ಸುದ್ದಿಮೂಲ ವಾರ್ತೆ
ಮೈಸೂರು, ಅ.19:ರಾಜ್ಯ ಸರ್ಕಾರದ ರೈತದ್ರೋಹಿ ನೀತಿಯನ್ನು ಖಂಡಿಸಿ ಇದೇ 24, ದಸರಾ ದಿನದಂದು ರಾಷ್ಟ್ರೀಯ, ರಾಜ್ಯ ಹೆದ್ದಾರಿಗಳ ಬಂದ್ ಚಳವಳಿ ನಡೆಸಲಾಗುವುದು ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷರು ಕುರುಬೂರು ಶಾಂತಕುಮಾರ್ ತಿಳಿಸಿದ್ದಾರೆ.
ಮೈಸೂರಿನಲ್ಲಿ ಗುರುವಾರ ಕಬ್ಬು ಬೆಳೆಗಾರರ ಜೊತೆ ಸಭೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಜನರ ಆಹಾರ ಉತ್ಪಾದನೆ ಮಾಡುವ ರೈತರು ಕತ್ತಲಲ್ಲಿ ಇಟ್ಟು , ಜನಸೇವಕರೆಂಬ ಜನಪ್ರತಿನಿಧಿಗಳು ಮೋಜಿನಲ್ಲಿ ತೊಡಗಿದ್ದಾರೆ ಎಂದು ಟೀಕಿಸಿದರು.
ಬರಗಾಲದಿಂದ ನರಳುತ್ತಿರುವ ರೈತನ ಕೃಷಿ ಪಂಪ್ ಸೆಟ್ ಗಳಿಗೆ ಕೇವಲ 5 ಗಂಟೆ ವಿದ್ಯುತ್, ಕೈಗಾರಿಕೆಗಳಿಗೆ ಸಂಪೂರ್ಣ ವಿದ್ಯುತ್, ಬರಗಾಲವಿದ್ದರೂ ಕಾವೇರಿ ಅಚ್ಚುಕಟ್ಟು ಭಾಗದ ರೈತರಿಗೆ ಬೆಳೆ ಬೆಳೆಯಲು ನೀರು ಬಿಡದೆ ತಮಿಳುನಾಡಿಗೆ ನೀರು ಹರಿಸಿ ರೈತರಿಗೆ ದ್ರೋಹ ಬಗೆದ ಸರ್ಕಾರಕ್ಕೆ ಎಚ್ಚರಿಸಲು , ಸಂಕಷ್ಟ ಕಾಲದಲ್ಲೂ ಮೋಜಿಗಾಗಿ ವಿದ್ಯುತ್ ಜಗಮಗಿಸುವ ಸರ್ಕಾರದ ವಿರುದ್ದ ದಸರಾ ದಿನದಂದು 24 ರಂದು ಮೈಸೂರು ಚಾಮರಾಜನಗರ ಜಿಲ್ಲೆಯ ಹಳ್ಳಿ ಹಳ್ಳಿಗಳಲ್ಲಿ ರೈತರು ರಸ್ತೆ ಬಂದ್ ಚಳುವಳಿ ನಡೆಸಲಾಗುವುದು ಎಂದು ತಿಳಿಸಿದರು.
ಕಬ್ಬಿನ ಹೆಚ್ಚುವರಿ ದರ 150 ಕೂಡಿಸುವಲ್ಲಿ ಸರ್ಕಾರ ರೈತರಿಗೆ ದ್ರೋಹ ಮಾಡುತ್ತಿದೆ. ಪ್ರಸಕ್ತ ಸಾಲಿನ ಕಬ್ಬಿನ ಹೆಚ್ಚುವರಿ ದರವನ್ನು ನಿಗದಿ ಮಾಡಿಲ್ಲ ಬರಗಾಲ ಘೋಷಣೆ ಮಾಡಿದರೂ, ಪರಿಹಾರ ಕ್ರಮಗಳು ಜಾರಿ ಮಾಡಿಲ್ಲ. ಈ ಎಲ್ಲಾ ಒತ್ತಾಯಗಳ ಬಗ್ಗೆ ನಿರ್ಲಕ್ಷ್ಯತನ ತೋರುತ್ತಿರುವ ಕಾರಣ ರೈತರು ಈ ಹೋರಾಟಕ್ಕಿಳಿಯಬೇಕಾಗಿದೆ ಎಂದು ಎಚ್ಚರಿಸಿದರು.
ಜಿಲ್ಲಾಧ್ಯಕ್ಷ ಸೋಮಶೇಖರ್, ಹತ್ತಳ್ಳಿ ದೇವರಾಜ್, ಬರಡನಫುರ ನಾಗರಾಜ್, ಕಿರಗಸೂರಶಂಕರ, ಹಳ್ಳಿಕೆರೆಹುಂಡಿ ಭಾಗ್ಯರಾಜ್, ಕುರುಬೂರ್ ಸಿದ್ದೇಶ್, ವೆಂಕಟೇಶ್, ರಾಜಣ್ಣ, ಮಂಜುನಾಥ್ ಇದ್ದರು.