ಸುದ್ದಿಮೂಲ ವಾರ್ತೆ
ಬೆಂಗಳೂರು,ಜೂ.1: ಮಾಧ್ಯಮದವರ ಸಮಸ್ಯೆಗಳಿಗೆ ನಾನು ಸದಾ ಸ್ಪಂದಿಸುತ್ತೇನೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ ಹೇಳಿದರು.
ಇಂದು ಕುರುಬರ ಸಂಘದಲ್ಲಿ ಹಿಂದುಳಿದ ವರ್ಗಗಳ ಸಂಪಾದಕರ ಹಾಗೂ ವರದಿಗಾರರ ಸಂಘ ಮತ್ತು ಕುರುಬರ ಸಂಘ ಜಂಟಿಯಾಗಿ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ ಪ್ರಶಸ್ತಿ ಪಡೆದ ಹಿರಿಯ ಪತ್ರಕರ್ತ ರುದ್ರಣ್ಣ ಹರ್ತಿಕೋಟೆ ಹಾಗೂ ತಮಗೂ ಆಯೋಜಿಸಿದ್ದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ನಾನು ಸಾಮಾನ್ಯ ಪತ್ರಕರ್ತನಾಗಿ ವೃತ್ತಿಜೀವನ ಆರಂಭಿಸಿ ಸಣ್ಣ ಪತ್ರಿಕೆಗಳ ಮತ್ತು ಗ್ರಾಮೀಣ ಪತ್ರಕರ್ತರ ಸಮಸ್ಯೆಗಳನ್ನು ಖುದ್ದಾಗಿ ಅರಿತಿದ್ದೇನೆ ಮತ್ತು ಅನುಭವಿಸಿದ್ದೇನೆ. ಪತ್ರಿಕೆ ಮತ್ತು ಪತ್ರಕರ್ತರ ಯಾವುದೇ ಸಮಸ್ಯೆಗಳಿಗೆ ನಾನು ಸದಾ ಬೆಂಬಲವಾಗಿ ಇರುತ್ತೇನೆ ಎಂದು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಸಹ ಪತ್ರಿಕೆಗಳು ಮತ್ತು ಪತ್ರಕರ್ತರ ಬಗ್ಗೆ ಅಪಾರ ಕಾಳಜಿ ಉಳ್ಳವರು ಆಗಿದ್ದಾರೆ. ಈ ಹಿಂದೆ ಅವರು ಮುಖ್ಯಮಂತ್ರಿಯಾಗಿದ್ದಾಗ ಅನೇಕ ಪತ್ರಿಕರ್ತರ ಮತ್ತು ಪತ್ರಿಕೆಗಳ ಸಮಸ್ಯೆಗೆ ಸ್ಪಂದಿಸಿ ಮೀಡಿಯಾ ಕಿಟ್, ಜಾಹೀರಾತು ನೀತಿ ಹಾಗೂ ಹಿಂದುಳಿದ ವರ್ಗಗಳ ಪತ್ರಿಕೆಗೆ ವಿಶೇಷ ಜಾಹೀರಾತು ನೀಡುವುದನ್ನು ಆರಂಭಿಸಿದ್ದರು. ಮುಂಬರುವ ದಿನಗಳಲ್ಲಿ ಸಹ ಎಲ್ಲ ಪತ್ರಿಕೆಗಳ ಸಮಸ್ಯೆಗಳಿಗೆ ಸ್ಪಂದಿಸುವ ರೀತಿಯಲ್ಲಿ ನಾನೊಬ್ಬ ಪತ್ರಕರ್ತನಾಗಿ ನನ್ನ ಜವಾಬ್ದಾರಿ ನಿಭಾಯಿಸುತ್ತೇನೆ ಎಂದು ಅಭಯ ನೀಡಿದರು.
