ಬೆಂಗಳೂರು, ಜು.02: ಚಾಮರಾಜನಗರ ಜಿಲ್ಲೆಯ ಕಗ್ಗಲಿಗುಂದಿ ಗ್ರಾಮದಲ್ಲಿ ಜೂನ್ ತಿಂಗಳಲ್ಲಿ ದಾಳಿ ಮಾಡಿ ಬಾಲಕಿ ಸಾವಿಗೆ ಕಾರಣವಾಗಿದ್ದ ಹಾಗೂ ಮತ್ತಿಬ್ಬರ ಮೇಲೆ ದಾಳಿ ಮಾಡಿದ್ದ ಚಿರತೆಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.
ಜೂನ್ ತಿಂಗಳಲ್ಲಿ ಚಿರತೆ ದಾಳಿಯಿಂದ ಗಾಯಗೊಂಡಿದ್ದ ಸುಶೀಲ (14)ಗೆ ಮೈಸೂರಿನ ಆಸ್ಪತ್ರೆಯಲ್ಲಿ 15 ದಿನಗಳ ಕಾಲ ಚಿಕಿತ್ಸೆ ನೀಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಬಾಲಕಿ ಜು.15ರಂದು ಮೃತಪಟ್ಟಿದ್ದಳು. ಅರಣ್ಯ ಇಲಾಖೆ ಮೃತ ಬಾಲಕಿಯ ಕುಟುಂಬಕ್ಕೆ 15 ಲಕ್ಷ ರೂ. ಪರಿಹಾರವನ್ನೂ ವಿತರಿಸಿತ್ತು.
ಈ ಚಿರತೆಯನ್ನು ಹಿಡಿಯಲು ಅರಣ್ಯ ಇಲಾಖೆ ಇಟ್ಟಿದ್ದ ಬೋನ್ ಗೆ ಇಂದು ಬೆಳಗ್ಗೆ ಸೆರೆಸಿಕ್ಕಿದ್ದು, ಈ ಚಿರತೆಯನ್ನು ಬೆಂಗಳೂರು ಬಳಿಯ ಬನ್ನೇರುಘಟ್ಟದ ಪುನರ್ವಸತಿ ಕೇಂದ್ರಕ್ಕೆ ರವಾನಿಸಲಾಗಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.