ಸುದ್ದಿಮೂಲ ವಾರ್ತೆ
ಬೆಂಗಳೂರು: ಕಳೆದ ವಿಧಾನಸಭೆ ಚುನಾವಣೆಯ ಸೋಲಿನ ಆತ್ಮಾವಲೋಕನ ಸಭೆಯಲ್ಲಿ ಬಹಳ ನೊಂದು ಮಾತನಾಡಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು, ಮುಂದಿನ ದಿನಗಳಲ್ಲಿ ಪಕ್ಷವನ್ನು ಬಲಿಷ್ಟಗೊಳಿಸಲು ರಾಜಿ ಇಲ್ಲದೆ ಕೆಲಸ ಮಾಡುವೆ ಎಂದು ಘೋಷಣೆ ಮಾಡಿದರು.
ನಗರದಲ್ಲಿಇಂದು ನಡೆದ ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿಗಳಾದ ಹೆಚ್.ಡಿ.ದೇವೇಗೌಡರ ಸಮ್ಮುಖದಲ್ಲಿ ಹಮ್ಕಿಕೊಳ್ಳಲಾಗಿದ್ದ ಆತ್ಮಾವಲೋಕನ ಸಭೆಯಲ್ಲಿ ಅವರು ಮಾತನಾಡಿದರು.
ಗೆದ್ದರೆ ನಾವು ಗೆಲುವಿನ ಕಾರಣಗಳನ್ನು ಹುಡುಕಲು ಹೋಗುವುದಿಲ್ಲ. ಸೋತರೆ ಕಾರಣಗಳನ್ನು ಹುಡುಕಬೇಕಾಗುತ್ತದೆ. ನಾನು ಹುಡುಕುತ್ತಿದ್ದೇನೆ, ಆ ಕಾರಣಗಳೇನು ಎನ್ನುವುದು ನನಗೆ ಗೊತ್ತಿದೆ ಎಂದು ಅವರು ಹೇಳಿದರು.
ಕೊನೆ ಕ್ಷಣದಲ್ಲಿ ನಾನು ನನ್ನ ಅಭ್ಯರ್ಥಿಗಳಿಗೆ ನಿರೀಕ್ಷಿತ ಆರ್ಥಿಕ ನೆರವು ಕೊಡಲಾಗಲಿಲ್ಲ. ಅಂತಿಮ ಕ್ಷಣದಲ್ಲಿ ನನ್ನ ಪಕ್ಷಗಳ ಅಭ್ಯರ್ಥಿಗಳಿಗೆ ನೆರವು ಕೊಡುವುದು ಕಷ್ಟವಾಯಿತು. ನಿಮ್ಮ ಸಹಾಯಕ್ಕೆ ನಿಲ್ಲದೆ ಹೋದ ಕಾರಣಕ್ಕೆ ಸಾರ್ವಜನಿಕವಾಗಿ ಕ್ಷಮೆ ಕೇಳುತ್ತೇನೆ ಎಂದು ಅವರು ಸೋತ ಅಭ್ಯರ್ಥಿಗಳ ಕ್ಷಮೆ ಕೇಳಿದರು.
ಕಾಂಗ್ರೆಸ್ ಪಕ್ಷ ವ್ಯವಸ್ಥಿತವಾಗಿ ಅಪಪ್ರಚಾರ ನಡೆಸಿತು. ಸುಳ್ಳು ಗ್ಯಾರಂಟಿಗಳು ಹಾಗೂ ಕೂಪನ್ ಗಳನ್ನು ಕೊಟ್ಟು ಜನರಿಗೆ ವಂಚಿಸಿ ಅಧಿಕಾರಕ್ಕೆ ಬಂದಿದೆ ಕಾಂಗ್ರೆಸ್ ಕುತಂತ್ರದಿಂದ ಗೆದ್ದಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮದೇ ಕುತಂತ್ರಗಾರಿಕೆ ಮಾಡಿದರು. ಅವರ ಪಕ್ಷದವರು ಒಂದು ಸಮುದಾಯವನ್ನು ನಮ್ಮ ವಿರುದ್ಧ ಎತ್ತಿ ಕಟ್ಟಿದರು ಎಂದು ಟೀಕಾಪ್ರಹಾರ ನಡೆಸಿದರು.