ಮಾಜಿ ಸಚಿವ ಎಚ್.ಎಂ. ರೇವಣ್ಣ ಮಾತನಾಡಿ, ಕೆ.ವಿ. ಪ್ರಭಾಕರ್ ಅವರಿಗೆ ದೊರತ ಉನ್ನತ ಹುದ್ದೆ ಇಡೀ ಪತ್ರಿಕಾ ಸಮೂಹಕ್ಕೆ ದೊರೆತ ಗೌರವವಾಗಿದೆ. ಸರ್ಕಾರಕ್ಕೆ ಮತ್ತು ಪತ್ರಕರ್ತರಿಗೆ ಗೌರವ ತರುವ ರೀತಿಯಲ್ಲಿ ಕೆಲಸ ಮಾಡುವ ಪ್ರಾಮಾಣಿಕತೆ ಪ್ರಭಾಕರ್ ಬಳಿ ಇದೆ ಎಂದ ಅವರು, ಇಂದು ಮಾದ್ಯಮ ತನ್ನ ನೈತಿಕತೆಯನ್ನು ಉಳಿಸಿಕೊಳ್ಳುತ್ತಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ಇಂತಹ ಕ್ಲಿಷ್ಟಕರ ಸ್ಥಿತಿಯಲ್ಲಿ ಸರ್ಕಾರ ಮತ್ತು ಮಾಧ್ಯಮದ ಕೊಂಡಿಯಾಗಿ ಪ್ರಭಾಕರ್ ಕೆಲಸ ಮಾಡಬೇಕಿದೆ ಎಂದು ಹೇಳಿದರು.
ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಕೆ. ರವಿ, ಪ್ರಜಾಪ್ರಗತಿ ಪತ್ರಿಕೆ ಸಂಪಾದ ಕೆ.ಎನ್. ನಾಗಣ್ಣ, ಕೆಯುಡಬ್ಲ್ಯೂಜೆ ಅಧ್ಯಕ್ಷ ಶಿವಾನಂದ ತಗಡೂರು, ಹಿರಿಯ ಪತ್ರಕರ್ತ ಗಂಗಾಧರ ಮೊದಲಿಯಾರ್ ಮಾತನಾಡಿ, ವೃತ್ತಿನಿಷ್ಠೆ ಮತ್ತು ಕಷ್ಟಪಟ್ಟ ಫಲವಾಗಿ ಪ್ರಭಾಕರ್ ಅವರಿಗೆ ಈ ಹುದ್ದೆ ದೊರೆತಿದೆ. ಅದೇ ರೀತಿ ರುದ್ರಣ್ಣ ಹರ್ತಿಕೋಟೆ ಸಹ ವೃತ್ತಿಬದ್ಧತೆಯಿಂದಾಗಿ ಕರ್ನಾಟಕದಲ್ಲಿಯೇ ಪ್ರಥಮ ಬಾರಿಗೆ ಪ್ರೆಸ್ ಕೌನ್ಸಿಲ್ ಪ್ರಶಸ್ತಿ ದೊರೆತಿದೆ. ಅವರಿಬ್ಬರು ಕಠಿಣ ಪರಿಶ್ರಮದ ಫಲವಾಗಿ ಈ ಗೌರವಕ್ಕೆ ಪಾತ್ರರಾಗಿದ್ದಾರೆ ಎಂದು ಅಭಿನಂದಿಸಿದರು.
ಮಾಧ್ಯಮಗಳು ತನ್ನ ಮೌಲ್ಯಗಳನ್ನು ಉಳಿಸಿಕೊಂಡಾಗ ಮಾತ್ರ ಅವರಿಗೆ ಆ ಕ್ಷೇತ್ರದಲ್ಲಿ ಗೌರವ ಸಿಗುತ್ತದೆ. ಆ ದಿಸೆಯಲ್ಲಿ ಪತ್ರಕರ್ತರು ಸಮಾಜಮುಖಿಯಾಗಿರಬೇಕು ಮತ್ತು ಸಮಾಜ ಪರವಾಗಿ ಕೆಲಸ ಮಾಡುವ ಸರ್ಕಾರಕ್ಕೆ ಬೆಂಬಲಿಸುವ, ತಪ್ಪು ಮಾಡಿದಾಗ ಚಾಟಿ ಬೀಸುವ ಕೆಲಸವನ್ನೂ ಮಾಡಬೇಕೆಂದು ಸಲಹೆ ಮಾಡಿದರು.
