ಸುದ್ದಿಮೂಲ ವಾರ್ತೆ
ಬೆಂಗಳೂರು, ಮೇ 24: ಸಮಾಜದಲ್ಲಿ ಜನಪರ ಬದಲಾವಣೆ ತರುವಲ್ಲಿ ಪತ್ರಿಕೋದ್ಯಮದ ಪಾತ್ರ ಪ್ರಮುಖವಾದುದು. ಹಾಗಾಗಿ ನನಗೆ ಪತ್ರಿಕೋದ್ಯಮದ ಘನತೆಯ ಬಗ್ಗೆ ಎಚ್ಚರ ಮತ್ತು ಪ್ರೀತಿ ಇದೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ. ಪ್ರಭಾಕರ್ ಅವರು ಅಭಿಪ್ರಾಯಪಟ್ಟರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯುಜೆ) ಬೆಂಗಳೂರಿನಲ್ಲಿ ಇಂದು ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಕೆಯುಡಬ್ಲ್ಯೂಜೆ ಗೌರವ ಸ್ವೀಕರಿಸಿ ಅವರು ಮಾತನಾಡಿದರು.
ಸಂವಿಧಾನವನ್ನು ಉಳಿಸಲು ಪತ್ರಿಕೋದ್ಯಮ ಸಹಾ ಮಹತ್ವದ ದಾರಿ. ಪತ್ರಿಕೋದ್ಯಮ ನನ್ನ ಉಸಿರು. ಪತ್ರಿಕೋದ್ಯಮ ಅನೇಕ ಮೌಲ್ಯಗಳನ್ನು ಕಲಿಸಿದೆ. ಎಂದರು.
ಪತ್ರಕರ್ತರು ತಮ್ಮ ವೃತ್ತಿಕ್ಷೇತ್ರದಲ್ಲಿ ಭಾರೀ ಸವಾಲನ್ನು ಎದುರಿಸುತ್ತಿದ್ದಾರೆ. ಏನೇ ಆದರೂ ಸದಾ ವೃತ್ತಿ ಬದ್ಧತೆ ಮೆರೆದರೆ ಮಾತ್ರ ಉತ್ತಮ ಪತ್ರಕರ್ತರಾಗಲು ಸಾಧ್ಯ ಎಂದರು.
ಪತ್ರಿಕೋದ್ಯಮ ವೃತ್ತಿಯಲ್ಲಿ ಉತ್ತಮ ಮಾರ್ಗದರ್ಶನ ದೊರೆತರೆ ಸ್ಥಾನಮಾನಗಳು ಪತ್ರಕರ್ತರನ್ನು ಹುಡುಕಿಕೊಂಡು ಬರುತ್ತದೆ. ಸಂವಿಧಾನದ ಆಶಯದ ಅನುಗುಣಕ್ಕೆ ಪತ್ರಕರ್ತರು ನಡೆದುಕೊಳ್ಳುವುದನ್ನು ಕಲಿಯಬೇಕು ಎಂದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಮಾತನಾಡಿ, ಪತ್ರಕರ್ತರಾಗಿ ಒಂದೊಂದೆ ಹೆಜ್ಜೆ ಇಟ್ಟುಕೊಂಡು ಪರಿಶ್ರಮದಿಂದ ಮೇಲೇರಿ ಬಂದ ಪ್ರಭಾಕರ್ ಅವರು ಸಂಯಮದ ನಡವಳಿಕೆಯಿಂದ ಎಲ್ಲರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಿದ್ದಾರೆ ಎಂದರು.
ಅಧಿಕಾರದ ಸ್ಥಾನದಲ್ಲಿದ್ದರೂ ಹಮ್ಮು ಬಿಮ್ಮು ತೋರಿಸಲಿಲ್ಲ. ಮಾನವೀಯ ನೆಲೆಯಲ್ಲಿ ಸದಾ ಸ್ಪಂದಿಸುತ್ತ ಬಂದಿದ್ದಾರೆ. ಕೆಯುಡಬ್ಲ್ಯೂಜೆ ಜೊತೆಗೆ ಅವಿನಾಭಾವ ಸಂಬಂಧವನ್ನು ಹಾಗೆಯೇ ಕಾಪಿಟ್ಟುಕೊಂಡಿರುವುದು ಅಭಿಮಾನದ ಸಂಗತಿ ಎಂದರು.
