ಸುದ್ದಿಮೂಲ ವಾರ್ತೆ
ಮೈಸೂರು, ಮೇ 29: ಸಂಸದ ಪ್ರತಾಪ್ ಸಿಂಹ ಅವರಿಗೆ ಗ್ಯಾರಂಟಿ ಯೋಜನೆ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಗ್ಯಾರಂಟಿ ಬಗ್ಗೆ ಡೆಡ್ ಲೈನ್ ಕೊಡಲು ಪ್ರತಾಪ್ ಸಿಂಹ ಯಾರು ? ಬೆಂಕಿ ಹಚ್ಚುವುದು ಬಿಟ್ಟರೆ ಮೈಸೂರಿಗೆ ಅವರ ಕೊಡುಗೆ ಏನು? ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷಣ್ ವಾಗ್ದಾಳಿ ನಡೆಸಿದ್ದಾರೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಸುಮ್ಮನೆ
ಮಾತನಾಡಲ್ಲ. 5 ಗ್ಯಾರಂಟಿ ಯೋಜನೆ ರಾಜ್ಯದಲ್ಲಿ ಜಾರಿಗೆ ಬರಲಿದೆ. ಇದಕ್ಕೆ ಡೆಡ್ಲೈನ್ ಕೊಡಲು ಪ್ರತಾಪಸಿಂಹ ಯಾರು ? 15 ಲಕ್ಷ ಪ್ರತಿ ಖಾತೆಗೆ ಹಾಕುತ್ತೇವೆ ಅಂದರು. ಯುವಕರಿಗೆ ಉದ್ಯೋಗ ಸೃಷ್ಟಿ ಏನಾಯಿತು? ಪ್ರತಿಯೊಬ್ಬರಿಗೆ ಕುಡಿಯುವ ನೀರಿನ ಯೋಜನೆ ಏನಾಯ್ತು ? ಎಂದು ಪ್ರಶ್ನಿಸಿದರು.
ಕೇವಲ 15 ದಿನದಲ್ಲಿ ನಮ್ಮ ಸರ್ಕಾರ ಟೇಕ್ ಆಫ್ ಆಗಿದೆ. 34 ಮಂತ್ರಿಗಳ ಸಂಪೂರ್ಣ ಸರ್ಕಾರ ರಚನೆಯಾಗಿದೆ. ಗ್ಯಾರಂಟಿ ಯೋಜನೆ ವಿಚಾರದಲ್ಲಿ ನಮಗೆ ಯಾವುದೇ ಅನುಮಾನಗಳಿಲ್ಲ. ಕೆಲ ಬಿಜೆಪಿ ಮುಖಂಡರು ತಮ್ಮ ಅಸ್ತಿತ್ವಕ್ಕೆ ಮತ್ತು ನೀರಿಲ್ಲದೆ ಬೋಟು ಓಡಿಸುವವರಿಗೆ ಅನುಮಾನವಿದೆ. ನಮ್ಮ ವಿರುದ್ದ ಟ್ರೆಂಡ್ ಕ್ರಿಯೇಟ್ ಮಾಡಲು ಹೊರಟಿದ್ದಾರೆ ಎಂದು ಟೀಕಿಸಿದರು.
ಬಿಜೆಪಿಯವರು 2018ರ ಎಷ್ಟು ಭರವಸೆ ಈಡೇರಿಸಿದ್ದಾರೆ. ಸಂಸದ ಪ್ರತಾಪಸಿಂಹ ಚುನಾವಣೆ ವೇಳೆ ಎಲ್ಲಿ
ಹೋಗಿದ್ದರು ? ವರುಣದಲ್ಲಿ ತೊಡೆ ತಟ್ಟಿಕೊಂಡು ಬೆಂಕಿ ಹಚ್ಚಲು ಹೋಗಿದ್ದರು. ನಿಮ್ಮ 8 ಕ್ಷೇತ್ರದ ಕಥೆ ಏನು
ಆಯ್ತು ? ಕ್ಷೇತ್ರಗಳಿಗೆ ಹೋದರೆ ಪ್ರತಾಪಸಿಂಹಗೆ ಕಲ್ಲು ಹೊಡೆಯುತ್ತಾರೆ. ಓಡಿಸಿಕೊಂಡು ಬಂದು ಕಲ್ಲು
ಹೊಡೆಯುತ್ತಾರೆ ಎಂದು ಗುಡುಗಿದರು.
ಪ್ರತಾಪ್ ಸಿಂಹ 2014ರಲ್ಲಿ ನೀಡಿದ ಭರವಸೆಗಳು ಏನಾದವು? ಜೂನ್ 1ಕ್ಕೆ ನಿಮ್ಮ ಕಚೇರಿಗೆ ಬರುತ್ತೇನೆ. ಈ
ಭರವಸೆಗಳಿಗೆ ಉತ್ತರ ಕೊಡಲೇಬೇಕು ಎಂದು ಸವಾಲು ಹಾಕಿದರು.
ಜೆಡಿಎಸ್ ವಿಸರ್ಜನೆ ಏಕೆ ಮಾಡಿಲ್ಲ?
ಜೆಡಿಎಸ್ ಜೋಕರ್ ಪಕ್ಷ. ಅದನ್ನು ಮುಗಿಸಲು ಬಿಜೆಪಿ ಕಾರಣ. ಅದಕ್ಕೆ ಬಿಜೆಪಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಜೆಡಿಎಸ್ ವಿಸರ್ಜನೆ ಏಕೆ ಮಾಡಿಲ್ಲ ? ಮೈ ಕೈ ಪರಚಿಕೊಳ್ಳುವುದನ್ನು ಬಿಟ್ಟು ವಿಸರ್ಜನೆ ಮಾಡಿ. 19 ಶಾಸಕರನ್ನು ಉಳಿಸಿಕೊಳ್ಳುವುದನ್ನು ಮಾಡಿ. 10 ರಿಂದ 12 ಜನ ಜೆಡಿಎಸ್ ನಿಂದ ಹೊರ ಹೋಗಲು ಮುಂದಾಗಿದ್ದಾರೆ. ಜೆಡಿಎಸ್ ಕಥೆ ಮುಗಿದಿದೆ ಜೆಡಿಎಸ್ ಮುಗಿದ ಅಧ್ಯಾಯ. ಜೆಡಿಎಸ್ ಅನ್ನು ಮುಂದೆ ಯಾರು ನಂಬುವುದಿಲ್ಲ ಎಂದು ಎಂ.ಲಕ್ಷ್ಮಣ್ ಹೇಳಿದರು.
ರಂಗಾಯಣದ ಮಾಜಿ ನಿರ್ದೇಶಕಅಡ್ಡಂಡ ಕಾರ್ಯಪ್ಪ ವಿರುದ್ದ ವಾಗ್ದಾಳಿ ನಡೆಸಿದ ಎಂ.ಲಕ್ಷ್ಮಣ್, ಮೈಸೂರಿನಲ್ಲಿ ನಿಮ್ಮದು ಏನು ನಡೆಯಲ್ಲ. ಏನಾದರೂ ಮಾಡಿದರೆ ರೌಡಿ ಶೀಟರ್ ತೆರೆಯಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಹಿಂದೆ ಆತನ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿತ್ತು. ಆ ದೂರು ಏನಾಗಿದೆ ? ಕೂಡಲೇ ಎಫ್ ಐ ಆರ್ ದಾಖಲಿಸಿ ಎಂದು ಆಗ್ರಹಿಸಿದರು.