ಪ್ರಶಸ್ತಿ ಸ್ವೀಕರಿಸಿದ ರುದ್ರಣ್ಣ ಹರ್ತಿಕೋಟೆ ಮಾತನಾಡಿ, ಪತ್ರಕರ್ತರ ಪ್ರತಿನಿಧಿಯಾಗಿ ಪ್ರಭಾಕರ್ ಸರ್ಕಾರದಲ್ಲಿ ಭಾಗಿಯಾಗಿದ್ದಾರೆ. ಪತ್ರಕರ್ತರ ಪಿಂಚಣಿ ಮತ್ತು ಇನ್ನಿತರ ಸಮಸ್ಯೆಗಳು ಎದುರಿಸುತ್ತಿದ್ದು, ಸಂಕಷ್ಟದಲ್ಲಿರುವ ಪತ್ರಕ್ತರಿಗೆ ಮತ್ತು ಸಣ್ಣ ಹಾಗೂ ಮಧ್ಯಮವರ್ಗದ ಪತ್ರಿಕೆಗಳಿಗೆ ಸಹಾಯಕವಾಗುವ ರೀತಿಯಲ್ಲಿ ಪ್ರಭಾಕರ್ ನೆರವಾಗಬೇಕೆಂದು ಮನವಿ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಮಾಜಿ ಅಧ್ಯಕ್ಷ ಕಾಂತರಾಜ್ ಅರಸ್ ಮಾತನಾಡಿ, ಜವಾಬ್ದಾರಿಯುತ ಮುಖ್ಯಮಂತ್ರಿಯಿಂದ ಜವಾಬ್ದಾರಿಯುತ ಪತ್ರಕರ್ತನಿಗೆ ಜವಾಬ್ದಾರಿಯಾದ ಸ್ಥಾನ ದೊರೆತಿದೆ. ಇದು ಇಡೀ ಪತ್ರಿಕಾ ಸಮೂಹಕ್ಕೆ ದೊರೆತ ಗೌರವ ಎಂದ ಅವರು, ಪತ್ರಕರ್ತನಿಗೆ ಭದ್ರತೆ ಮತ್ತು ರಕ್ಷಣೆ ಮುಖ್ಯ. ಆ ದಿಸೆಯಲ್ಲಿ ಪತ್ರಕರ್ತರಿಗೆ ಅನುಕೂಲವಾಗುವ ಕೆಲಸವನ್ನು ಪ್ರಭಾಕರ್ ಮಾಡಬೇಕು ಎಂದು ಆಶಯ ವ್ಯಕ್ತಪಡಿಸಿದರು.
ಪತ್ರಿಕೆ ಸಂಪಾದಕರು ಮತ್ತು ವರದಿಗಾರರ ಸಂಘದ ರಾಜ್ಯಾಧ್ಯಕ್ಷ ಕಲಾವಿದ ವಿಷ್ಣು ಸ್ವಾಗತಿಸಿದರು. ಹಿಂದುಳಿದ ವರ್ಗಗಳ ಸಂಪಾದಕರ ಮತ್ತು ವರದಿಗಾರರ ಸಂಘದ ಅಧ್ಯಕ್ಷ ನೀಲಕಂಠ ಕಾರ್ಯಕ್ರಮ ನಿರೂಪಿಸಿದರು, ಮಾಧ್ಯಮ ಅಕಾಡೆಮಿ ಮಾಜಿ ಅಧ್ಯಕ್ಷ ಎಂ. ಸಿದ್ದರಾಜು ಪ್ರಸ್ತಾವಿಕವಾಗಿ ಮಾತನಾಡಿದರು. ಕುರುಬರ ಸಂಘದ ಕಾರ್ಯದರ್ಶಿ ವೆಂಕಟೇಶ ಮೂರ್ತಿ ಸಹ ಪ್ರಭಾಕರ್ ಹಾಗೂ ರುದ್ರಣ್ಣ ಅವರನ್ನು ಸನ್ಮಾನಿಸಿದರು.