ಹಿರಿಯ ಪತ್ರಕರ್ತರಾದ ಜಿ.ಎನ್.ಮೋಹನ್ ಮಾತನಾಡಿ, ಅಧಿಕಾರದ ಹುದ್ದೆಯಲ್ಲಿದ್ದಾಗಲೂ ಪ್ರಭಾಕರ್ ಪತ್ರಕರ್ತರಾಗಿ ಉಳಿದಿದ್ದಾರೆ. ಅವರ ಪರಿಶ್ರಮ ಮತ್ತು ಸಮಚಿತ್ತದ ನಡೆ ಎತ್ತರಕ್ಕೆ ಬೆಳೆಸಿದೆ ಎಂದರು.
ಹಿರಿಯ ಪತ್ರಕರ್ತ ಕಂ.ಕ.ಮೂರ್ತಿ ಅವರು ವಿಧಾನಸಭೆ ರೌಡ್ಸ್ ನಲ್ಲಿ ಪ್ರಭಾಕರ್ ಜೊತೆಗಿದ್ದ ಒಡನಾಟ ಮೆಲುಕು ಹಾಕಿದರು.
ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಸಿ. ಲೋಕೇಶ, ಖಜಾಂಚಿ ವಾಸುದೇವ ಹೊಳ್ಳ,
ಹಿರಿಯ ಪತ್ರಕರ್ತರಾದ ಗೋಪಿನಾಥ, ಕಂಕ ಮೂರ್ತಿ, ಚೆಲುವರಾಜು, ಬಿ.ವೆಂಕಟ್ಸಿಂಗ್, ಹರೀಶ್ ಡಿ.ಎಲ್., ರವಿನಾಕಲಗೂಡು, ಗಿರೀಶ್ ಕೋಟೆ, ಅರುಣಾ ಕುಣಿಗಲ್, ಗುರುರಾಜ ಹೂಗಾರ್, ಶಶಿಕಲಾ ಸೇರಿದಂತೆ ಹಲವರು ಪ್ರಭಾಕರ್ ಜೊತೆಗಿನ ಒಡನಾಟ ಮೆಲುಕು ಹಾಕಿ ಕಾರ್ಯಕ್ರಮದಲ್ಲಿ ಶುಭ ಹಾರೈಸಿದರು.
ಕೆಯುಡಬ್ಲ್ಯೂಜೆ ರಾಜ್ಯ ಕಾರ್ಯದರ್ಶಿ ನಿಂಗಪ್ಪ ಚಾವಡಿ ಮತ್ತು ಹಲವು ಜಿಲ್ಲೆಯ ಅಧ್ಯಕ್ಷ ಮತ್ತು ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.
ವಿಜಯ್, ನಾಗೇಶ್ಗೆ ಕೆಯುಡಬ್ಲ್ಯೂಜೆ ಗೌರವ
ಇದೇ ಸಂದರ್ಭದಲ್ಲಿ ಕೆ.ಆರ್.ಸರ್ಕಲ್ ಅಂಡರ್ ಪಾಸ್ ನಲ್ಲಿ ಮಳೆ ನೀರಿನಲ್ಲಿ ಸಿಲುಕಿಕೊಂಡಿದ್ದ ಆರು ಜನರನ್ನು ಮಳೆಯ ನಡುವೆಯೂ ಪಾರು ಮಾಡಲು ಅವಿರತವಾಗಿ ಶ್ರಮಿಸಿದ್ದ ಪಬ್ಲಿಕ್ ಟಿವಿಯ ವಿಜಯಕುಮಾರ್ ಮತ್ತು ನಾಗೇಶ್ ಅವರನ್ನು ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೆಯುಡಬ್ಲ್ಯೂಜೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಮತ್ತು ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಅವರು ಸನ್ಮಾನಿಸಿ, ನಗದು ಬಹುಮಾನ ನೀಡಿ ಸನ್ಮಾನಿಸಿದರು.