ಸುದ್ದಿಮೂಲ ವಾರ್ತೆ
ಬೆಂಗಳೂರು, ಜು.3: ಹಾಸನ ಜಿಲ್ಲೆ ಸಕಲೇಶಪುರ ತಾಲೂಕು ಯಸಳೂರು ಹೋಬಳಿ ಮಂಕನಹಳ್ಳಿ ಗ್ರಾಮದ ಸರ್ವೆ ನಂ. 141ರ ಅರಣ್ಯ ಪ್ರದೇಶದಲ್ಲಿ 3 ಎಕರೆ 17 ಗುಂಟೆ ಅತಿಕ್ರಮಣ ಮಾಡಿ ಪ್ರವೇಶ ಮಾಡಿ ಅಕ್ರಮವಾಗಿ ರೆಸಾರ್ಟ್ ನಿರ್ಮಿಸಿದ್ದ ಜಾಗವನ್ನು ಅರಣ್ಯ ಇಲಾಖೆ ಕಾರ್ಯಾಚರಣೆ ಮಾಡಿ ಮರುವಶ ಪಡಿಸಿಕೊಂಡಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಖಾತೆ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಅರಣ್ಯ ಭೂಮಿ ಒತ್ತುವರಿ ಮಾಡಿದ್ದ ಪ್ರಕರಣದಲ್ಲಿ ಅಪೀಲುದಾರರ ಮೇಲ್ಮನವಿ ವಜಾಗೊಂಡಿದ್ದು, ಅಕ್ರಮವಾಗಿ ಒತ್ತುವರಿ ಮಾಡಿದ್ದ ಅರಣ್ಯ ಭೂಮಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಸ್ಪಷ್ಡಪಡಿಸಿದರು.
ಅಧಿಕಾರಿಗಳ ವಿರುದ್ಧವೂ ಕ್ರಮ:
ತಾವು ಸಚಿವರಾದ ಬಳಿಕ ಒಂದು ತಿಂಗಳ ಅವಧಿಯಲ್ಲಿ ಚನ್ನರಾಯಪಟ್ಟಣ ಬಳಿ ಅರಣ್ಯ ಪ್ರದೇಶದಲ್ಲಿ ಅಕ್ರಮ ಕಲ್ಲುಗಣಿಗಾರಿಕೆಗೆ ನಿರಾಕ್ಷೇಪಣೆ ಪತ್ರ ನೀಡಿದ್ದ ಅಧಿಕಾರಿಯನ್ನು ಮತ್ತು 6 ತೇಗದ ಮರ ಕಡಿತಲೆಗೆ ಅನುಮತಿ ಕೋರಿದರೆ 66 ಮರ ಕಡಿಯಲು ನೆರವಾದ ವಿರಾಜಪೇಟೆ ವಿಭಾಗದಲ್ಲಿ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ. ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಅರಣ್ಯ ಇಲಾಖೆ ಅಧಿಕಾರಿಗಳು ಈಗ ಚುರುಕಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದರು.
ಅರಣ್ಯ ಇಲಾಖೆಯಲ್ಲಿ ಕ್ರಾಂತಿಕಾರಿ ಬದಲಾವಣೆ ತರುವುದು ತಮ್ಮ ಗುರಿಯಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ರಾಜ್ಯ ಸರ್ಕಾರ. ಅರಣ್ಯ, ಪರಿಸರ ಉಳಿಸಲು ಬದ್ಧವಾಗಿದೆ. ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವನಾಗಿ ಅರಣ್ಯ ಸಂರಕ್ಷಣೆಗೆ ಪ್ರಥಮ ಆದ್ಯತೆ ನೀಡಿರುವುದಾಗಿ ತಿಳಿಸಿದರು.
ಅರಣ್ಯ ಭೂಮಿ ಕಬಳಿಸುವವರು ಎಷ್ಟೇ ಪ್ರಭಾವಿಗಳಾದರೂ ಅವರ ವಿರುದ್ಧ ಕಾನೂನು ರೀತ್ಯ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಸ್ಪಷ್ಟ ಪಡಿಸಿದರು.