ಕೊಡತಿ ಗ್ರಾಮದಿಂದ ನಿತ್ಯ ನೂರಾರು ಪ್ರಯಾಣಿಕರು ಇದೇ ನಿಲ್ದಾಣದಿಂದ ತೆರಳಬೇಕಿದೆ. ಮಳೆ ಗಾಳಿಗೆ ನಿಲ್ದಾಣದಲ್ಲಿ ನಿಲ್ಲಲು ಆಗುವುದಿಲ್ಲ. ಸ್ವಚ್ಚತೆ ಎನ್ನುವುದು ಮರಿಚಿಕೆಯಾಗಿದೆ. ಸರಿಯಾದ ನಿರ್ವಹಣೆ ಮಾಡುವ ಮೂಲಕ ಪ್ರಯಾಣಿಕರಿಗೆ ಅನುಕೂಲ ಮಾಡಬೇಕು ಎಂದರು.