ಸುದ್ದಿಮೂಲ ವಾರ್ತೆ
ಬೆಂಗಳೂರು,ಸೆ.28: ಸಿ.ಎಂ.ಇಬ್ರಾಹಿಂ ಅವರೇ ನಿಮಗೆ ಜೆಡಿಎಸ್ ಅಲ್ಲಿ ಬೆಲೆ ಇಲ್ಲ ಆದ ಕಾರಣ ಕಾಂಗ್ರೆಸ್ ಪಕ್ಷಕ್ಕೆ ಬನ್ನಿ ಎಂದು ಕೆಪಿಸಿಸಿ ವಕ್ತಾರ ಕೆ.ಪಿ.ಲಕ್ಷ್ಮಣ್ ಬಹಿರಂಗ ಆಹ್ವಾನ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷದ ರಾಜ್ಯ ಅಧ್ಯಕ್ಷ ಸಿ.ಎಂ.ಇಬ್ರಾಹಿಂ ಅವರು ಎಲ್ಲಿ ಭೂಗತವಾಗಿದ್ದಾರೆ, ಅವರಿಗೆ ಈ ಮೈತ್ರಿ ಇಷ್ಟವಿದೆಯೇ? ಅವರು ಹೊರಗೆ ಬಂದು ಸ್ಪಷ್ಟಪಡಿಸಬೇಕು ಎಂದರು.
ಅನೇಕ ಶಾಸಕರು ಹಾಗೂ ಮಾಜಿ ಶಾಸಕರು, ಸಚಿವರು ಬಿಜೆಪಿ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜೆಡಿಎಸ್ ಒಂದು ಕುಟುಂಬದ ಫ್ಯಾಮಿಲಿ ಟ್ರಸ್ಟ್ ಆಗಿದೆ. ಎಂದಿಗೂ ಬಿಜೆಪಿಯ ಜೊತೆ ಹೋಗದ ದೇವೆಗೌಡರು ಈಗ ಕೋಮುವಾದಿ ಪಕ್ಷದ ಜೊತೆ ನಿಂತಿದ್ದಾರೆ.
ಕುಮಾರಸ್ವಾಮಿ ಅವರೇ ನೀವು ಡಿ.ಕೆ.ಶಿವಕುಮಾರ್ ಅವರಿಗೆ ಬೈದಷ್ಟು ಅವರು ಒಕ್ಕಲಿಗ ನಾಯಕರಾಗಿ ಬೆಳೆಯುತ್ತಲೇ ಇರುತ್ತಾರೆ. ಅವರ ಬೆಳವಣಿಗೆ ಕಂಡು ಹೊಟ್ಟೆಗೆ ಬೆಂಕಿ ಬಿದ್ದಿದೆ. ಮೊದಲು ನಿಮ್ಮ ತತ್ವ ಸಿದ್ದಾಂತ ಏನು ಎಂದು ಹೇಳಿ. ರಾಜ್ಯ ಅಧ್ಯಕ್ಷರನ್ನು ನಿರ್ಲಕ್ಷ್ಯ ಮಾಡಿ ಒಪ್ಪಂದ ಮಾಡಿಕೊಂಡು ಸಿದ್ದಾಂತ ಹಾಳು ಮಾಡಿದ್ದೀರಿ. ನಿಮಗೆ ದಿಗ್ಬ್ರಮೆ ಆಗುವಷ್ಟು ನಾಯಕರು ಕಾಂಗ್ರೆಸ್ ಪಕ್ಷಕ್ಕೆ ಬರಲಿದ್ದಾರೆ ಇದರಿಂದ ನಿಮಗೆ ಆಶ್ಚರ್ಯ ಆಗುತ್ತದೆ. ನಿಮ್ಮ ಪಕ್ಷ ವಿಸರ್ಜನೆ ಆಗುವ ಮಟ್ಟಕ್ಕೆ ಬರುತ್ತದೆ ಎಂದರು.
ವಿದಾನಪರಿಷತ್ ಮಾಜಿ ಸದಸ್ಯ ರಮೇಶ್ ಬಾಬು ಮಾತನಾಡಿ, ಜೆಡಿಎಸ್ ಮತ್ತು ಬಿಜೆಪಿ ಒಂದಾಗಿರುವುದು ಯಡಿಯೂರಪ್ಪ ಅವರನ್ನು ತುಳಿಯಲು ಕುಮಾರಸ್ವಾಮಿ ಅವರನ್ನು ಬಳಸಿಕೊಳ್ಳಲಾಗುತ್ತಿದೆ. ಹಳೇ ಮೈಸೂರು ಭಾಗದಲ್ಲಿ ಕುಮಾರಸ್ವಾಮಿ ಅವರು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಡಿ.ಕೆ.ಶಿವಕುಮಾರ್ ಅವರನ್ನು ಬೈಯುವ ಕೆಲಸ ಮಾಡುತ್ತಿದ್ದಾರೆ. ಕೇರಳದ ಜೆಡಿಎಸ್ ಶಾಸಕರು ದೇವೆಗೌಡರ ವಿರುದ್ದ ದನಿ ಎತ್ತಿ, ನಾವು ಪ್ರತ್ಯೇಕವಾಗಿ ಉಳಿಯುತ್ತೇವೆ ಎಂದು ಹೇಳಿದ್ದಾರೆ. ಜೆಡಿಎಸ್ ಪ್ರಾದೇಶಿಕ ಪಕ್ಷವಲ್ಲ, ಅದರ ರಾಷ್ಟ್ರೀಯ ಅಧ್ಯಕ್ಷರು ದೇವೇಗೌಡರು. ದೇವೇಗೌಡರು ಸಮಾಜವಾದಿ ಜನತಾ ಪಕ್ಷ. ಎನ್ನುವ ಪ್ರಾದೇಶಿಕ ಪಕ್ಷ ಕಟ್ಟಿದ್ದರು. ಗುದ್ದಲಿ ಹಿಡಿದ ರೈತನ ಪಕ್ಷ ಆದರೆ ಅದು ಸಫಲವಾಗಲಿಲ್ಲ ಎಂದರು.
ದೇವೇಗೌಡರು ಹೇಳಿದ್ದಾರೆ ಬಂಗಾಳದಲ್ಲಿ ಎಡ ಪಕ್ಷಗಳು ಬಿಜೆಪಿ ಜೊತೆ ಸೇರಿದ್ದವು ಎಂದು ಆದರೆ ನೀವು ಕೇರಳದಲ್ಲಿ ಮಾಡಿದ್ದೇನು. ಹಿರಿಯರು ಸುಳ್ಳು ಹೇಳಬಾರದು. ತಾಂತ್ರಿಕ ಕಾರಣವಾಗಿ 19 ಶಾಸಕರಲ್ಲಿ ಯಾರೂ ಕೂಡ ಬಹಿರಂಗವಾಗಿ ಅತೃಪ್ತಿ ವ್ಯಕ್ತಪಡಿಸುತ್ತಿಲ್ಲ. ಎಲ್ಲರೂ ಸೈದ್ದಾಂತಿಕವಾಗಿ ಗಟ್ಟಿ ಇರುವ ಕಾಂಗ್ರೆಸ್ ಪಕ್ಷಕ್ಕೆ ಬರಬಹುದು ಎಂದು ಬಹಿರಂಗವಾಗಿ ಆಹ್ವಾನ ನೀಡುತ್ತೇನೆ ಎಂದರು.