ಸುದ್ದಿಮೂಲ ವಾರ್ತೆ
ಹೊಸಕೋಟೆ, ಆ.25: ತಾಲೂಕಿನ ಅನುಗೊಂಡನಹಳ್ಳಿ ಹೋಬಳಿ ಸಮೇತನಹಳ್ಳಿ ಗ್ರಾಪಂ ಅನ್ನು ಗ್ರಾಪಂನಿಂದ ಪಟ್ಟಣ ಪಂಚಾಯತ್ ಆಗಿ ಮೇಲ್ದರ್ಜೆಗೇರಿಸುವಂತೆ ಸಂಬಂಧಪಟ್ಟ ಇಲಾಖೆಗೆ ಶಿಫಾರಸ್ಸನ್ನು ನನ್ನ ಅವಧಿಯಲ್ಲಿ ಮಾಡಿದ್ದೆ. ಅದನ್ನು ಪ್ರಸ್ತುತ ಜನಸಂಖ್ಯೆಗೆ ಅನುಗುಣವಾಗಿ ತ್ವರಿತವಾಗಿ ಮೇಲ್ದರ್ಜೆಗೇರಿಸುವ ಕೆಲಸ ಆಗಬೇಕು ಎಂದು ಮಾಜಿ ಸಚಿವ ಹಾಗೂ ವಿಧಾನ ಪರಿಷತ್ ಸದಸ್ಯ ಎಂಟಿಬಿ ನಾಗರಾಜ್ ತಿಳಿಸಿದರು.
ಹೊಸಕೋಟೆ ತಾಲೂಕಿನ ಅನುಗೊಂಡನಹಳ್ಳಿ ಹೋಬಳಿ ಸಮೇತನಹಳ್ಳಿ ಗ್ರಾಪಂಗೆ ನೂತನವಾಗಿ ಅಧ್ಯಕ್ಷೆಯಾಗಿ ಆಯ್ಕೆಯಾದ ಅನ್ನಪೂರ್ಣ ಶಂಕರ್, ಉಪಾಧ್ಯಕ್ಷರಾಗಿ ಆಯ್ಕೆಯಾದ ರಾಜಣ್ಣ ಅವರನ್ನು ಅಭಿನಂದಿಸಿ ಮಾತನಾಡಿದರು.
ಸಮೇತನಹಳ್ಳಿ ಗ್ರಾಪಂನ್ನು ಪಟ್ಟಣ ಪಂಚಾಯತಿ ಮಾಡುವ ದೃಷ್ಟಿಯಿಂದ ಜಿಲ್ಲಾಧಿಕಾರಿಗಳು 2011ರ ಜನಗಣತಿ ಆಧರಿಸಿ ಅಗತ್ಯಕ್ಕಿಂತ ಕಡಿಮೆ ಜನಸಂಖ್ಯೆ ಇದೆ ಎಂಬ ಕಾರಣ ನೀಡಿ ತಿರಸ್ಕಾರ ಮಾಡಲಾಗಿತ್ತು. ಆದರೆ ಈಗ ಅಗತ್ಯಕ್ಕಿಂತ ಹೆಚ್ಚಿನ ಜನಸಂಖ್ಯೆ ಗ್ರಾಪಂ ವ್ಯಾಪ್ತಿಯಲ್ಲಿ ಇರುವ ಕಾರಣ ಜಿಲ್ಲಾಧಿಕಾರಿಗಳು ನಿಯಮವನ್ನು ಸಡಿಲಿಕೆ ಮಾಡಿ, ತ್ವರಿತವಾಗಿ ಪಟ್ಟಣ ಪಂಚಾಯತ್ ಮಾಡಿದರೆ ಅಭಿವೃದ್ದಿಗೆ ಸಾಕಷ್ಟು
ಅನುದಾನ ಸಿಗುತ್ತದೆ. ಈ ನಿಟ್ಟಿನಲ್ಲಿ ಚುನಾಯಿತ ಜನಪ್ರತಿನಿಧಿಗಳು ಮುಂದಾಗಬೇಕು ಎಂದು ಸಲಹೆ ನೀಡಿದರು.
