ಸುದ್ದಿಮೂಲ ವಾರ್ತೆ
ಹೊಸಕೋಟೆ, ನ. 10 : ತಾಲೂಕು ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಅಧಿಕಾರಿಗಳು ಆಸ್ಪತ್ರೆಯಲ್ಲಿ ಕಡತಗಳ ನಿರ್ವಹಣೆಯಲ್ಲಿ ವಿಫಲರಾಗಿರೋದನ್ನು ಕಂಡು ಶಾಸಕ ಶರತ್ ಬಚ್ಚೇಗೌಡ ಅಸಮಾಧಾನ ಗೊಂಡ ಘಟನೆ ನಡೆಯಿತು.
ಆಸ್ಪತ್ರೆ ಆವರಣದಲ್ಲಿ ಆರೋಗ್ಯ ರಕ್ಷಾ ಸಮಿತಿ ಪೂರ್ವಭಾವಿ ಸಭೆಯಲ್ಲಿ ಶಾಸಕ ಶರತ್ ಬಚ್ಚೇಗೌಡ ಅಧಿಕಾರಿಗಳ ವಿರುದ್ಧ ಅಸಮಾಧಾನ ಗೊಂಡರು. ಮುಂದಿನ ತ್ರೈಮಾಸಿಕ ಅವಧಿಗೆ ಹಣದ ಬಿಡುಗಡೆಯ ದೃಷ್ಟಿಯಿಂದ ಸಭೆಯನ್ನು ನಡೆಸಲಾಯಿತು. ಆದರೆ, ಈ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿ ನಡೆಸಿದ ಮರಣೋತ್ತರ ಪರೀಕ್ಷೆಗಳ ಸಂಖ್ಯೆ, ಆಮ್ಲಜನಕ ಬಳಕೆ ಪ್ರಮಾಣ, ಡಿ ಗ್ರೂಪ್ ನೌಕರರ ಮರಣದ ನಂತರ ಗೌರವಧನ ಬಿಡುಗಡೆ, ಮೆಡಲಿಕ್ ತ್ಯಾಜ್ಯ ನಿರ್ವಹಣೆಗೆ ಹಣ ಬಿಡುಗಡೆ, ಮಾಸಿಕವಾರು ಮಾಡಲಾಗಿರುವ ಕ್ಷ-ಕಿರಣಗಳ ಸಂಖ್ಯೆ ಇದರ ಬಗ್ಗೆ ಕಡತ ನಿರ್ವಹಣೆ ಮಾಡಿಲ್ಲ. ದಾಖಲೆ ಕೇಳಿದರೆ ಕೊಡಲು ಅಧಿಕಾರಿಗಳು ತಡಬಡಾಯಿಸಿದರು. ಇದರಿಂದ ಅಸಮಾಧಾನಗೊಂಡರು.
ನೀವು ಮಾಡಿರುವ ಖರ್ಚಿಗೆ ಅಥವಾ ನೀವು ಕೇಳಿದಷ್ಟು ಹಣ ಬಿಡುಗಡೆಗೆ ಅನುಮೋದನೆ ಕೊಡಲು ನಾವು ಇಲ್ಲಿಗೆ ಬರಬೇಕಾ? ಕನಿಷ್ಠಪಕ್ಷ ಯಾವ ತಿಂಗಳಿನಲ್ಲಿ ಯಾವುದಕ್ಕೆ ಎಷ್ಟು ಖರ್ಚು ಮಾಡಿದ್ದಿರಾ ಎಂದು ಅದಕ್ಕೆ ಪೂರಕವಾದ ದಾಖಲೆಗಳನ್ನು ಒದಗಿಸಬೇಕಲ್ಲವೇ? ಆದ್ದರಿಂದ ಮುಂದಿನ ಸಭೆಯೊಳಗೆ ಕಳೆದ ತ್ರೈಮಾಸಿಕ ವರದಿ ಅನುಮೋದನೆ ಪಡೆದ ನಂತರ ಮುಂದಿನ ತ್ರೈಮಾಸಿಕ ಹಣದ ಬಿಡುಗಡೆಗೆ ಸೂಕ್ತ ವಿವರಣೆಯೊಂದಿಗೆ ಮಾಹಿತಿ ನೀಡಬೇಕು ಎಂದು ಆಸ್ಪತ್ರೆಯ ಆಡಳಿತ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಉಪವಿಭಾಗಾಧಿಕಾರಿ ಶ್ರೀನಿವಾಸ್, ತಾಲೂಕು ಆರೋಗ್ಯ ಅಧಿಕಾರಿ ಡಾ. ವೀಣಾ, ತಾಲೂಕು ಆಸ್ಪತ್ರೆ ಆಡಳಿತ ಅಧಿಕಾರಿ ಡಾ. ಸತೀಶ್, ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು ಹಾಜರಿದ್ದರು.