ಬೆಂಗಳೂರು, ಮೇ 16; ರಂಗಸಮಾಜ ಶಿಫಾರಸ್ಸು ಇಲ್ಲದೆ ರಾಜಕೀಯ ಕಾರಣಕ್ಕಾಗಿ ಬಿಜೆಪಿ ಸರ್ಕಾರ ನೇಮಿಸಿದ್ದ ಮೈಸೂರು ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಬಿಜೆಪಿ ಸರ್ಕಾರದಲ್ಲಿ ನೇಮಕಗೊಂಡಿರುವ ನಿಗಮ ಮಂಡಳಿ ಅಧ್ಯಕ್ಷರು, ಸದಸ್ಯರು ಕೂಡಲೇ ತಮ್ಮ ಹುದ್ದೆ ತೊರೆಯಬೇಕು ಎಂದು ಕೆಪಿಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥ ರಮೇಶ್ ಬಾಬು ಒತ್ತಾಯಿಸಿದ್ದಾರೆ.ಸುದ್ದಿಗಾರರ ಜೊತೆ ಮಾತನಾಡಿದ ಅವರು, ರಂಗಾಯಣ ಸಂಸ್ಥೆಯನ್ನು ಮಲಿನಗೊಳಿಸಿ ಈ ಸಂಸ್ಥೆಯ ಮೂಲಕ ರಾಜ್ಯದ ಸಾಂಸ್ಕತಿಕ ಹಿರಿಮೆಗೆ ಕಳಂಕ ತಂದ ಆರೋಪ ಹೊತ್ತಿರುವ ಅಡ್ಡಂಡ ಕಾರ್ಯಪ್ಪ ಪಾಪ ಪ್ರಜ್ಞೆಯ ಕಾರಣಕ್ಕಾಗಿ ರಂಗಾಯಣ ಸಂಸ್ಥೆಗೆ ರಾಜೀನಾಮೆ ನೀಡಿ ಅವರನ್ನು ವಜಾಗೊಳಿಸುವ ಆದೇಶದಿಂದ ತಪ್ಪಿಸಿಕೊಂಡಿದ್ದಾರೆ. ಆದರೂ ರಂಗಾಯಣ ಸಂಸ್ಥೆಯಲ್ಲಿ ಅನೇಕ ವಿವಾದಗಳಿಗೆ ಅವಕಾಶ ಕೊಟ್ಟು ಕಾಲ್ಪನಿಕ ವಿಚಾರಗಳಿಗೆ ಒತ್ತು ನೀಡಿ ಇತಿಹಾಸದಲ್ಲಿ ಸೇರಿರುವುದಾಗಿ ತಿಳಿಸಿದ್ದಾರೆ.ಕರ್ನಾಟಕ ರಾಜ್ಯದಲ್ಲಿ ರಾಜಕೀಯ ಕಾರಣಗಳಿಗಾಗಿ ಸರ್ಕಾರಿ, ಅರೆಸರ್ಕಾರಿ ಹಾಗೂ ಅನುದಾನಿತ ಪ್ರಾಧಿಕಾರಗಳಿಗೆ ಮತ್ತು ಸಾಂಸ್ಕತಿಕ ಸಂಘಟನೆಗಳಿಗೆ ರಾಜ್ಯದ ಬಿಜೆಪಿ ಸರ್ಕಾರ ಬಿಜೆಪಿ ಪ್ರೇರಿತ ಕಾರ್ಯಕರ್ತರನ್ನು ಮತ್ತು ಬಿಜೆಪಿ ಪರವಾದ ಸ್ವಯಃ ಘೋಷಿತ ವಿಚಾರವಾದಿಗಳನ್ನು ನೇಮಕ ಮಾಡಿದ್ದು, ಕರ್ನಾಟಕ ಬಿಜೆಪಿ ಸರ್ಕಾರದ ಮೂಲಕ ನೇಮಕಗೊಂಡಿರುವ ಈ ಸಂಸ್ಥೆಗಳ ಅಧ್ಯಕ್ಷರು ಮತ್ತು ಸದಸ್ಯರು ನೈತಿಕ ಹೊಣೆ ಹೊತ್ತು ಕೂಡಲೇ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಬೇಕು.