ಈಗಾಗಲೇ ಹೊಸಕೋಟೆ ತಾಲೂಕಿನ 28 ಗ್ರಾಪಂಗಳ ಪೈಕಿ ನಾಲ್ಕೈದು ಗ್ರಾಪಂಗಳು ಪಟ್ಟಣ ಪಂಚಾಯತ್ ಆಗುವ ಹೊಸ್ತಿಲಲ್ಲಿವೆ. ಆದ್ದರಿಂದ ಸರ್ಕಾರ ಕೂಡ ಸಚಿವ ಸಂಪುಟದಲ್ಲಿ ಚರ್ಚಿಸಿ ಇದಕ್ಕೆ ಅನುಮೋದನೆ ನೀಡಿದರೆ ಅಭಿವೃದ್ದಿಗೆ ವೇಗ ಧಕ್ಕಲಿದೆ ಎಂದರು.
ಗ್ರಾಪಂ ಅಭಿವೃದ್ದಿ ದೃಷ್ಠಿಯಿಂದ ನೂತನ ಅಧ್ಯಕ್ಷ, ಉಪಾಧ್ಯಕ್ಷರು ಎಲ್ಲಾ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಎಲ್ಲಾ ಗ್ರಾಮಗಳ ಅಭಿವೃದ್ದಿಗೆ ಶ್ರಮಿಸಬೇಕು. ಸರ್ಕಾರ ಈಗ ಎರಡನೇ ಅವಧಿಗೆ ಕೂಡ ಮೀಸಲಾತಿ ಬದಲಾವಣೆ ಮಾಡಿದ್ದು ಇನ್ನು ನಾಲ್ಕೈದು ತಿಂಗಳಿನಲ್ಲಿ ಮೀಸಲಾತಿಯನ್ವಯ ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ನೇಮಿಸಬೇಕಾಗುತ್ತದೆ, ಆಗಲೂ ಕೂಡ ಒಗ್ಗಟ್ಟಿನಿಂದ ಕೆಲಸ ಮಾಡಿ ಎಂದರು.
ಗ್ರಾಪಂ ಅಧ್ಯಕ್ಷೆ ಅನ್ನಪೂರ್ಣ ಶಂಕರ್ ಮಾತನಾಡಿ, ಎಲ್ಲಾ ಸದಸ್ಯರು ಅವಿರೋಧವಾಗಿ ಅಧ್ಯಕ್ಷೆಯಾಗಲು ಬೆಂಬಲ ಸ್ರಚಿಸಿದ್ದಾರೆ. ಆಧ್ದರಿಂದ ಯಾರ ವಿಶ್ವಾಸಕ್ಕೂ ಧಕ್ಕೆ ಬಾರದೆ ನನ್ನ ಅಧಿಕಾರವನ್ನು ನಿರ್ವಹಣೆ ಮಾಡುತ್ತೇನೆ. ಎಂಟಿಬಿ ನಾಗರಾಜ್ ಅವರು ಕೂಡ ಸೂಕ್ತವಾದ ಮಾರ್ಗದರ್ಶನ ನೀಡಿದ್ದು ಅದರಂತೆ ನಾನು ಕೆಲಸ ಮಾಡುತ್ತೇನೆ ಎಂದರು.
ಗ್ರಾಪಂ ಮಾಜಿ ಅಧ್ಯಕ್ಷ ಮಮತಾ ಶ್ರಿನಾಥ್, ಸದಸ್ಯರಾದ ಗೋಪಾಲ್, ದೀಪಕ್, ಸುಧಾರಾಣಿ ರವಿಕುಮಾರ್, ಸೌಮ್ಯ ರಮೇಶ್, ಮಾಜಿ ತಾಪಂ ಸದಸ್ಯ ಶ್ರೀನಿವಾಸ್ ಹಾಜರಿದ್ದರು.