ಸುದ್ದಿಮೂಲ ವಾರ್ತೆ
ಮೈಸೂರು, ಅ.24: ಕರುನಾಡಿನ ಸಾಂಸ್ಕೃತಿಕ ಅಸ್ಮಿತೆಯ ಪ್ರತೀಕವಾದ ಐತಿಹಾಸಿಕ ನಾಡಹಬ್ಬ ದಸರಾ ಹಬ್ಬದ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿಯ ಮೆರವಣಿಗೆ ಅತ್ಯಂತ ಭವ್ಯ ಮತ್ತು ವೈಭವಯುತವಾಗಿ ಮಂಗಳವಾರ ನಡೆಯಿತು. ಇದಕ್ಕೆ ರಾಜ್ಯದಿಂದಲೇ ಮಾತ್ರವಲ್ಲ, ದೇಶ ವಿದೇಶಗಳಿಂದ ಆಗಮಿಸಿದ್ದ ಜನರು ಸಾಕ್ಷಿಯಾದರು.
ಅಭಯ್ಯೋ.. ಅಭಯೋ…ಹುಃ ನಡಿಲಾ. ನಡಿಲಾ.. ಎಂದು ತನ್ನ ಪ್ರೀತಿಯ ಮಾವುತ ಜೆ.ಎಸ್. ವಸಂತ ಅವರು ಕಿವಿ ಮೇಲೆ ಕೈಗಳನ್ನು ಸವರುತ್ತಿದ್ದಂತೆ 750 ಕೆಜಿ ತೂಕದ ಚಿನ್ನದ ಅಂಬಾರಿಯನ್ನು ಹೊತ್ತು ಗಜಗಾಂಭೀರ್ಯದಿಂದ ಅಭಿಮನ್ಯು ವೇದಿಕೆ ಬಳಿ ಬಂದು ನಿಂತ. ಆಗ ಅಂಬಾರಿಯಲ್ಲಿ ಪ್ರತಿಷ್ಠಾಪಿದ್ದ ತಾಯಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಸಿಎಂ ಸಿದ್ದರಾಮಯ್ಯ ಐತಿಹಾಸಿಕ ಜಂಬೂಸವಾರಿ ಮೆರವಣಿಗೆಗೆ ಚಾಲನೆ ನೀಡಿದರು. ಆಗ ಅರಮನೆ ಆವರಣದಲ್ಲಿ ಹಸೋದ್ಘಾರ ಮೊಳಗಿತು.
ಮುಖ್ಯಮಂತ್ರಿಗಳ ಜೊತೆಯಲ್ಲೇ ಡಿಸಿಎಂ ಡಿ.ಕೆ ಶಿವಕುಮಾರ್, ರಾಜವಂಶಸ್ಥ ಯದುವೀರ್ ಒಡೆಯರ್, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಸಿ ಮಹದೇವಪ್ಪ, ಮೇಯರ್ ಶಿವಕುಮಾರ್, ಡಿಸಿ ಡಾ.ಕೆ.ರಾಜೇಂದ್ರ, ನಗರ ಪೊಲೀಸ್ ಆಯುಕ್ತ ರಮೇಶ್ ಬಾನೊತ್ ಚಾಮುಂಡಿದೇವಿಗೆ ಪುಷ್ಪ ನಮನ ಸಲ್ಲಿಸಿದರು.
ಕ್ಯಾಪ್ಟನ್ ಅಭಿಮನ್ಯು ಅಕ್ಕಪಕ್ಕದಲ್ಲಿ ಕುಮ್ಕಿ ಆನೆಗಳಾದ ಲಕ್ಷ್ಮೀ, ವಿಜಯಾ ಸಾಥ್ ನೀಡಿದವು. ಸತತ 4ನೇ ಬಾರಿ ಚಿನ್ನದ ಅಂಬಾರಿಯನ್ನು ಅಭಿಮನ್ಯು ಹೊತ್ತಿದ್ದು, ಜಂಬೂ ಸವಾರಿ ಮೆರವಣಿಗೆ, ಕೆ.ಆರ್.ಸರ್ಕಲ್ , ಆರ್ಯವೇದ ಸರ್ಕಲ್, ತಿಲಕ್ ನಗರ, ಬಂಬೂ ಬಜಾರ್ ಮೂಲಕ ಬನ್ನಿ ಮಂಟಪ್ಪಕ್ಕೆ ತಲುಪಿತು. ರಸ್ತೆಯ ಇಕ್ಕೆಲಗಳಲ್ಲಿ ಜನಸಾಗರವೇ ಕಿಕ್ಕಿರಿದು ನಿಂತು ರಾಜಪಥದಲ್ಲಿ ಸಾಗಿದ ಮನಮೋಹಕ, ರಮ್ಯವಾದ ಜಂಬೂಸವಾರಿ ದಿಬ್ಬಣವನ್ನು ಕಣ್ತುಂಬಿಕೊಂಡರು. ಅರಮನೆಯಿಂದ ಬನ್ನಿ ಮಂಟಪದವರೆಗೆ 5 ಕಿ.ಮೀ. ವರೆಗೆ ನಡೆದ ಮೆರವಣಿಗೆಯಲ್ಲಿ 31 ಜಿಲ್ಲೆಗಳ ಸಂಸ್ಕೃತಿಯನ್ನು ಬಿಂಬಿಸುವ ಬರೋಬ್ಬರಿ 49 ಸ್ತಬ್ಧಚಿತ್ರಗಳು ಮತ್ತು ನಾನಾ ಕಲಾತಂಡಗಳು ಜನಮನ ಸೂರೆಗೊಂಡವು.
