ಸುದ್ದಿಮೂಲ ವಾರ್ತೆ
ತಿಪಟೂರು, ಜೂ 13 : ಕಾರ್ಮಿಕ ದೇಶದ ಬೆನ್ನೆಲುಬು, ಕಾರ್ಮಿಕನಿಲ್ಲದ ದೇಶ, ರಾಜ್ಯದ ಪ್ರಗತಿಯನ್ನು ಕಲ್ಪಿಸಿಕೊಳ್ಳಲೂ ಸಾದ್ಯವಿಲ್ಲವೆಂದು ಕುಮಾರ್ ಆಸ್ಪತ್ರೆಯ ವೈದ್ಯ ಡಾ.ಜಿ.ಎಸ್.ಶ್ರೀಧರ್ ಅಭಿಪ್ರಾಯ ಪಟ್ಟರು.
ನಗರದ ನೌಕರರ ಭವನದಲ್ಲಿ ಎಐಟಿಯುಸಿ ಕಟ್ಟಡ ಕಾರ್ಮಿಕ ಸಂಘಟನೆ ವತಿಯಿಂದ 137 ನೇ ವಿಶ್ವ ಕಾರ್ಮಿಕ ದಿನಾಚಾರಣೆ, ಸಮಾವೇಶ ಹಾಗೂ ಹಿರಿಯ ಕಟ್ಟಡ ಕಾರ್ಮಿಕರಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಮಿಕನಿಲ್ಲದೆ ಯಾವೊಬ್ಬ ಶ್ರೀಮಂತ ಅಥವಾ ಮಾಲೀಕ ತನ್ನ ಪ್ರಗತಿಯನ್ನು ಕಾಣಲು ಸಾಧ್ಯವಿಲ್ಲ, ಅದೇ ರೀತಿ ರಾಜ್ಯ ಅಥವಾ ಯಾವುದೇ ದೇಶ ಪ್ರಗತಿಯನ್ನು ಕಾಣಬೇಕಾದರೆ ಕಾರ್ಮಿಕನ ಪಾತ್ರ ಅತೀ ಮುಖ್ಯ. ಕಾರ್ಮಿಕರಲ್ಲಿ ಸಂಘಟಿತ ಮತ್ತು ಅಸಂಘಟಿತ ವಲಯವೆಂದು ವಿಂಗಡಣೆಗಳಾಗಿವೆ ಇವೆಲ್ಲವೂ ಒಗ್ಗೂಡಿ ತಮ್ಮ ಹಕ್ಕುಗಳನ್ನು ಒಗ್ಗಂಟಿನಿಂದ ಪ್ರತಿಪಾದಿಸ ಹೊರಟರೆ ನಿಮ್ಮ ಶಕ್ತಿ ದ್ವಿಗುಣವಾಗುತ್ತದೆ ಎಂದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಾಮ್ರೆಡ್ ಗಿರೀಶ್ ಮಾತನಾಡಿ, ಕಾರ್ಮಿಕ ಪ್ರತಿಯೊಂದು ಕ್ಷೇತ್ರದಲ್ಲಿಯೂ ತನ್ನ ಪರಿಶ್ರಮದಿಂದ ರಾಜ್ಯ ಮತ್ತು ದೇಶ ಕಟ್ಟುವ ಕೆಲಸ ಮಾಡುತ್ತಿದ್ದಾನೆ. ಆದರೆ, ಇಂದಿಗೂ ಆತನಿಗೆ ಸಿಗಬೇಕಾದ ಸವಲತ್ತುಗಳು ಸರಿಯಾದ ಪ್ರಮಾಣದಲ್ಲಿ ಸಿಗುತ್ತಿಲ್ಲ. ನಮ್ಮನ್ನಾಳುವ ಸರ್ಕಾರ ನಮ್ಮನ್ನು ನಿರ್ಲಕ್ಷಿಸುತ್ತಿವೆ ಎನ್ನುವ ಭಾವನೆ ನಮ್ಮಲ್ಲಿ ಮೂಡುತ್ತಿದೆ. ಕಾರ್ಮಿಕರನ್ನು ಕಡೆಗಣಿಸಿದರೆ ಸರ್ಕಾರ ಮತ್ತು ದೇಶಕ್ಕೆ ನಷ್ಟ ಎನ್ನುವ ಪ್ರಜ್ಞೆ ಸರ್ಕಾರ ಮತ್ತು ಅದರ ಪ್ರತಿನಿಧಿಗಳಿಗಿಲ್ಲ ಎನ್ನುವುದೇ ವಿಪರ್ಯಾಸ ಎಂದರು.
ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಕಾಮ್ರೆಡ್ ಗೋವಿಂದರಾಜು ಮಾತನಾಡಿ, ನಮ್ಮ ತಾಲ್ಲೂಕಿನಲ್ಲಿ ನಮ್ಮ ಸಂಘಟನೆಯು ಬಲಗೊಂಡಿದೆ ನಮ್ಮ ಹಕ್ಕನ್ನು ನಾವು ಸಂಘಟಿತ ಹೋರಾಟದಿಂದ ಪಡೆದುಕೊಳ್ಳಬೇಕು. ನಮ್ಮ ಸದಸ್ಯರ ಮಕ್ಕಳಿಗೆ ಉತ್ತಮ ಶಿಕ್ಷಣ, ಆರೋಗ್ಯ ದೊರಕುವಂತೆ ಮಾಡುವುದು ನಮ್ಮ ಆದ್ಯ ಕರ್ತವ್ಯವಾಗಿದೆ ಎಂದರು.
ಕಾರ್ಯಕ್ರಮಕ್ಕೂ ಮುನ್ನ ನಗರ ದೇವತೆ ಶ್ರೀ ಕೆಂಪಾಂಬ ದೇವಾಲಯದಿಂದ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು ಹಾಗೂ ಹಿರಿಯ ಸದಸ್ಯರಿಗೆ ಸನ್ಮಾನ ಮಾಡಲಾಯಿತು
ಜಿಲ್ಲಾ ಖಜಾಂಚಿ ಕಾಮ್ರೆಡ್ ಅಶ್ವತ್ ನಾರಾಯಣ್, ಕಾಮ್ರೆಡ್ ಡೋಂಗ್ರೆ ಹಾಸನ, ಮತ್ತಿಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಚನ್ನಬಸಪ್ಪ, ತಾ.ಅಧ್ಯಕ್ಷ ನಾರಾಯಣಸ್ವಾಮಿ, ಉಪಾಧ್ಯಕ್ಷ ಗೋವಿಂದಯ್ಯ, ಖಜಾಂಚಿ ಶೇಖರ್, ಸಂಘಟನಾ ಕಾರ್ಯದರ್ಶಿ ಮುನಿಶಂಕರಪ್ಪ, ಸದಸ್ಯರಾದ ಅಬ್ದುಲ್ ಮುಜೀಬ್, ನಗರ ಸಂಚಾಲಕ ರೋಹನ್ ರಾಜ್, ತೇಜಸ್ವಿನಿ, ವೀಣಾ, ಲತಾಮಣಿ ಮತ್ತು ನಾಗರಾಜು ಸೇರಿದಂತೆ ಜಿಲ್ಲಾ ಮಂಡಳಿಯ ಸದಸ್ಯರು ಹಾಗೂ ಸಂಘಟನೆಯ ಪದಾಧಿಕಾರಿಗಳು ಭಾಗವಹಿಸಿದ್ದರು.