ಸುದ್ದಿಮೂಲ ವಾರ್ತೆ
ಬೆಂಗಳೂರು, ಆ.25: ಬೆಂಗಳೂರು ಸೇರಿದಂತೆ ಕರ್ನಾಟಕಕ್ಕೆ ವಾಯುಮಾಲಿನ್ಯ ಆತಂಕದ ವಿಷಯವಾಗಿದೆ ಎಂದು ಅರಣ್ಯಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ ಕಳವಳ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ನಡೆದ ಇಂಡಿಯಾ ಕ್ಲೀನ್ ಏರ್ ಶೃಂಗಸಭೆಯ (ಐಸಿಎಎಸ್ 2023) 2 ನೇ ದಿನದ ಆರಂಭಿಕ ಭಾಷಣದಲ್ಲಿ ಮಾತನಾಡಿದ ಅವರು, ಪ್ರತಿ ಚಳಿಗಾಲದಲ್ಲಿ ದೆಹಲಿಯ ನಾಗರಿಕರು ಎದುರಿಸುವಂತಹ ಸನ್ನಿವೇಶವನ್ನು ಕರ್ನಾಟಕ ಎದುರಿಸದಂತೆ ನೋಡಿಕೊಳ್ಳುವುದಕ್ಕೆ ತಕ್ಷಣ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಅವರು ಕರೆ ನೀಡಿದರು.
ಬೆಂಗಳೂರು ಮತ್ತು ಕರ್ನಾಟಕವನ್ನು ಮಾಲಿನ್ಯ ಮುಕ್ತ ಮಾಡಲು ಶ್ರಮಿಸುತ್ತಿದ್ದೇನೆ. ಉತ್ತಮ ಗಾಳಿ ಜನರಿಗೆ ದೊರೆಯುವಂತೆ ಮಾಡಲು ಪ್ರಯತ್ನಿಸುತ್ತದ್ದೇನೆ. ನಾವೆಲ್ಲರೂ ಒಟ್ಟಾಗಿ ಪರಿಸರವನ್ನು ರಕ್ಷಿಸಬೇಕು ಹಾಗೂ ಉಜ್ವಲ, ಆರೋಗ್ಯಕರ ಭವಿಷ್ಯವನ್ನು ಖಚಿತಪಡಿಸಿಕೊಳ್ಳಕು ಎಂದು ಅವರು ಸಲಹೆ ನೀಡಿದರು.
ಇಂದು ಕಲುಷಿತ ಗಾಳಿಯನ್ನು ಉಸಿರಾಡುವುದರಿಂದ ಆರೋಗ್ಯದ ಮೇಲೆ ಆಗುವ ದುಷ್ಪರಿಣಾಮಗಳ ಬಗ್ಗೆ ಪ್ರತಿಯೊಬ್ಬರಿಗೂ ತಿಳಿದಿದೆ. ಅದರಲ್ಲೂ ನಾನು ನಿರ್ದಿಷ್ಟವಾಗಿ ನವದೆಹಲಿಯ ಪ್ರಕರಣವನ್ನು ಎತ್ತಿ ತೋರಿಸಲು ಬಯಸುತ್ತೇನೆ. ಪ್ರತಿ ವರ್ಷ ಚಳಿಗಾಲದಲ್ಲಿ ಅದು ವಿಷಾನಿಲದ ಪ್ರದೇಶವಾಗಿ ಬದಲಾಗುತ್ತದೆ. ಗಾಳಿಯ ಕೆಟ್ಟ ಗುಣಮಟ್ಟ ಮತ್ತು ನಗರದ ಮೇಲಿ ಇಬ್ಬನಿ ಅಲ್ಲಿನ ನಿವಾಸಿಗಳಿಗೆ ಉಸಿರಾಟವನ್ನು ಸಮಸ್ಯೆ ಉಂಟು ಮಾಡುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ರಾಜ್ಯಾದ್ಯಂತ ಗಾಳಿಯ ಗುಣಮಟ್ಟವನ್ನು ಸುಧಾರಿಸಲು ಸಹಾಯ ಮಾಡಲು ನಮ್ಮ ಸರ್ಕಾರ ಕೆಲಸ ಮಾಡುತ್ತಿದೆ. ವಾರ್ಷಿಕವಾಗಿ 5 ಕೋಟಿ ಮರಗಳನ್ನು ನೆಡುವ ಗುರಿಯೂ ಹೊಂದಿದ್ದೇವೆ. ಈಗಾಗಲೇ, ನಾವು ಮೂರೂವರೆ ತಿಂಗಳಲ್ಲಿ 3 ಕೋಟಿಗೂ ಹೆಚ್ಚು ಸಸಿಗಳನ್ನು ನೆಟ್ಟಿದ್ದೇವೆ. ನಾವು ಹೆಚ್ಚು ಮಾಲಿನ್ಯಕಾರಕ ಕೈಗಾರಿಕೆಗಳನ್ನು ನಿಯಂತ್ರಿಸುವ ಪ್ರಕ್ರಿಯೆಯಲ್ಲಿದ್ದೇವೆ ಎಂದು ಸಚಿವ ಖಂಡ್ರೆ ಅವರು ಅಭಿಪ್ರಾಯಪಟ್ಟರು.
ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ (ಸಿಪಿಸಿಬಿ) ಮಾಜಿ ಸದಸ್ಯ ಕಾರ್ಯದರ್ಶಿ ಡಾ.ಬಿ.ಸೇನ್ ಗುಪ್ತಾ ಅವರು ಮಾತನಾಡಿ, ಗಾಳಿಯ ಗುಣಮಟ್ಟವನ್ನು ಸುಧಾರಿಸುವುದು ಮತ್ತು ಹಸಿರುಮನೆ ಅನಿಲ ಹೊರಸೂಸುವಿಕೆಯನ್ನು ಕಡಿಮೆ ಮಾಡುವುದು ಸೇರಿದಂತೆ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಧಿಸಲು ವಿವಿಧ ಕ್ರಮಗಳನ್ನು ಕೈಗೊಂಡಿದ್ದೇವೆ ಎಂದು ಹೇಳಿದರು. ಉಷ್ಣ ವಿದ್ಯುತ್ ಸ್ಥಾವರಗಳನ್ನು (ಟಿಪಿಪಿ) ಹಂತ ಹಂತವಾಗಿ ಸ್ಥಗಿತಗೊಳಿಸುವುದು, ಫ್ಲೂ ಗ್ಯಾಸ್ ಡಿಸಲ್ಫರೈಸೇಶನ್ (ಎಫ್ಜಿಡಿ) ಮತ್ತು ಹೈಬ್ರಿಡ್ ವ್ಯವಸ್ಥೆಗಳಂತಹ ಹಸಿರು ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವುದು ಸೂಕ್ತ ಎಂಬುದಾಗಿ ಹೇಳಿದರು.
ಸಿಎಸ್ ಟಿಇಪಿಯ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಜೈ ಅಸುಂಡಿ ಮಾತನಾಡಿ. ವಾಯುಮಾಲಿನ್ಯವು ಎಲ್ಲರೂ ಸೇರಿ ಪರಿಹರಿಸಬೇಕಾದ ಸಾಮಾನ್ಯ ಸಮಸ್ಯೆಯಾಗಿ ಎಂಬುದನ್ನು ಅರಿಯಲು ಶಿಕ್ಷಣ ಮತ್ತು ಉದ್ಯಮ ನೀತಿ ನಿರೂಪಕರು ಮತ್ತು ನಾಗರಿಕ ಸಮಾಜದ ಒಂದಾಗಿ ಕೆಲಸ ಮಾಡಬೇಕಿದೆ. ಗಾಳಿಯ ಗುಣಮಟ್ಟದ ಪ್ರಾಮುಖ್ಯತೆ ಮತ್ತು ಪರಿಸರ ವ್ಯವಸ್ಥೆಯಲ್ಲಿ ನಾವು ಏನನ್ನು ನೋಡುತ್ತಿದ್ದೇವೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದರು.
ಸಿಎಸ್ ಟಿಇಪಿಯ ವಾಯು ಗುಣಮಟ್ಟ ವಿಭಾಗದ ಹಿರಿಯ ಸಂಶೋಧನಾ ವಿಜ್ಞಾನಿ ಡಾ.ಪ್ರತಿಮಾ ಸಿಂಗ್ ಮಾತನಾಡಿ, ನಾವು ಉಸಿರಾಡುವ ಗಾಳಿಯನ್ನು ಸುಧಾರಿಸುವ ನಿಟ್ಟಿನಲ್ಲಿ ಸಚಿವರ ಕ್ರಿಯಾತ್ಮಕ ವಿಧಾನ ಮತ್ತು ಬದ್ಧತೆ ಸಕಾರಾತ್ಮಕ ಫಲಿತಾಂಶವನ್ನು ನೀಡಲಿದೆ ಎಂದು ನಾವು ಭಾವಿಸುತ್ತೇವೆ ಎಂದರು. ಈಗಾಗಲೇ, ಅವರು ಉತ್ತಮ ಗಾಳಿಯ ಗುಣಮಟ್ಟಕ್ಕಾಗಿ ಕೆಲವು ನೀತಿ ಸಂಬಂಧಿತ ಕ್ರಮಗಳನ್ನು ಜಾರಿಗೆ ತರಲು ಪ್ರಾರಂಭಿಸಿದ್ದಾರೆ ಎಂದು ಹೇಳಿದರು.