2020ರಿಂದ ಅಂಬಾರಿ ಹೊರುವ ಕಾಯಕವನ್ನು ಸಮರ್ಥವಾಗಿ ನಿಭಾಯಿಸಿ ಸೈ ಎನಿಸಿಕೊಂಡಿರುವ ಅಭಿಮನ್ಯು ಜೊತೆಗೆ ಮಾಜಿ ಕ್ಯಾಪ್ಟನ್ ಅರ್ಜುನ, ಭೀಮ, ಮಹೇಂದ್ರ, ಧನಂಜಯ, ಗೋಪಿ, ಕಂಜನ್, ಲಕ್ಷ್ಮೀ, ಪ್ರಶಾಂತ, ಸುಗ್ರೀವ್ ಸೇರಿ 12 ಆನೆಗಳು ಹೆಜ್ಜೆ ಹಾಕಿದವು. ಜನರು–ಪ್ರವಾಸಿಗರು ಚಿನ್ನದ ಅಂಬಾರಿಯಲ್ಲಿ ಇದ್ದ ಚಾಮುಂಡೇಶ್ವರಿಗೆ ಕೈ ಮುಗಿದು ನಮಿಸಿದರೆ, ಗಜಪಡೆಯ ನಡಿಗೆಯನ್ನು ನೋಡಿ ಆನಂದಿಸಿದರು.
ನಂದಿಧ್ವಜ, ವೀರಗಾಸೆ, ನಾದಸ್ವರ, ನೌಫತ್, ನಿಶಾನೆ ಆನೆಗಳು, ಎನ್ಸಿಸಿ, ಸ್ಕೌಟ್ಸ್, ಗೈಡ್ಸ್, ವಿವಿಧ ಪೊಲೀಸ್ ತುಕಡಿಗಳು, ನಾಡಿನ ಕಲೆ, ಸಂಸ್ಕೃತಿ ಬಿಂಬಿಸುವ ಸ್ತಬ್ಧ ಚಿತ್ರಗಳು, ಜಾನಪದ ಕಲಾ ತಂಡಗಳು ಮೆರವಣಿಗೆಯಲ್ಲಿ ಸಾಗಿದವು. ಹೀಗೆ ಸಾಂಸ್ಕೃತಿಕ ವೈಭೋಗ: ಸಾಂಸ್ಕೃತಿಕ ಕಲಾತಂಡಗಳು ಮೆರವಣಿಗೆಗೆ ಇನ್ನಷ್ಟು ಮೆರಗು ನೀಡಿದವು. . ಅಂದಾಜು 1200 ಕಲಾವಿದರು ತಮ್ಮ ಕಲೆಯನ್ನು ಪ್ರದರ್ಶಿಸುವ ಮೂಲಕ ಕರುನಾಡಿನ ಸಂಸ್ಕೃತಿಯನ್ನು ಮೆರವಣಿಗೆಯಲ್ಲಿ ಯಶಸ್ವಿಯಾಗಿ ಪ್ರತಿಬಂಬಿಸಿದ್ದು ಅಮೋಘವಾಗಿತ್ತು
ಎಲ್ಲವೂ ಸುಗಮ..
