ಸುದ್ದಿಮೂಲ ವಾರ್ತೆ
ತುಮಕೂರು, ನ. 29 : ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅತಿಥಿ ಉಪನ್ಯಾಸಕರ ಧರಣಿ 7ನೇ ದಿನಕ್ಕೆ ಕಾಲಿಟ್ಟಿದ್ದು, ಕಾರ್ಮಿಕ ಮುಖಂಡರು ಪ್ರತಿಭಟನಾ ಸ್ಥಳಕ್ಕೆ ಧಾವಿಸಿ ಅತಿಥಿ ಉಪನ್ಯಾಸಕರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿ ಕಚೇರಿ ಎದುರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅತಿಥಿ ಉಪನ್ಯಾಸಕರು ನಡೆಸುತ್ತಿರುವ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಸೈಯದ್ ಮುಜೀದ್, ಅತಿಥಿ ಉಪನ್ಯಾಸಕರ ಸಮಸ್ಯೆ ಇಂದು ನಿನ್ನೆಯದಲ್ಲ.ಈ ಹೋರಾಟವನ್ನು ತಾರ್ಕಿಕ ಅಂತ್ಯ ಕಾಣುವವರೆಗೂ ನಿಮ್ಮ ಹೋರಾಟಕ್ಕೆ ನಿಲ್ಲಿಸಬಾರದು. ನೀವು ವಿಭಿನ್ನವಾಗಿ ಹೋರಾಟಗಳನ್ನು ಮಾಡುತ್ತಿದ್ದೀರಿ, ಆದರೆ ನಿಮ್ಮ ಹೋರಾಟ ಸೌಮ್ಯ ಸ್ವಭಾವದಲ್ಲಿದೆ.
ಈ ರೀತಿ ಹೋರಾಟ ಮಾಡಿದರೆ ಯಾವ ಸರ್ಕಾರಗಳು ಕಿವಿಗೊಡುವುದಿಲ್ಲ. ಹೋರಾಟದ ಸ್ವರೂಪವನ್ನು ತೀವ್ರಗೊಳಿಸಿದಾಗ ಮಾತ್ರ ಸರ್ಕಾರ ಎಚ್ಚೆತ್ತುಕೊಳ್ಳುತ್ತದೆ. ನಿಮ್ಮ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲ ಇದೆ ಎಂದರು.
ಗ್ರಾಮ ಪಂಚಾಯಿತಿ ದಿನಗೂಲಿ ನೌಕರರ ಸಂಘದ ಅಧ್ಯಕ್ಷ ಸುಬ್ರಮಣ್ಯಮಾತನಾಡಿ, ಅತಿಥಿ ಉಪನ್ಯಾಸಕರು ಈ ರೀತಿಯಾಗಿ ಸೌಮ್ಯವಾಗಿ ಧರಣಿ ಪ್ರತಿಭಟನೆ ನಡೆಸಿದರೆ, ಸರ್ಕಾರಗಳು ಕಿವಿಗೊಡುವುದಿಲ್ಲ.
ನಿಮ್ಮ ಹೋರಾಟಗಳು ತೀವ್ರ ರೂಪದಲ್ಲಿದ್ದಾಗ ಮಾತ್ರ ನ್ಯಾಯ ದೊರೆಯುತ್ತದೆ. ಇಲ್ಲವಾದಲ್ಲಿ ಸರ್ಕಾರ ನಿಮ್ಮ ಬೇಡಿಕೆಗಳನ್ನು ಗಮನ ಹರಿಸುವುದಿಲ್ಲ ಎಂದು ಹೋರಾಟಗಾರರಿಗೆ ಕಿವಿಮಾತು ಹೇಳಿದರು.
ಜಿಲ್ಲಾಧ್ಯಕ್ಷ ಡಾ. ಧರ್ಮವೀರ್ ಮಾತನಾಡಿ, ಸಿಪಿಐ(ಎಂ) ಸಂಘಟನೆಯಿಂದ ಅತಿಥಿ ಉಪನ್ಯಾಸಕರ ಹೋರಾಟಕ್ಕೆ ಬೆಂಬಲ ದೊರೆತಿದ್ದು, ಮುಂದಿನ ದಿನಗಳಲ್ಲಿ ನಮ್ಮ ಹೋರಾಟವನ್ನು ತೀವ್ರಗೊಳಿಸುವುದಾಗಿ ತಿಳಿಸಿದರು.
ಸರ್ಕಾರ ಇನ್ನಾದರೂ ನಮ್ಮ ನ್ಯಾಯ ಸಮ್ಮತ ಬೇಡಿಕೆಯನ್ನು ಈಡೇರಿಸದಿದ್ದರೆ ಹೋರಾಟದ ರೂಪವನ್ನು ಬದಲಿಸುವುದಾಗಿ ಸರ್ಕಾರಕ್ಕೆ ಎಚ್ಚರಿಸಿದ್ದಾರೆ.
ಜತೆಗೆ ಇಂದು ಅತಿಥಿ ಉಪನ್ಯಾಸಕರು ಬೋಂಡ ಬಜ್ಜಿ ಮಾರಾಟ ಮಾಡುವ ಮೂಲಕ ಅತಿಥಿ ಉಪನ್ಯಾಸಕರು ಧರಣಿಯನ್ನು ಮಾಡುತ್ತಿದ್ದು, ನಾಳೆ ಮತ್ತೊಂದು ರೀತಿಯಲ್ಲಿ ವಿಭಿನ್ನವಾಗಿ ನಾವು ಪ್ರತಿಭಟನೆ ಮಾಡುವುದಾಗಿ ತಿಳಿಸಿದರು.
ಪ್ರತಿಭಟನೆಯಲ್ಲಿ ಅತಿಥಿ ಉಪನ್ಯಾಸಕರುಗಳಾದ ಸಿದ್ದಲಿಂಗು, ಗಿರೀಶ್, ಎರ್ರಿಸ್ವಾಮಿ,ಹರ್ಷಿತ, ಶಂಕರ್ ಹಾರೋಗೆರೆ ,ಸವಿತಾ, ಮಹೇಶ್, ಕಾಂತರಾಜು ಸೇರಿದಂತೆ ನೂರಾರು ಅತಿಥಿ ಉಪನ್ಯಾಸಕರು ಭಾಗವಹಿಸಿದ್ದರು.