ಸುದ್ದಿಮೂಲ ವಾರ್ತೆ
ಮೈಸೂರು, ಜು.4;ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಲಿರುವ ಬಜೆಟ್ ನಲ್ಲಿ ರೈತರಿಗೆ ಪೂರಕವಾದ ಅಂಶಗಳನ್ನು ಅಳವಡಿಸಿ, ರೈತರ ಸಾಲಮನ್ನಾ ಮಾಡಬೇಕು ಮತ್ತು ರೈತರಿಗೆ ನೀಡುವ ಸಾಲ ನೀತಿಯನ್ನು ಸರಳೀಕರಿಸಬೇಕು ಎಂದು ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಒತ್ತಾಯಿಸಿದ್ದಾರೆ
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಚೀನಾದಿಂದ ರೇಷ್ಮೆ, ಮಲೇಷಿಯಾದಿಂದ ತಾಳೆ ಎಣ್ಣೆ ಆಮದು ಮಾಡಿಕೊಳ್ಳುತ್ತಿದೆ. ಇದರ ಪರಿಣಾಮ ದೇಶದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಆಮದು ನೀತಿ ಬಿಡಬೇಕು. ರಾಜ್ಯದಲ್ಲಿ ರೇಷ್ಮೆ ಗೂಡಿನ ಬೆಲೆ ಮಾರುಕಟ್ಟೆಯಲ್ಲಿ ಕುಸಿದಿದೆ. ಕ್ವಿಂಟಾಲ್ ಗೆ 12ಸಾವಿರ ಇದ್ದ ಕೊಬ್ಬರಿ ಬೆಲೆ 6ಸಾವಿರಕ್ಕೆ ಇಳಿಕೆಯಾಗಿದೆ. ಇದರಿಂದ ದೇಶದ ರೈತರು ಕಂಗಾಲಾಗಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ವಿದೇಶದಿಂದ ಆಮದು ಮಾಡಿಕೊಳ್ಳುವ ಉತ್ಪನ್ನಗಳಿಗೆ ತೆರಿಗೆ ಹಾಕದೆ ವಿನಾಯ್ತಿ ನೀಡಲಾಗುತ್ತದೆ. ಹೀಗೆ ಕೇಂದ್ರ ಸರ್ಕಾರ ರೈತರ ಮೇಲೆ ಗದಾಪ್ರಹಾರ ಮಾಡುತ್ತಿದೆ. ಕ್ಯಾಸಿನೋ, ಆನ್ಲೈನ್ ಜೂಜಾಟ ರೇಸ್ ಗೆ ಯಾವುದೇ ತೆರಿಗೆ ವಿಧಿಸುವುದಿಲ್ಲ. ಆದರೆ ಜನಸಾಮಾನ್ಯರು ಕೊಂಡುಕೊಳ್ಳುವ ಅಗತ್ಯ ವಸ್ತುಗಳಿಗೆ ಜಿಎಸ್ ಟಿ ವಿಧಿಸುತ್ತಿದ್ದಾರೆ. ಮೋಜು ಮಸ್ತಿಗೆ ಇಲ್ಲದ ಜಿಎಸ್ ಟಿ ಬಡವರ ಮೇಲೆ ಏಕೆ ಹಾಕುತ್ತಿದ್ದೀರಿ ? ಎಂದು ಪ್ರಶ್ನಿಸಿದರು.
ರಾಜ್ಯ ಸರ್ಕಾರ ಬಜೆಟ್ ಮಂಡನೆ ಹಿನ್ನಲೆ, ರೈತರ ಸಮಸ್ಯೆ ಕುರಿತು ಸರ್ಕಾರಕ್ಕೆ ಒಂದಷ್ಟು ಸಲಹೆ ನೀಡಲಾಗಿದೆ. ರೀತಿ ಭೂ ಸುಧಾರಣೆ ತಿದ್ದುಪಡಿ ಕಾಯ್ದೆಯನ್ನು ಸಹ ರದ್ದುಗೊಳಿಸಿ, ಗೋ ಹತ್ಯೆ ನಿಷೇಧ ಕಾಯ್ದೆಯನ್ನು ವಾಪಾಸ್ ಪಡೆಯಬಾರದು. ಈ ಹಿಂದೆ ರಾಜ್ಯದಲ್ಲಿ ಗೋವುಗಳ ಸಂತತಿ 14 ಲಕ್ಷ ಇತ್ತು. ಇದೀಗ 11ಲಕ್ಷಕ್ಕೆ ಇಳಿಕೆಯಾಗಿದೆ. ಹೀಗೆಯೇ ಗೋವುಗಳ ಸಂತತಿ ನಾಶವಾಗುತ್ತ ಹೋದರೆ ಹಾಲಿನ ಉತ್ಪನ್ನಗಳಿಗೆ ಕೊರತೆ ಆಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ಈ ವಿಚಾರವಾಗಿ ರೈತರಿಗೆ ಜಾಗೃತಿ ಮೂಡಿಸುವ ಅವಶ್ಯಕತೆ ಇದೆ. ಮುಂದಿನ ದಿನಗಳಲ್ಲಿ ತುಮಕೂರು, ರಾಮನಗರ ಬೃಹತ್ ರೈತರ ಸಮಾವೇಶವನ್ನ ಆಯೋಜನೆ ಮಾಡುವ ಮೂಲಕ ರೈತರಿಗೆ ಜಾಗೃತಿ ಮೂಡಿಸಲಾಗಿವುದು ಎಂದು ತಿಳಿಸಿದರು.