ಜಂಬೂಸವಾರಿ, ಪಂಜಿನ ಕವಾಯತು ಭದ್ರತೆಗಾಗಿ ಸ್ಥಳೀಯ 2000, ಹೊರ ಜಿಲ್ಲೆಗಳಿಂದ 4200, ಸಶಸ್ತ್ರ ಪಡೆಗಳು ಸೇರಿದಂತೆ ಒಟ್ಟು 7 ಸಾವಿರ ಪೊಲೀಸರನ್ನು ನಿಯೋಜಿಸಲಾಗಿತ್ತು. ಜೊತೆಗೆ ಸಶಸ್ತ್ರ ಪಡೆಗಳು, ವಿಧ್ವಂಸಕ ಕೃತ್ಯ ಪತ್ತೆ ದಳಗಳು, ಬಾಂಬ್ ನಿಷ್ಕ್ರಿಯ ದಳ, ವಿಶೇಷ ಗರುಡ ಪಡೆ ಸಹ ಇತ್ತು. ಆದ್ದರಿಂದ ದಸರಾ ಹಬ್ಬ ಯಾವುದೇ ಅಡಚಣೆಗಳಿಲ್ಲದೆ ಸೂಸೂತ್ರವಾಗಿ ನಡೆಯಿತು.
ಸಂಪನ್ನ
ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಜಂಬೂ ಸವಾರಿ ಮೆರವಣಿಗೆಯೊಂದಿಗೆ ಕಳೆದ ಹತ್ತು ದಿನಗಳಿಂದ ಸಾಂಪ್ರದಾಯಿಕವಾಗಿ ಸಡಗರ, ಸಂಭ್ರಮದಿಂದ ನಡೆದ ನಾಡಹಬ್ಬ ದಸರಾ ಸಂಪನ್ನಗೊಂಡಿತು.
ವಿಳಂಬವಾಗಿ ಜಂಬೂ ಸವಾರಿಗೆ ಚಾಲನೆ
ನಾಡಹಬ್ಬ ದಸರಾ ಜಂಬೂಸವಾರಿ ಮೆರವಣಿಗೆ ಚಾಮುಂಡಿಮೂರ್ತಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಸಿಎಂ ಸಿದ್ದರಾಮಯ್ಯ ಚಾಲನೆ ನೀಡುವ ಪ್ರಕ್ರಿಯೇ ಈ ಬಾರಿ ನಿಗದಿತ ಸಮಯಕ್ಕಿಂತ ತಡವಾಗಿ ಪುಷ್ಪಾರ್ಚನೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.
ರಾಜ್ಯ ಸರ್ಕಾರ ಮುದ್ರಿಸಿ ವಿತರಿಸಿರುವ ಆಹ್ವಾನ ಪತ್ರಿಕೆ ಪ್ರಕಾರ ಜಂಬೂಸವಾರಿ ಮೆರವಣಿಗೆಗೆ ಸಂಜೆ 4.40 ರಿಂದ ಗಂಟೆಯೊಳಗೆ ಒಳಗೆ ಸಲ್ಲುವ ಮೀನ ಲಗ್ನದಲ್ಲಿ ಸಿಎಂ ಸಿದ್ಧರಾಮಯ್ಯ ಪುಷ್ಪಾರ್ಚನೆ ಮಾಡಬೇಕಿತ್ತು. ಆದರೆ, ನಿಗದಿತ ಸಮಯಕ್ಕೆ ಪುಷ್ಪಾರ್ಚನೆ ಆಗದೆ 5 ಗಂಟೆ 9 ನಿಮಿಷಕ್ಕೆ ಅಂದರೆ 9 ನಿಮಿಷ ತಡವಾಗಿ ಪುಷ್ಪಾರ್ಚನೆ ನೆರವೇರಿದೆ ಎಂದು ಮೂಲಗಳು ತಿಳಿಸಿವೆ
ಇದೇ ವೇಳೆ ಎಂದಿನಂತೆ ಈ ಬಾರಿಯೂ ಜನರ ತೆರಿಗೆ ಹಣದಿಂದ ದಸರಾ ಅಧಿಕಾರಿಗಳು ಮತ್ತು ಅಧಿಕಾರಸ್ಥ ರಾಜಕಾರಣಿಗಳಿಗೆ ಸೀಮಿತವಾಗಿತ್ತು. ಪಾಸ್ಗಳನ್ನು ಹೆಚ್ಚಾಗಿ ಅಧಿಕಾರಸ್ಥರೊಡನೆ ಸಂಪರ್ಕ ಹೊಂದಿರುವವರಿಗೆ, ಹೆಚ್ಚು ನೀಡಲಾಗಿತ್ತು ಎಂಬ ಅಸಮಾಧಾನ ಕೂಡ ವ್ಯಕ್ತವಾಗಿದೆ.