ಸುದ್ದಿಮೂಲ ವಾರ್ತೆ
ಬೆಂಗಳೂರು, ಏ.4 : ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಪಕ್ಷದ ಯುವ ಕಾರ್ಯಕರ್ತರು ಅವಿರತವಾಗಿ ಕಾರ್ಯನಿರ್ವಹಿಸುತ್ತಿದ್ದು, ಯುವ ಶಕ್ತಿಯಿಂದ ಪಕ್ಷಕ್ಕೆ ಹೆಚ್ಚಿನ ಚೈತನ್ಯ ದೊರೆತಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಬಸವನಗುಡಿಯ ಶ್ರೀ ವಿಶ್ವಕರ್ಮ ಸೇವಾ ಪ್ರತಿಷ್ಠಾನದ ಕಾರ್ಯಾಲಯದಲ್ಲಿ ಭಗವಾನ್ ವಿಶ್ವಕರ್ಮ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.
ವಿಶ್ವಕರ್ಮ ಸಮಾಜದ ಬೇಡಿಕೆಗಳ ಮನವಿ ಪತ್ರ ಸ್ವೀಕರಿಸಿ ಮಾತನಾಡಿದ ಕುಮಾರ ಸ್ವಾಮಿ, ಯುವಕರು ನಮ್ಮ ಪಕ್ಷದ ಪರವಾಗಿ ಕೆಲಸ ಮಾಡುತ್ತಿದ್ದು, ಅದರಲ್ಲೂ ವಿಶ್ವಕರ್ಮ ಸಮಾಜ ಸಂಘಟನೆಯಲ್ಲಿ ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಜೆಡಿಎಸ್ ಪಕ್ಷವನ್ನು 2023ರ ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರಕ್ಕೆ ತರಬೇಕು. ರಾಜ್ಯದಲ್ಲಿನ ವಾತಾವರಣ ನೋಡಿದರೆ, ಜೆ.ಡಿ.ಎಸ್. ಸ್ವತಂತ್ರವಾಗಿ ಸರ್ಕಾರ ರಚಿಸುವುದರಲ್ಲಿ ಯಾವುದೇ ಅನುಮಾನವಿಲ್ಲ. ಪಕ್ಷ ಅಧಿಕಾರಕ್ಕೆ ಬಂದಲ್ಲಿ ಸಮಾಜ ಸಂಘಟನೆಯಲ್ಲಿ ನಿರತವಾಗಿರುವವರಿಗೂ ಸೂಕ್ತ ಪ್ರಾತಿನಿಧ್ಯ ಕಲ್ಪಿಸಲಾಗುವುದು ಎಂದು ಹೇಳಿದರು.
ಕಾಯಕ ಸಮುದಾಯವಾದ ವಿಶ್ವಕರ್ಮರು ತಮ್ಮ ಕುಶಲತೆಯ ಮೂಲಕ ಜೀವ ಇಲ್ಲದ ವಸ್ತುಗಳಿಗೆ ಜೀವ ತುಂಬುವ ದೈವಿಕ ಕೆಲಸ ಮಾಡುತ್ತಿದ್ದಾರೆ. ವಿಶ್ವಕರ್ಮ ಸಮಾಜದ ಬೇಡಿಕೆಗಳನ್ನೂ ಈಡೇರಿಸಲು ಬದ್ಧವಾಗಿದೆ. ತಾವು ಮುಖ್ಯಮಂತ್ರಿಯಾದ ಕೂಡಲೇ ಸಮಾಜದ ಏಳಿಗೆಗೆ ಅಗತ್ಯ ನೆರವು ಕಲ್ಪಿಸುವುದಾಗಿ ಹೇಳಿದರು.
ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಹಾಗೂ ವಿಶ್ವಕರ್ಮ ಸೇವ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಡಾ. ಬಿ.ಎಂ ಉಮೇಶ್ ಕುಮಾರ್ ಮಾತನಾಡಿ, ವಿಶ್ವಕರ್ಮರು ಸಂಘಟಿತರಾಗಿ ಒಗ್ಗಟ್ಟಾಗಬೇಕು. ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡುವ ತನಕ ವಿಶ್ರಮಿಸಬಾರದು ಎಂದರು.
ಸೇವಾ ಪ್ರತಿಷ್ಠಾನದ ಅಧ್ಯಕ್ಷ, ನಿವೃತ್ತ ಐಎಎಸ್ ಅಧಿಕಾರಿ ಕೆ. ಎಸ್. ಪ್ರಭಾಕರ್, ವಿಧಾನ ಪರಿಷತ್ ಸದಸ್ಯ ಹಾಗೂ ಪರಿಷತ್ ಜೆಡಿಎಸ್ ಉಪ ನಾಯಕ ಟಿ.ಎ. ಶರವಣ, ಬಸವನಗುಡಿ ಜೆಡಿಎಸ್ ಅಭ್ಯರ್ಥಿ ಅರಮನೆ ಶಂಕರ್, ಹಿರಿಯ ಮುಖಂಡ ಬಾಗೇಗೌಡ, ಸಮುದಾಯದ ವೇದಮೂರ್ತಿ, ಹೊನ್ನಪ್ಪ ಆಚಾರ್, ಮಧುಸೂಧನ್, ಬಾಲಾಜಿ, ಚಂದ್ರಶೇಖರ್, ನಂಜುಂಡಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.