ಸುದ್ದಿಮೂಲ ವಾರ್ತೆ
ದೇವನಹಳ್ಳಿ,ನ.15 : ಕನ್ನಡ ನಾಡಿನಲ್ಲಿ ಹುಟ್ಟಿ ಬೆಳೆದು ಇಲ್ಲಿನ ನೀರು, ಗಾಳಿ, ಆಹಾರ ಪಡೆಯುವ ನಾವುಗಳು ಕನ್ನಡವನ್ನು ಉಳಿಸಿ ಬೆಳೆಸಬೇಕಾದರೆ ಕನ್ನಡವನ್ನು ಮಾತನಾಡುವ ಮೂಲಕ ಕನ್ನಡದಲ್ಲಿಯೇ ವ್ಯವಹರಿಸುವಂತಾಗಬೇಕು. ಕನ್ನಡ ರಾಜ್ಯೋತ್ಸವ ಕೇವಲ ನವೆಂಬರ್ ತಿಂಗಳಿಗೆ ಮಾತ್ರ ಸೀಮಿತವಾಗಬಾರದು ನಿತ್ಯೋತ್ಸವವಾಗಬೇಕು ಎಂದು ಪುರಸಭೆ ಸದಸ್ಯ ವೈ.ಆರ್. ರುದ್ರೇಶ್ ತಿಳಿಸಿದರು.
ಪಟ್ಟಣದ 14ನೇ ವಾಡಿನಲ್ಲಿ ಮಯೂರ ಯುವಕರ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ 14ನೇ ವರ್ಷದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ನಮ್ಮ ಕನ್ನಡ ನಾಡು ನುಡಿ 1956ಕ್ಕೂ ಮೊದಲು ಹಲವಾರು ಪ್ರಾಂತ್ಯಗಳಾಗಿ ಹರಿದು ಅಂಚಿ ಮೂಲೆಗುಂಪಾಗಿತ್ತು. ಕೆಲ ಸಮಿತಿಗಳು, ಸಾಹಿತಿಗಳು ಏಕೀಕರಣ ಚಳುವಳಿಗಳು, ಕನ್ನಡ ಪರ ಹೋರಾಟಗಾರರ ಫಲವಾಗಿ ನವೆಂಬರ್1, 1956ರಂದು ಮೈಸೂರು ರಾಜ್ಯವಾಗಿ ಉದಯವಾಯಿತು ಎಂದು ಸ್ಮರಿಸಿದರು.
ಡಿ.ದೇವರಾಜ ಅರಸು ರವರು ಮುಖ್ಯಮಂತ್ರಿಯಾಗಿದ್ದಾಗ ನ .1, 1973ರಂದು ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ಮರುನಾಮಕರಣ ಮಾಡಲಾಯಿತು. ಅದ್ದರಿಂದ ನಾಡು ನುಡಿ ಜಲದ ಜತೆಗೆ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು. ಎಲ್ಲಾ ಭಾಷೆಗಳನ್ನು ಕಲಿತು ಬಳಸಿದರೂ ಕನ್ನಡ ಭಾಷೆಗೆ ಮೊದಲ ಆದ್ಯತೆ ನೀಡಬೇಕು. ಕನ್ನಡದಲ್ಲಿ 8 ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದುಕೊಂಡರೂ ಇಂದಿಗೂ ಭಾಷೆಯ ಉಳಿವಿಗಾಗಿ ಹೋರಾಟ ಮಾಡಬೇಕಾಗಿರುವುದು ದು:ಖದ ಸಂಗತಿ. ಕನ್ನಡ ಸಾಹಿತ್ಯವೇ ಜಗತ್ತಿನ ಎಲ್ಲಾ ಭಾಷಾ ಸಾಹಿತ್ಯಗಳಿಗಿಂತ ಶ್ರೇಷ್ಟವಾದದ್ದು. ಮಕ್ಕಳಲ್ಲಿ ಕನ್ನಡ ಸಾಹಿತ್ಯ ಪುಸ್ತಕಗಳನ್ನು ಕೊಂಡು ಓದುವ ಹವ್ಯಾಸವನ್ನು ಮೂಡಿಸಬೇಕು ಎಂದರು.
ಮಯೂರ ಯುವಕರ ಸಂಘದ ಕಾರ್ಯದರ್ಶಿ ಪ್ರವೀಣ್ಕುಮಾರ್ ಮಾತನಾಡಿ, ಕನ್ನಡ ಪರಂಪರೆಯನ್ನು ಪ್ರತಿಯೊಬ್ಬರು ತಿಳಿದುಕೊಳ್ಳಬೇಕು. ಕನ್ನಡ ಭಾಷೆಯನ್ನು ಗಗನದೆತ್ತರಕ್ಕೆ ಬೆಳೆಸಬೇಕು. ಆಂಗ್ಲ ಭಾಷೆಯನ್ನು ಕೇವಲ ವ್ಯವಹಾರಿಕ ಭಾಷೆಯನ್ನಾಗಿ ಉಪಯೋಗಿಸಬೇಕೆ ಹೊರತು ಅದಕ್ಕೆ ಜನರು ಮಾರು ಹೋಗಬಾರದು. ಕನ್ನಡ ರಾಜ್ಯೋತ್ಸವ ಅಂಗವಾಗಿ ವಾರ್ಡಿನ ಜನತೆಗೆ ವಿವಿಧ ಸ್ಪರ್ಧೆಗಳನ್ನು ಆಯೋಜನೆ ಮಾಡಲಾಗಿತ್ತು. ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಈ ವೇಳೆ ಮಯೂರ ಯುವಕರ ಸಂಘದ ಗೌರವಾಧ್ಯಕ್ಷ ವಿ.ರವಿಕುಮಾರ್, ವಿನಯ್ಕುಮಾರ್, ಶಂಕರ್, ನಾಗರಾಜಪ್ಪ, ವಿನೋದ್, ಮಂಜು, ಮಯೂರ ಯುವಕರ ಸಂಘದ ಪದಾಧಿಕಾರಿಗಳು, ವಾರ್ಡಿನ ಮುಖಂಡರು ಸಾರ್ವಜನಿಕರು ಇದ್ದರು.