ಸುದ್ದಿಮೂಲ ವಾರ್ತೆ
ಬೆಂಗಳೂರು, ಅ.9: ಬರ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿರುವ ಕೇಂದ್ರ ಅಧ್ಯಯನ ತಂಡ ರಾಜ್ಯ ಸರ್ಕಾರದ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಶೀಘ್ರದಲ್ಲೇ ಬರ ಪರಿಹಾರ ಹಣ ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ವಿಶ್ವಾಸ ವ್ಯಕ್ತಪಡಿಸಿದರು.
ಸೋಮವಾರ ಕೇಂದ್ರ ಬರ ಅಧ್ಯಯನ ತಂಡದ ಅಧಿಕಾರಿಗಳ ಜೊತೆಗಿನ ಸಭೆಯ ನಂತರ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, “ಕೇಂದ್ರ ಬರ ಅಧ್ಯಯನ ತಂಡದ ಅಧಿಕಾರಿಗಳು ಕಳೆದ ಮೂರು ದಿನಗಳಲ್ಲಿ ಮೂರು ತಂಡವಾಗಿ ರಾಜ್ಯದ ಎಲ್ಲಾ ಬರ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದಾರೆ. ಬೆಳೆ ಹಾನಿಯ ವಾಸ್ತವ ಪರಿಶೀಲನೆ ನಡೆಸಿದ್ದಾರೆ. ಸ್ಥಳೀಯ ರೈತರು ಹಾಗೂ ಜನಪ್ರತಿನಿಧಿಗಳ ಜೊತೆಗೂ ಚರ್ಚಿಸಿದ್ದಾರೆ.
ಅಲ್ಲದೆ, ಬರ ಘೋಷಣೆ ಸಂಬಂಧ ರಾಜ್ಯ ಸರ್ಕಾರ ಸಲ್ಲಿಸಿರುವ ಮನವಿ ವಸ್ತುಸ್ಥಿತಿಯಿಂದ ಕೂಡಿದೆ ಎಂದು ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಹೀಗಾಗಿ ಶೀಘ್ರದಲ್ಲೇ ಬರ ಪರಿಹಾರ ಹಣ ರಾಜ್ಯಕ್ಕೆ ಸಂದಾಯವಾಗಲಿದೆ ಎಂಬ ವಿಶ್ವಾಸ ಇದೆ ಎಂದರು.
ಬರ ಪರಿಶೀಲನೆ ನಂತರ ಕೇಂದ್ರ ತಂಡ ನಮ್ಮ ಜೊತೆಯೂ ಚರ್ಚೆ ನಡೆಸಿದ್ದು, ರಾಜ್ಯದಲ್ಲಿ ಅಧಿಕ ಪ್ರಮಾಣದಲ್ಲಿ ಬೆಳೆ ಹಾನಿಯಾಗಿದೆ. ಇದರಿಂದ ರೈತರು ಸಾಕಷ್ಟು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೂ ಸಮಸ್ಯೆ ಉಲ್ಬಣಿಸುವ ಸಾಧ್ಯತೆ ಇದೆ ಎಂದು ಸ್ವತಃ ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದರು ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಮಾಹಿತಿ ಹಂಚಿಕೊಂಡರು.
ಹೆಚ್ಚುವರಿಯಾಗಿ 21ತಾಲೂಕು ಬರ:
195 ತಾಲೂಕುಗಳ ಜೊತೆಗೆ ಎರಡನೇ ಹಂತದಲ್ಲಿ ಕೇಂದ್ರದ ಮಾನದಂಡದಂತೆ ಮತ್ತೆ 21 ತಾಲೂಕುಗಳ ಬರ ಘೋಷಣೆಗೆ ಸಿದ್ದತೆ ನಡೆಸಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
ಈಗಾಗಲೇ ರಾಜ್ಯದ್ಯಂತ 195 ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಿಸಲಾಗಿದೆ. ಅಕ್ಟೋಬರ್ ತಿಂಗಳ ಕೊನೆಯ ವರೆಗೆ ಮತ್ತೊಂದು ಹಂತದಲ್ಲಿ ಬರ ಪೀಡಿತ ತಾಲೂಕುಗಳ ಘೋಷಿಸಲು ರಾಜ್ಯ ಸರ್ಕಾರಕ್ಕೆ ಅವಕಾಶ ಇದೆ. ಹೀಗಾಗಿ ಉಳಿದ 41 ತಾಲೂಕುಗಳ ಪೈಕಿ 11 ಜಿಲ್ಲೆಗಳ 21 ತಾಲೂಕುಗಳಲ್ಲಿ ಮುಂದಿನ ಎರಡು ದಿನಗಳಲ್ಲಿ ಬೆಳೆ ಸಮೀಕ್ಷೆ ನಡೆಸಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಈ ಮಾಹಿತಿ ಕೈಗೆ ಸಿಗುತ್ತಿದ್ದಂತೆ ಬರ ಘೋಷಣೆ ಮಾಡಲಾಗುವುದು. ಈ ಸಂಬಂಧ ಕೇಂದ್ರಕ್ಕೆ ಮತ್ತೊಂದು ಮನವಿ ಸಲ್ಲಿಸಲಾಗುವುದು. ಈ ಬಗ್ಗೆ ಈಗಾಗಲೇ ಕೇಂದ್ರ ಬರ ಅಧ್ಯಯನ ತಂಡದ ಜೊತೆಗೂ ಚರ್ಚೆ ನಡೆಸಲಾಗಿದೆ. ಅವರೂ ಸಹ ಮತ್ತೊಂದು ಮನವಿ ಸಲ್ಲಿಸಲು ಒಪ್ಪಿಗೆ ನೀಡಿದ್ದಾರೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದರು.