ಕಾಂಗ್ರೆಸ್, ಬಿಜೆಪಿ ಪಕ್ಷಗಳು ಹೇರಳವಾಗಿ ಹಣ ವೆಚ್ಚ ಮಾಡಿದವು, ಆಮಿಷಗಳನ್ನು ಒಡ್ಡಿದವು. ಅವುಗಳಿಗೆ ಪೈಪೋಟಿ ಕೊಡಲು ನನ್ನಿಂದ ಸಾಧ್ಯವಾಗಲಿಲ್ಲ. ನಾನು ಅಂತಹ ಕೆಲಸ ಮಾಡಲು ಹೋಗಲಿಲ್ಲ. ವೈಯಕ್ತಿಕ ನೆಲೆಗಟ್ಟಿನಲ್ಲಿ ಯಾರನ್ನೂ ನಾವು ಟೀಕೆ ಮಾಡಲಿಲ್ಲ, ತೇಜೋವಧೆ ಮಾಡಲಿಲ್ಲ, ಅಭಿವೃದ್ಧಿ ವಿಷಯ ಇಟ್ಟುಕೊಂಡು ಹೋದೆವು. ಅದಕ್ಕಾಗಿ ನಾವು ಸೋಲಬೇಕಾಯಿತು ಎಂದು ಮಾಜಿ ಮುಖ್ಯಮಂತ್ರಿ ಅವರು ಬೇಸರ ವ್ಯಕ್ತಪಡಿಸಿದರು.
ಬಿಜೆಪಿಯಿಂದ ನಲುಗಿದ ಒಂದು ಸಮಾಜದ ಪರವಾಗಿ ನಾವು ದನಿ ಎತ್ತಿದೆವು, ಅಚಲವಾಗಿ ಬೆಂಬಲ ಕೊಟ್ಟೆವು, ಹೆಜ್ಜೆ ಹೆಜ್ಜೆಗೂ ಅವರಿಗೆ ಬಿಜೆಪಿ ಸರಕಾರ ತೊಂದರೆ ಕೊಟ್ಟಾಗ ಧೈರ್ಯವಾಗಿ ನಿಂತೆವು. ಆದರೆ ಅವರು ನಮ್ಮ ಪಕ್ಷದ ಪರವಾಗಿ ನಿಲ್ಲದೆ ಹೋದರು ಎಂದು ಕುಮಾರಸ್ವಾಮಿ ಅವರು ನೊಂದು ನುಡಿದರು.
ಆರ್ಥಿಕ ಸಮಸ್ಯೆಗಳೂ ನಮ್ಮ ಸೋಲಿಗೆ ಕಾರಣ, ಅಭ್ಯರ್ಥಿಗಳ ಖರ್ಚಿಗೆ ನಾವು ಹಣ ಕೊಡಲಿಲ್ಲ. ಬಿಜೆಪಿ ಕಾಂಗ್ರೆಸ್ ಪಕ್ಷಗಳಿಗೆ ಸರಿ ಸಮವಾಗಿ ಖರ್ಚು ಮಾಡಲು ನಮ್ಮಿಂದ ಆಗಲಿಲ್ಲ. ಕೇವಲ 600 ಮತಗಳಲ್ಲಿ ಸೋತ ಕುಮಟಾ ಕ್ಷೇತ್ರದ ಸೂರಜ್ ನಾಯಕ್ ಸೋನಿ ಅವರ ಸೋಲು ನನಗೆ ಅತೀವ ನೋವು ಉಂಟು ಮಾಡಿದೆ.
ಫಲಿತಾಂಶದಿಂದ ಧೃತಿಗೆಡಬೇಕಿಲಿಲ್ಲ. 1989ರಲ್ಲಿ ದೇವೇಗೌಡರು ಎರಡು ಕ್ಷೇತ್ರಗಳಲ್ಲಿ ಸೋತಿದ್ದರು. ಆ ನಂತರ ಐದು ವರ್ಷಗಳಲ್ಲಿ ದೇವೇಗೌಡರ ನೇತೃತ್ವದಲ್ಲಿ ಪೂರ್ಣ ಪ್ರಮಾಣದ ರಾಜ್ಯ ಸರಕಾರ ಬಂದು ಅವರು ಮುಖ್ಯಮಂತ್ರಿ ಆಗಿ, ಆ ನಂತರ ಪ್ರಧಾನಿಯೂ ಅದರು. ಇಂಥ ಸೋಲು ಶಾಶ್ವತ ಅಲ್ಲ, ಹಾಗಂತ ಮೈಮರೆಯಬೇಡಿ ಎಂದು ಮುಖಂಡರಿಗೆ ತಾಕೀತು ಮಾಡಿದರು ಮಾಜಿ ಮುಖ್ಯಮಂತ್ರಿಗಳು.