ಸುದ್ದಿಮೂಲ ವಾರ್ತೆ ಸಿಂಧನೂರು, ಫೆ. 11:
ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕ ಅಧ್ಯಕ್ಷ ಗಾಲಿ ಜನಾರ್ಧನ ರೆಡ್ಡಿ ನೇತೃತ್ವದಲ್ಲಿ ಫೆ-14 ರಂದು ತಾಲೂಕಿನ ಬಂಗಾರಿ ಕ್ಯಾಂಪಿನಿಂದ ಅಂಬಾಮಠದವರೆಗೆ ಪಾದಯಾತ್ರೆ ಹಾಗೂ ಪ್ರಚಾರ ರಥಕ್ಕೆ ಚಾಲನೆ ನೀಡಲಾಗುವುದು ಎಂದು ಮುಖಂಡ ಮಲ್ಲಿಕಾರ್ಜುನ ನೆಕ್ಕಂಟಿ ಹೇಳಿದರು.
ನಗರದ ಪಕ್ಷದ ಕಾರ್ಯಾಲಯದಲ್ಲಿ ಶನಿವಾರ ಸುದ್ದಿಗೋಷ್ಟಿಯನ್ನುದ್ದೇಶಿಸಿ ಅವರು ಮಾತನಾಡಿದರು. ಪಕ್ಷದ ಬಲವರ್ಧನೆಗಾಗಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿದ್ದು, ಅಂಬಾಮಠದಲ್ಲಿ ಬೃಹತ್ ಸಮಾವೇಶ ನಡೆಯಲಿದೆ. ಸುಮಾರು 10 ರಿಂದ 12 ಸಾವಿರ ಜನ ಸೇರುವ ನಿರೀಕ್ಷೆಯಿದೆ. ಸಮಾವೇಶದಲ್ಲಿ ಹಲವರು ಕೆಆರ್ಪಿಪಿ ಸೇರಲಿದ್ದಾರೆ ಎಂದು ತಿಳಿಸಿದರು.
ಪಟ್ಟಿ ಸಿದ್ದ: ವಿಧಾನಸಭಾ ಚುನಾವಣೆಗೆ ಕೆಆರ್ಪಿಪಿ ಪಕ್ಷದಿಂದ ಈಗಾಗಲೇ 30 ಅಭ್ಯರ್ಥಿಗಳ ಪಟ್ಟಿ ಸಿದ್ದವಾಗಿದೆ. ಸಂಸ್ಥಾಪಕ ಅಧ್ಯಕ್ಷ ಜನಾರ್ಧನ ರೆಡ್ಡಿ ಶೀಘ್ರವೇ ಬಿಡುಗಡೆ ಮಾಡಲಿದ್ದಾರೆ. ಸಿಂಧನೂರಿನ ಅನೇಕ ಪ್ರಮುಖರು ರೆಡ್ಡಿ ಅವರೊಂದಿಗೆ ಸಂಪರ್ಕದಲ್ಲಿದ್ದಾರೆ. ಮುಂದಿನದಿನಗಳಲ್ಲಿ ಯಾರು-ಯಾರು ಪಕ್ಷಕ್ಕೆ ಬರಲಿದ್ದಾರೆ ಎನ್ನುವದು ಕಾದು ನೋಡಬೇಕಿದೆ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.
ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ಶಿವು ಹಿರೇಮಠ, ಹನುಮನಗೌಡ ಹಟ್ಟಿ, ಸಿದ್ದಯ್ಯ ಸ್ವಾಮಿ, ಅಮರೇಗೌಡ ಕೆ.ಹೊಸಳ್ಳಿ, ಗ್ಯಾನಪ್ಪ ಬಸಾಪುರ, ಅಮರೇಗೌಡ ಎಲೆಕೂಡ್ಲಗಿ, ಮುದುಕಪ್ಪ ಜಾಲಿಹಾಳ, ವಿಜಯಕುಮಾರ, ಹರ್ಷ, ಪರ್ವತರೆಡ್ಡಿ, ಸಲ್ಮಾನ್, ಸುರೇಶ ಬಂಡಿ ಸೇರಿದಂತೆ ಇತರರು ಇದ್ದರು.