ಸುದ್ದಿಮೂಲ ವಾರ್ತೆ
ಬೆಂಗಳೂರು, ಮೇ 17: ಗರ್ಭಿಣಿ ಮಹಿಳೆಗೆ ಬಸ್ನಲ್ಲಿಯೇ ಹೆರಿಗೆ ನೋವು ಕಾಣಿಸಿಕೊಂಡಿದ್ದರಿಂದ ಮಾನವೀಯತೆ ಮೆರೆದು ಬಸ್ನಲ್ಲಿಯೇ ಹೆರಿಗೆ ಮಾಡಿಸಿದ ನಿರ್ವಾಹಕಿ ಎಸ್.ವಸಂತಮ್ಮ ಮತ್ತು ಚಾಲಕ ಎಚ್.ಬಿ. ಕುಮಾರಸ್ವಾಮಿ ಅವರಿಗೆ ಕೆಎಸ್ಆರ್ಟಿಸಿ ಅಭಿನಂದಿಸಿತು.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಕೆಎಸ್ಆರ್ಟಿಸಿ ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಫಾತಿಮಾ ಎಂಬ ಗರ್ಭಿಣಿಗೆ ಬಸ್ನಲ್ಲಿಯೇ ಅತೀವ ಹೆರಿಗೆ ನೋವು ಕಾಣಿಸಿಕೊಂಡಿತು. ಸಮೀಪದಲ್ಲಿ ಯಾವುದೇ ಆಸ್ಪತ್ರೆ ಇಲ್ಲದ ಕಾರಣ ಮಾರ್ಗ ಮಧ್ಯದಲ್ಲಿಯೇ ಬಸ್ಸನ್ನು ನಿಲ್ಲಿಸಿ, ಹೆರಿಗೆ ಮಾಡಿಸಿ ತಾಯಿ ಮತ್ತು ಮಗುವಿನ ಜೀವ ಕಾಪಾಡಿದ ಚಿಕ್ಕಮಗಳೂರು ವಿಭಾಗದ ನಿರ್ವಾಹಕಿ ವಸಂತಮ್ಮ, ಬಸ್ಸಿನ ಚಾಲಕ ಕುಮಾರಸ್ವಾಮಿ ಅವರಿಗೆ ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕಿ ಜಿ .ಸತ್ಯವತಿ ಅವರು ಕ್ರಮವಾಗಿ ತಲಾ ರೂ. 5,000/- ಹಾಗೂ ರೂ.2000/- ನಗದು ಪುರಸ್ಕಾರ ನೀಡಿ ಸನ್ಮಾನಿಸಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ವ್ಯವಸ್ಥಾಪಕ ನಿರ್ದೇಶಕರು, ನಿಗಮದ ಚಾಲನಾ ಸಿಬ್ಬಂದಿಗಳು ಬಸ್ಸುಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರೊಂದಿಗೆ ಉತ್ತಮ ನಡೆವಳಿಕೆ ತೋರಿ ಅವರ ಅಗತ್ಯಗಳಿಗೆ ಸ್ಪಂದಿಸುವುದರಲ್ಲಿ ಮುಂಚೂಣಿಯಲ್ಲಿದ್ದು, ವಸಂತಮ್ಮ ನಿರ್ವಾಹಕಿಯವರು, ಯಾವುದೇ ರೀತಿಯಲ್ಲಿ ಹಿಂಜರಿಯದೆ ಧೈರ್ಯದಿಂದ ಸಕಾಲದಲ್ಲಿ ಮಹಿಳೆ ಮತ್ತು ಮಗುವನ್ನು ಕಾಪಾಡಲೇಬೇಕು ಎಂಬ ಸದುದ್ದೇಶದಿಂದ, ಹತ್ತಿರದಲ್ಲಿ ಆಸ್ಪತ್ರೆ ಇಲ್ಲದ ಕಾರಣ ಅವರಿಗೆ ಬಸ್ಸಿನಲ್ಲಿಯೇ ಹೆರಿಗೆ ಮಾಡಿಸಿ ಮಗು ಮತ್ತು ತಾಯಿಯ ಪ್ರಾಣವನ್ನು ಉಳಿಸಿ ಮಾನವೀಯತೆಯನ್ನು ಮೆರೆದಿರುವುದು ನಿಜಕ್ಕೂ ಅಭಿನಂದನಾರ್ಹ ಎಂದರು.
ಕಾರ್ಯಕ್ರಮದಲ್ಲಿ ನಿರ್ದೇಶಕ (ಸಿಬ್ಬಂದಿ ಮತ್ತು ಜಾಗೃತ) ಪ್ರಶಾಂತ್ ಕುಮಾರ್ ಮಿಶ್ರ, ಇಲಾಖಾ ಮುಖ್ಯಸ್ಥರು, ವಿಭಾಗೀಯ ನಿಯಂತ್ರಣಾಧಿಕಾರಿ ಹಾಗೂ ಕಾರ್ಮಿಕ ಕಲ್ಯಾಣಾಧಿಕಾರಿ ಚಿಕ್ಕಮಗಳೂರು ವಿಭಾಗ ಉಪಸ್ಥಿತರಿದ್ದರು.