ಕರ್ನಾಟಕದಲ್ಲಿ ಜನಾದೇಶ ಕಾಂಗ್ರೆಸ್ ಪಕ್ಷದ ಪರವಾಗಿ ಬಂದಿದ್ದು, ಭಾರತೀಯ ಜನತಾ ಪಕ್ಷದ ಮೂಲಕ ನೇಮಕಗೊಂಡಿರುವ ಪ್ರಾಧಿಕಾರಗಳ ಅಧ್ಯಕ್ಷರು ಮತ್ತು ಸದಸ್ಯರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡುವುದರ ಮೂಲಕ ಹೊಸ ಸರ್ಕಾರ ಹೊಸ ನೇಮಕಾತಿ ಮಾಡಲು ಅನುವು ಮಾಡಿಕೊಡಬೇಕು. ಕೆಲವು ಅರೆ ನ್ಯಾಯಿಕ ಆಯೋಗ ಮತ್ತು ಪ್ರಾಧಿಕಾರಗಳಿಗೆ ಹಿಂದಿನ ಭಾರತೀಯ ಜನತಾ ಪಕ್ಷದ ಸರ್ಕಾರ ರಾಜಕೀಯ ನೇಮಕಾತಿಗಳನ್ನು ಮಾಡಿದ್ದು, ಭಾರತೀಯ ಜನತಾ ಪಕ್ಷದ ಮೂಲಕ ನೇಮಕವಾಗಿರುವ ಈ ಸಂಸ್ಥೆಗಳ ಅಧ್ಯಕ್ಷರು ಹಾಗೂ ಸದಸ್ಯರು ರಾಜೀನಾಮೆ ನೀಡದೇ ಹೋದಲ್ಲಿ, ಕಾಂಗ್ರೆಸ್ ಪಕ್ಷವು ನಿಯಮಾನುಸಾರ ಇಂತಹ ನೇಮಕಾತಿಗಳನ್ನು ರದ್ದುಪಡಿಸಿ ಹೊಸ ನೇಮಕಾತಿಗಳನ್ನು ಮಾಡಲಿದೆ ಎಂದು ಹೇಳಿದ್ದಾರೆ.
ಸರ್ಕಾರದ ಅಥವಾ ಅರೆಸರ್ಕಾರದ ಸಂಸ್ಥೆಗಳು ಮತ್ತು ಪ್ರಾಧಿಕಾರಗಳು ಕರ್ನಾಟಕ ರಾಜ್ಯದಲ್ಲಿ ಚುನಾವಣೆ ಘೋಷಣೆ ಆದ ನಂತರ, ಮಾದರಿ ನೀತಿ ಸಂಹಿತೆ ಜಾರಿಗೆ ಬಂದ ನಂತರ ನಿಯಮ ಬಾಹಿರವಾಗಿ ಹಣಕಾಸು ಚಟುವಟಿಕೆಗಳನ್ನು ನಿರ್ವಹಿಸಿದ್ದರೆ, ಇದರ ಮೇಲೆ ಹೊಸ ಸರ್ಕಾರವು ವಿಶೇಷ ತನಿಖೆ ನಡೆಸಲಿದೆ ಎಂದರು.
ರಾಜ್ಯದಲ್ಲಿ ನೀತಿ ಸಂಹಿತೆ ಬಂದ ನಂತರ ಕೆಲವು ಪ್ರಾಧಿಕಾರಗಳು ಮತ್ತು ಅರೆ ನ್ಯಾಯಿಕ ಆಯೋಗಗಳು ನಿಯಮ ಮೀರಿ ಹಣಕಾಸು ನಿರ್ವಹಣೆ ಮಾಡಿರುವುದು ಕಾಂಗ್ರೆಸ್ ಪಕ್ಷದ ಗಮನಕ್ಕೆ ಬಂದಿರುತ್ತದೆ. ಇಂತಹ ಯಾವುದೇ ಅಕ್ರಮಗಳಲ್ಲಿ ಯಾವುದೇ ಅಧಿಕಾರಿ ಭಾಗಿಯಾಗಿದ್ದರೇ ಅವರ ಮೇಲೆ ನಿಯಮಾನುಸಾರ ನೂತನ ಸರ್ಕಾರ ಕ್ರಮ ಕೈಗೊಳ್ಳಲಿದೆ. ಕೆಲವು ಸಂಸ್ಥೆಗಳು ಹಿಂದಿನ ದಿನಾಂಕ ನಮೂದಿಸಿ ಬಿಲ್ಗಳನ್ನು ಪಾವತಿ ಮಾಡಿರುವುದು ಮತ್ತು ಮಾಡುತ್ತಿರುವುದು ಗಮನಕ್ಕೆ ಬಂದಿದ್ದು, ಇಂತಹ ಅಕ್ರಮ ಚಟುವಟಿಕೆಗಳ ಮೇಲೆ ಹೊಸ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದ್ದಾರೆ.