ಸುದ್ದಿಮೂಲ ವಾರ್ತೆ
ಕುಷ್ಟಗಿ,ಜು.20:ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಸಕ್ತ ಶೈಕ್ಷಣಿಕ ಸಾಲಿನಿಂದ ಹೊಸದಾಗಿ ಪತ್ರಿಕೋದ್ಯಮ ಹಾಗೂ ಬಿಎಸ್ಸಿ ಪದವಿ ತರಗತಿಗಳನ್ನು ಪ್ರವೇಶ ಮಿತಿಯನ್ನು ನಿಗದಿಪಡಿಸಿ ಆರಂಭಿಸಲು ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿಗಳು ಅನುಮತಿ ನೀಡಿ ಆದೇಶ ಹೊರಡಿಸಿದ್ದಾರೆ.
ಪತ್ರಿಕೋದ್ಯಮ(ಜರ್ನಲಿಸಂ) ಪದವಿಗೆ 40, ವಿಜ್ಞಾನ(ಬಿಎಸ್ಸಿ) ಪದವಿಯ ಭೌತಶಾಸ್ತ್ರ, ರಸಾಯನಿಕ ಶಾಸ್ತ್ರ ಹಾಗೂ ಗಣಿತ ವಿಭಾಗಕ್ಕೆ ತಲಾ 30 ವಿದ್ಯಾರ್ಥಿಗಳ ಪ್ರವೇಶಕ್ಕೆ ನಿಗದಿಪಡಿಸಿ ತರಗತಿಗಳನ್ನು ಆರಂಭಿಸಲು ಕುಲಪತಿಗಳು ಅನುಮತಿ ನೀಡಿ ಆದೇಶ ಹೊರಡಿಸಿದ್ದಾರೆ.
ತಾಲೂಕಿನ ಪ್ರತಿ ವರ್ಷ ದ್ವಿತೀಯ ಪಿಯುಸಿ ವಿಜ್ಞಾನ ಪಾಸಾದ ಸಾವಿರಾರು ವಿದ್ಯಾರ್ಥಿಗಳು ಬಿಎಸ್ಸಿ ಪದವಿ ಬಯಸಿ ಪಕ್ಕದ ಬಾಗಲಕೋಟೆ ಜಿಲ್ಲೆಯ ಇಲಕಲ್ಲ, ಬದಾಮಿ ಹಾಗೂ ಗದಗ ಜಿಲ್ಲೆಯ ಗಜೇಂದ್ರಗಡ, ರೋಣ, ನೆರೇಗಲ್ ಖಾಸಗಿ ಕಾಲೇಜುಗಳಿಗೆ ಪ್ರವೇಶ ಪಡೆಯುತ್ತಿದ್ದರು. ಕುಷ್ಟಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿಎಸ್ಸಿ ಪದವಿಯನ್ನು ಆರಂಭಿಸಬೇಕೆಂಬುದು ವಿದ್ಯಾರ್ಥಿಗಳು ಹಾಗೂ ಪಾಲಕರ ಬಹುವರ್ಷಗಳ ಬೇಡಿಕೆ ಇತ್ತು. ಪ್ರಸಕ್ತ ವರ್ಷ ಬಿಎಸ್ಸಿ ಪದವಿ ಜೊತೆಗೆ ಪತ್ರಿಕೋದ್ಯಮ(ಜರ್ನಲಿಸಂ) ಪದವಿ ಆರಂಭಿಸಲು ಕೊಪ್ಪಳ ವಿವಿ ಕುಲಪತಿಗಳು ಅನುಮತಿ ನೀಡಿದ್ದು ತಾಲೂಕಿನ ವಿದ್ಯಾರ್ಥಿಗಳಲ್ಲಿ ಖುಷಿ ಹೆಚ್ಚಿಸಿದೆ.