ಕಲಬುರಗಿ,ಫೆ.19: ಅಹಿಂದ ವರ್ಗಕ್ಕೆ ಚುನಾವಣೆಯಲ್ಲಿ ಟಿಕೆಟ್ ನೀಡಿ ಸೋಲಿಸುವ ಕೆಲಸವನ್ನು ಸಿದ್ದರಾಮಯ್ಯ ಮಾಡುತ್ತಾರೆ. ಮಾಜಿ ಸಚಿವ ಪರಮೇಶ್ವರ್ ಅವರನ್ನು ಸಿದ್ದರಾಮಯ್ಯ ಸೋಲಿಸಿಲ್ಲಾ ಅಂತ ಚಾಮುಂಡೇಶ್ವರಿ ಮೇಲೆ ಪ್ರಮಾಣ ಮಾಡಿ ಹೇಳಲಿ ಎಂದು ಮಾಜಿ ಸಚಿವ ಈಶ್ವರಪ್ಪ ಸವಾಲು ಹಾಕಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಸಭೆ ದೇವಸ್ಥಾನ ಇದ್ದಂತೆ, ಬಜೆಟ್ ಅಧಿವೇಶನದಲ್ಲಿ ಕಾಂಗ್ರೆಸ್ನವರು ಹೂವು ಇಟ್ಟುಕೊಂಡು ಬಂದು ಸದನ ಗೌರವ ಹಾಳು ಮಾಡಿದ್ದಾರೆ. ಮುಂದಿನ ದಿನದಲ್ಲಿ ಏನೇನು ಇಟ್ಟುಕೊಂಡು ಬರುತ್ತಾರೊ. ಸಿದ್ದರಾಮಯ್ಯ ಸೇರಿ ಇತರ ನಾಯಕರು ಕಿವಿ ಮೇಲೆ ಚೆಂಡು ಹೂ ಇಟ್ಟುಕೊಂಡು ಪ್ರಚಾರ ಪಡೆಯಲು ಬಂದಿದ್ದರು. ಇದರಿಂದ ರಾಜ್ಯಕ್ಕೂ ಕಾಂಗ್ರೆಸ್ ಪಕ್ಷಕ್ಕೂ ಅವಮಾನವಾಗಿದ್ದು, ಕೂಡಲೇ ಜನರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ ಅವರು, ಸಾರ್ವಜನಿಕ ಸಭೆಯಲ್ಲಿ ಹೂ ಒಂದನ್ನೆ ಯಾಕೆ, ಬೇಕಾದನ್ನು ಇಟ್ಟುಕೊಳ್ಳಲಿ ಎಂದು ಛೇಡಿಸಿದರು.
ಇಲ್ಲಿವರೆಗೆ ಕೇವಲ ಭರವಸೆ ನೀಡಿದ್ದರಿಂದ ನಿಮ್ಮನ್ನು ಅಧಿಕಾರದಿಂದ ಕೆಳಗಿಳಿಸಿದ್ದಾರೆ. ನಾವು ಭರವಸೆ ಕೊಟ್ಟು ಈಡೇರಿಸಿಲ್ಲಾ ಅಂದ್ರೆ ಅದನ್ನು ಜನ ತೀರ್ಮಾನ ಮಾಡುತ್ತಾರೆ. ಈ ಹಿಂದೆ ರಾಜ್ಯಕ್ಕೆ ಸೋನಿಯಾಗಾಂದಿ, ರಾಹುಲ್ ಗಾಂಧಿ ಅವರನ್ನು ಕೈ ನಾಯಕರು ಕರೆಸುತ್ತಿದ್ದರು. ಅಂದರೆ ಇವರೇನು ಕೆಲಸ ಮಾಡಿಲ್ಲ ಎಂದು ಅರ್ಥವೆ? ಕಾಂಗ್ರೆಸ್ನ್ ರಾಷ್ಟ್ರೀಯ ನಾಯಕರ ಮುಖ ನೋಡಿ ಜನ ಮತ ಹಾಕಲ್ಲಾ. ಆದರೆ, ನಮ್ಮ ರಾಷ್ಟ್ರೀಯ ನಾಯಕರು ಮುಖ ನೋಡಿದ್ರೆ ಮತ ಬರುತ್ತವೆ ಎಂದು ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದರು.