ಸುದ್ದಿಮೂಲ ವಾರ್ತೆ
ಕುಷ್ಟಗಿ, ಸೆ. 04:ಮುಂಗಾರು ಸಮಯದಲ್ಲಿ ಮುನಿಸಿಕೊಂಡಿದ್ದ ಮಳೆರಾಯ ಭಾನುವಾರ ರಾತ್ರಿ ಸುರಿದ ಕಾರಣ ತಾಲೂಕಿನ ಹನುಮಸಾಗರ ಸಮೀಪದ ಕಪ್ಪಲೆಪ್ಪ ಜಲಪಾತಕ್ಕೀಗ ಜೀವಕಳೆ ಬಂದಿದೆ.
ಕೊಪ್ಪಳ ಸೇರಿದಂತೆ ಅಕ್ಕಪಕ್ಕದ ಜಿಲ್ಲೆಗಳಾದ ಬಿಜಾಪುರ, ಬಾಗಲಕೋಟೆ, ಗದಗ, ಬಳ್ಳಾರಿ ಜಿಲ್ಲೆಗಳ ಜನರು ಕಪ್ಪಲೆಪ್ಪ ಸುರಿಯುವುದನ್ನು ಕೇಳಿದರೆ ತಂಡ ತಂಡವಾಗಿ ಬರುತ್ತಾರೆ. ಈ ಭಾಗದಲ್ಲಿ ಜಲಪಾತಗಳಿಲ್ಲದ ಕಾರಣ ಕಪ್ಪಲೆಪ್ಪ, ಕಪಿಲತೀರ್ಥ, ಕಬ್ಬರಗಿ ದಿಡಗ ಎಂದೆಲ್ಲ ಈ ಜಲಧಾರೆಯನ್ನು ನಾಮಕರಣ ಮಾಡಿದ್ದಾರೆ.
ಈ ಭಾಗದಲ್ಲಿ ಉತ್ತಮವಾಗಿ ಮಳೆಯಾಗಿದ್ದರಿಂದಾಗಿ ಜಲಪಾತ ಮೈದುಂಬಿ ಉನ್ಮಾದದಿಂದ ಧರೆಗೆ ಅಪ್ಪಳಿಸುತ್ತಿರುವುದು ನಯನ ಮನೋಹರ ದೃಶ್ಯವಾಗಿ ಕಂಡುಬರುತ್ತದೆ. ಬಹುತೇಕ ಜಲಪಾತಗಳನ್ನು ದೂರದಿಂದಲೇ ನಿಂತು ನೋಡಿ ಆನಂದಿಸಬಹುದು. ಆದರೆ, ಇಲ್ಲಿ ಬೆನ್ನಿನಲ್ಲಿ ಕಸುವು ಹೊಂದಿದವರು ಜಲಧಾರೆಗೆ ಮೈಯೊಡ್ಡಿ ಮೈ-ಮನ ಹಗುರಮಾಡಿಕೊಳ್ಳಬಹುದು.
ಬೆಟ್ಟದ ತಪ್ಪಲಿನಿಂದ ರಭಸವಾಗಿ ಹರಿದು ಬರುವ ನೀರು ಸುಮಾರು 25 ಅಡಿ ಎತ್ತರದಿಂದ ಬೀಳುತ್ತದೆ. ನೀರು ಬೀಳುವ ಅಡಿಯಲ್ಲಿ ನಿಸರ್ಗವೇ ಹಾಸು ಬಂಡೆಯನ್ನು ನಿರ್ಮಿಸಿರುವುದರಿಂದ ಬಂಡೆಗೆ ಅಪ್ಪಳಿಸಿದ ನೀರು ಹನಿ-ಹನಿಯಾಗಿ ಮೇಲಕ್ಕೆ ಚಿಮ್ಮಿ ಜಲ ಪುಂಜವಾಗಿ ಸಮೀಪ ನಿಂತವರ ಮುಖಕ್ಕೆ ಸಿಡಿದು ಮುತ್ತಿಟ್ಟ ಅನುಭವವಾಗುತ್ತದೆ. ಬೆಟ್ಟದಲ್ಲಿ ಅಡಗಿರುವ ಜಲಪಾತ ದ ದಾರಿಯಲ್ಲಿ ಹೋಗುತ್ತಿದ್ದಂತೆಯೇ ಭೋರ್ಗರೆಯುವ ನೀರಿನ ಸದ್ದೇ ಹೊಸದಾಗಿ ಬಂದವರಿಗೆ ಮಾರ್ಗ ತೋರಿಸುತ್ತದೆ.
ಹೇಗೆ ಬರಬೇಕು: ಗದಗದಿಂದ ಗಜೇಂದ್ರಗಡ ಮಾರ್ಗವಾಗಿ ಬಂದರೆ 18ಕಿಲೋ ಮೀಟರ್. ಕುಷ್ಟಗಿಯಿಂದ 20 ಕಿಲೋ ಮೀಟರ್, ಬಾಗಲಕೋಟ ಜಿಲ್ಲೆ ಇಳಕಲ್ನಿಂದ ಬಂದರೆ 19 ಕಿಲೋ ಮೀಟರ್ ದೂರವಿದೆ.