ಸುದ್ದಿಮೂಲ ವಾರ್ತೆ
ಕುಷ್ಟಗಿ,ಆ.31:ಸಮಯಕ್ಕೆ ಸರಿಯಾಗಿ ಬಸ್ ಬಾರದ ಹಿನ್ನಲೆಯಲ್ಲಿ ಕುಷ್ಟಗಿ ತಾಲೂಕಿನ ಗೋತಗಿ ಗ್ರಾಮದಲ್ಲಿ ವಿದ್ಯಾರ್ಥಿಗಳು ಇಂದು ಗುರುವಾರ ಸಾರಿಗೆ ಬಸ್ ತಡೆದು ಪ್ರತಿಭಟನೆ ನಡೆಸುತಿದ್ದಾರೆ.
ಪ್ರತಿನಿತ್ಯ ಕುಷ್ಟಗಿ ಡಿಪೋ ಬಸ್ ತಾಲೂಕು ಕೇಂದ್ರದಿಂದ ದೋಟಿಹಾಳ ಮಾರ್ಗವಾಗಿ ಗೋತಗಿ ಗ್ರಾಮಕ್ಕೆ ಸಂಚರಿಸುತ್ತದೆ. ಬೆಳಿಗ್ಗೆ ಒಂಬತ್ತು ಗಂಟೆಗೆ ಬರಬೇಕಾದ ಬಸ್ ಹತ್ತು ಗಂಟೆ ಮೇಲ್ಪಟ್ಟು ಗ್ರಾಮಕ್ಕೆ ಬರುತಿದ್ದು, ದೋಟಿಹಾಳ ಹಾಗೂ ಕುಷ್ಟಗಿ ಪಟ್ಟಣಕ್ಕೆ ಶಾಲಾ ಕಾಲೇಜುಗಳಿಗೆ ತೆರಳುವ ಗೋತಗಿ ಗ್ರಾಮದ ವಿದ್ಯಾರ್ಥಿಗಳಿಗೆ ಶಾಲಾ ಸಮಯಕ್ಕೆ ಬಸ್ ಬಾರದಿರುವುದರಿಂದ
ಬೆಳಗಿನ ತರಗತಿಗಳಿಂದ ವಂಚಿತರಾಗುತಿದ್ದಾರೆ. ಹೀಗಾಗಿ ಗ್ರಾಮಕ್ಕೆ ಬೆಳಿಗ್ಗೆ 9 ಗಂಟೆಗೆ ಬಸ್ ವ್ಯವಸ್ಥೆ ಕಲ್ಪಿಸಿದರೆ ಸರಿಯಾದ ಸಮಯಕ್ಕೆ ವಿದ್ಯಾರ್ಥಿಗಳು ಬೆಳಗಿನ ತರಗತಿಗಳಿಗೆ ಹಾಜರಿರಲು ಅನುಕೂಲವಾಗುತ್ತದೆ.
ಸಾರಿಗೆ ಬಸ್ ಸರಿಯಾದ ವೇಳೆಗೆ ಸಂಚರಿಸಲು ಕ್ರಮಕೈಗೊಳ್ಳುವಂತೆ ಸಾರಿಗೆ ಸಂಸ್ಥೆಯ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿರುವ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು, ಪ್ರತಿಭಟನಾ ಸ್ಥಳಕ್ಕೆ ಡೀಪೋ ವ್ಯವಸ್ಥಾಪಕರು ಬರಬೇಕು ಸರಿಯಾದ ಸಮಯಕ್ಕೆ ಬಸ್ ಕಲ್ಪಿಸಬೇಕು. ಅಲ್ಲಿಯವರೆಗೂ ಬಸ್ ಮುಂದಕ್ಕೆ ಬಿಡುವುದಿಲ್ಲ ಎಂದು ಪಟ್ಟು ಹಿಡಿದು ಪ್ರತಿಭಟನೆಗೆ ಕುಳಿತಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿದ ಸಾರಿಗೆ ಘಟಕದ ವ್ಯವಸ್ಥಾಪಕ ಜಡೇಶ ಬಿ.ಜಿ. ಅವರು, ಗೋತಗಿ ಗ್ರಾಮಕ್ಕೆ ತೆರಳಲು ರಸ್ತೆ ಸಂಪರ್ಕ ಸರಿ ಇಲ್ಲದಿರುವುದರಿಂದ ನಿಗದಿತ ಸಮಯಕ್ಕೆ ಬಸ್ ತೆರಳಲು ಸ್ವಲ್ಪ ತಡವಾಗುತ್ತಿದೆ. ಅಲ್ಲದೆ ಇಂದು ಈ ಮಾರ್ಗದ ಬಸ್ ಚಾಲಕ ಹಾಗೂ ನಿರ್ವಾಹಕರ ಬದಲು ಬೇರೆಯವರು ಕರ್ತವ್ಯದಲ್ಲಿದ್ದರಿಂದ ಗ್ರಾಮಕ್ಕೆ ಬಸ್ ಸ್ವಲ್ಪ ತಡವಾಗಿ ಹೋಗಿದೆ. ಹಾಗಾಗಿ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ನಾಳೆಯಿಂದ ಸರಿ ಹೋಗಲಿದೆ. ಪ್ರತಿಭಟನಾ ಸ್ಥಳಕ್ಕೆ ಘಟಕದ ಒಬ್ಬ ಅಧಿಕಾರಿಯನ್ನು ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ.