ಸುದ್ದಿಮೂಲ ವಾರ್ತೆ
ಆನೇಕಲ್, ಮೇ 24: ತಾಲೂಕಿನ ಇಂಡ್ಲವಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಕಾಡು ಜಕ್ಕನಹಳ್ಳಿ ಗ್ರಾಮದಲ್ಲಿ ಕರ್ನಾಟಕ ಗೃಹ ಮಂಡಳಿ 2012ರಲ್ಲಿ ಸಾವಿರಾರು ಎಕರೆ ಜಾಗವನ್ನು ಭೂಸ್ವಾಧೀನ ಮೂಲಕ ಸರ್ಕಾರ ವಶಪಡಿಸಿಕೊಂಡಿತ್ತು. ಈ ಹಿನ್ನಲೆಯಲ್ಲಿ ರೈತರು ಆ ಜಾಗವನ್ನ ಭೂ ಸ್ವಾಧೀನ ಕೈ ಬಿಡುವಂತೆ ಒತ್ತಾಯಿಸಿ ಕೆಆರ್ಎಸ್ ಪಕ್ಷ ಹಾಗೂ ಅಲ್ಲಿನ ಸುತ್ತಮುತ್ತಲಿನ ಗ್ರಾಮಸ್ಥರು ರೈತರು ಪ್ರತಿಭಟನೆ ನಡೆಸಿದರು.
ಭೂ ಸ್ವಾಧೀನ ಕಾರ್ಯವನ್ನು ಸರ್ಕಾರ ಕೈ ಬಿಡದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆಯನ್ನು ನೀಡಿದರು.
ಒಂದು ಕಡೆ ಕಣ್ಣಾಯಿಸಿದಷ್ಟು ಕಾಣುವ ಜಾಗ. ಮತ್ತೊಂದು ಕಡೆ ಬೇಕೇ ಬೇಕು ನ್ಯಾಯ ಬೇಕು ಕೂಗಾಟ, ಚೀರಾಟ. ಈ ಎಲ್ಲಾ ದೃಶ್ಯಗಳು ಕಂಡುಬಂದಿದ್ದು ಆನೇಕಲ್ ತಾಲೂಕಿನ ಇಂಡ್ಲವಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಕಾಡು ಜಕ್ಕನಹಳ್ಳಿ ಗ್ರಾಮದಲ್ಲಿ.
ಕರ್ನಾಟಕ ಗೃಹ ಮಂಡಳಿಯ ನಾಲ್ಕನೇ ಹಂತದ ನಿರ್ಮಾಣಕ್ಕಾಗಿ ಕಾಡಜಕ್ಕನಹಳ್ಳಿ ಗ್ರಾಮದಲ್ಲಿ 2012ರಲ್ಲಿ 2004 ಎಕರೆ ಜಾಗವನ್ನ ಭೂಸ್ವಾಧೀನ ಮಾಡಿವಶಪಡಿಸಿಕೊಂಡಿತ್ತು .
ಇದರಲ್ಲಿ ಸರ್ಕಾರಿ ಸ್ವಾಮ್ಯದ 1200 ಎಕರೆ ಗೋಮಾಳ ಜಮೀನು ಇದೆ. ಹೀಗಾಗಿ ಯಾವುದೇ ಕಾರಣಕ್ಕೂ ಗೃಹ ಮಂಡಳಿ ಮಾಡದಂತೆ ಮತ್ತು ಈ ಜಾಗವನ್ನು ಕೈ ಬಿಡುವಂತೆ ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ ಇನ್ನು ಕೆಲವರು ಮುಂಚೆಯೆ ಮಾರಾಟ ಮಾಡಿಕೊಂಡಿದ್ದಾರೆ .
ಇನ್ನು ಇದೇ ವೇಳೆ ರೈತ ಶಿವಕುಮಾರ್ ಮಾತನಾಡಿ, ತಲತಲಾಂತರಗಳಿಂದಲೂ ಕೂಡ ವ್ಯವಸಾಯವನ್ನು ಮಾಡ್ಕೊಂಡು ಬಂದಿದ್ದೇವೆ. ನಮಗೆ ವ್ಯವಸಾಯ ಬಿಟ್ಟು ಬೇರೆ ಗೊತ್ತಿಲ್ಲ. ಸರ್ಕಾರ ನಮ್ಮ ಜಮೀನುಗಳನ್ನು 2011 ಮತ್ತು 2012 ರಲ್ಲಿ ಭೂಸ್ವಾಧೀನ ಮಾಡಿಕೊಂಡಿದೆ. ಈ ಹಿಂದೆ ಈ ಜಾಗವನ್ನು ಕೈ ಬಿಡಬೇಕು ಅಂತ ಟೌನ್ಹಾಲ್ನಿಂದ ಕಂದಾಯ ಭವನದವರೆಗೂ ಹೋರಾಟ ಮಾಡಿದ್ದೇವೆ. ಲೋಕಾಯುಕ್ತ ಮತ್ತು ಅರಣ್ಯ ಭವನಕ್ಕೂ ಸಹ ದೂರು ಸಲ್ಲಿಕೆ ಮಾಡಿದರೂ ರೈತರ ಕಷ್ಟಗಳ ಬಗ್ಗೆ ಸ್ಪಂದಿಸುತ್ತಿಲ್ಲ. ಅಧಿಕಾರಿಗಳಾದರೂ ನಮ್ಮ ಸಮಸ್ಯೆಗಳಿಗೆ ಪರಿಹಾರ ಮಾಡುವ ಕೆಲಸ ಮಾಡಬೇಕು ಈಗಿನ ಹೊಸ ಸರ್ಕಾರಕ್ಕೆ ನಾನು ಒತ್ತಾಯ ಮಾಡುತ್ತೇನೆ ಎಂದು ಹೇಳಿದರು.
ಒಟ್ಟಿನಲ್ಲಿ 60 ರಷ್ಟು ರೈತರು ಭೂಸ್ವಾಧೀನಕ್ಕೆ ಸಮ್ಮತಿ ಸೂಚಿಸಿದ್ದು ಶೇ. 40 ರೈತರು ಜಮೀನುಗಳನ್ನು ಕೊಡದೆ ಉಳಿಸಿಕೊಳ್ಳಲು ಹೋರಾಟ ಮಾಡುತ್ತಿದ್ದಾರೆ. ಈಗಿನ ಸರ್ಕಾರ ರೈತರಿಗೆ ಯಾವ ರೀತಿ ನ್ಯಾಯ ಕೊಡುಸ್ತಾರೆ ಅನ್ನೋದನ್ನ ಕಾದು ನೋಡಬೇಕಿದೆ.