ಕೇಂದ್ರಕ್ಕೆ ಇಂದು ಮತ್ತೊಂದು ಪತ್ರ:
ಬರ ಘೋಷಣೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಮಾನದಂಡ ಅನಾನುಕೂಲತೆಯಿಂದ ಕೂಡಿದೆ. ಈ ಬಗ್ಗೆ ಕೇಂದ್ರ ಗೃಹ ಸಚಿವರು ಹಾಗೂ ಕೇಂದ್ರ ಕೃಷಿ ಸಚಿವರನ್ನು ಖುದ್ದು ಭೇಟಿ ಮಾಡಿ ಚರ್ಚಿಸಲು ಹಾಗೂ ಬರ ಘೋಷಣೆಗೆ ಸಂಬಂಧಿಸಿದಂತೆ ರಾಜ್ಯದ ಮನವಿ ಪತ್ರ ನೀಡಲು ಅವಕಾಶ ನೀಡುವಂತೆ ಇಂದು ಮತ್ತೊಂದು ಪತ್ರ ಬರೆಯಲಾಗುವುದು ಎಂದರು.
ಸಚಿವ ಸಂಪುಟ ಉಪ ಸಮಿತಿ ಸಭೆಯಲ್ಲಿ ಸಹಕಾರ ಸಚಿವರಾದ ಕೆ ರಾಜಣ್ಣ ,ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ಸೇರಿದಂತೆ ಕಂದಾಯ ಹಾಗು ಕೃಷಿ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.
ಕೇಂದ್ರ ಬರ ಅಧ್ಯಯನ ತಂಡದ ನೇತೃತ್ವ ವಹಿಸಿದ್ದ ಕೇಂದ್ರ ಕೃಷಿ ಇಲಾಖೆಯ ಜಂಟಿ ಕಾರ್ಯದರ್ಶಿ ಅಜಿತ್ ಕುಮಾರ್ ಸಾಹು ಸೇರಿದಂತೆ ಇತರ ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು.
ಒಂದು ವಾರದಲ್ಲಿ ವರದಿ ಸಲ್ಲಿಕೆ: ಚಲುವರಾಯ ಸ್ವಾಮಿ
ಕೇಂದ್ರ ಬರ ಅಧ್ಯಯನ ತಂಡಕ್ಕೆ ರಾಜ್ಯದ ಕ್ಲಿಷ್ಟ ಪಾಕೃತಿಕ ಸಂಕಷ್ಟ ಮನವರಿಕೆಯಾಗಿದ್ದು, ಒಂದು ವಾರದೊಳಗೆ ವರದಿ ಸಲ್ಲಿಸಲಿದೆ ಎಂದು ಕೃಷಿ ಸಚಿವರಾದ ಎನ್ ಚಲುವರಾಯಸ್ವಾಮಿ ಹೇಳಿದರು.
ಒಕ್ಕೂಟದ ವ್ಯವಸ್ಥೆಯಲ್ಲಿ ಕೇಂದ್ರ ರಾಜ್ಯಗಳ ನಡುವೆ ಪರಸ್ಪರ ನಂಬಿಕೆ, ಸಮನ್ವಯ ಅಗತ್ಯ. ಶೀಘ್ರವೇ ಬರ ಪರಿಹಾರ ಬಿಡುಗಡೆ ಮಾಡಬಹುದು ಎಂಬ ನಿರೀಕ್ಷೆ ನಮ್ಮದ್ದು. ಹಸಿರು ಬರ ಹಾಗೂ ರೈತರ ಸಂಕಷ್ಟ ಪರಿಸ್ಥಿತಿ ಕೇಂದ್ರ ತಂಡಕ್ಕೆ ಮನವರಿಕೆಯಾಗಿದೆ ಎಂಬುದು ಸಭೆಯಲ್ಲಿನ ಅಭಿಪ್ರಾಯ ವಿನಿಮಯದ ವೇಳೆ ತಿಳಿದಿದೆ. ಕೇಂದ್ರ ಸರ್ಕಾರಕ್ಕೆ ನಿರ್ಧಾರದ ಬಗ್ಗೆ ಕಾಯ್ದು ನೋಡೋಣ.ರೈತರ ಹಿತ ಕಾಯಲು ರಾಜ್ಯ ಸರ್ಕಾರ ಸದಾ ಸಿದ್ದವಾಗಿದೆ ಎಂದರು.
ಸಚಿವ ಸಂಪುಟ ಉಪ ಸಮಿತಿ ಸದಸ್ಯರಾಗಿರುವ ಸಚಿವರುಗಳು ದೆಹಲಿಗೆ ತೆರಳಿ ಕೇಂದ್ರ ಕೃಷಿ ಹಾಗು ಗೃಹ ಸಚಿವರನ್ನು ಭೇಟಿ ಮಾಡಿ ರಾಜ್ಯದ ಬರ ಸ್ಥಿತಿಯನ್ನು ವಿವರಿಸುವಂತೆ ಮುಖ್ಯಮಂತ್ರಿಗಳು ಸೂಚಿಸಿದ್ದಾರೆ. ಅದರಂತೆ ಕಾಲಾವಕಾಶ ಕೋರಲಾಗಿದ್ದು ಶೀಘ್ರದಲ್ಲೇ ದೆಹಲಿಗೆ ತೆರಳಲಾಗುವುದು ಎಂದು ಹೇಳಿದರು.