ಸುದ್ದಿಮೂಲ ವಾರ್ತೆ
ಬೆಂಗಳೂರು, ಸೆ.16: ಮುಖ್ಯಮಂತ್ರಿ ಸಿದ್ದರಾಮಯ್ಯ ಸಚಿವ ಸಂಪುಟದಲ್ಲಿ ಮೂವರು ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿಸುವಂತೆ ಹೈಕಮಾಂಡ್ಗೆ ಪತ್ರ ಬರೆಯುವುದಾಗಿ ಸಹಕಾರ ಸಚಿವ ಕೆ.ಎನ್. ರಾಜಣ್ಣ ಹೇಳುವ ಮೂಲಕ ಸಂಚಲನ ಮೂಡಿಸಿದ್ದಾರೆ. ಮತ್ತೊಂದೆಡೆ ತಾವು ಹಾಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ದ ಹೇಳಿಲ್ಲ ಎಂದು ಸ್ಪಷ್ಟನೆ ಸಹ ನೀಡಿದ್ದಾರೆ.
ಕಾಂಗ್ರೆಸ್ ಪಕ್ಷ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರಲು ಎಲ್ಲಾ ಸಮುದಾಯದವರ ಬೆಂಬಲವೂ ಕಾರಣ. ಹೀಗಾಗಿ ವೀರಶೈವ ಲಿಂಗಾಯತ, ಪರಿಶಿಷ್ಟ ಜಾತಿ- ಪಂಗಡ, ಅಲ್ಪಸಂಖ್ಯಾತರಿಗೆ ಸಹ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕು. ಇದು ಮುಂದಿನ ಲೋಕಸಭಾ ಚುನಾವಣೆಗೂ ಸಹಕಾರಿಯಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾವು ಡಿಕೆ ಸಹೋದರರನ್ನು ಗುರಿಯಾಗಿಸಿಕೊಂಡು ಹೇಳಿಲ್ಲ. ಡಿಕೆ ಶಿವಕುಮಾರ್ ಕೂಡ ಉಪಮುಖ್ಯಮಂತ್ರಿಯಾಗಿದ್ದು, ಈ ಬಗ್ಗೆ ತಮಗೆ ಸಂತೋಷ ಇದೆ. ಅವರು ಪಕ್ಷದ ರಾಜ್ಯಾಧ್ಯಕ್ಷರು. ಸಂಘಟನೆಯಲ್ಲೂ ಚಾಣಾಕ್ಷ್ಯರಾಗಿದ್ದಾರೆ. ಡಿ.ಕೆ. ಶಿವಕುಮಾರ್ ಅಸಮಾಧಾನಗೊಳ್ಳುವ ಪರಿಸ್ಥಿತಿ ಸೃಷ್ಟಿಯಾಗಿಲ್ಲ ಎಂದರು.
ಲೋಕಸಭೆ ಚುನಾವಣೆ ಅಭ್ಯರ್ಥಿಗಳ ಬಗ್ಗೆ ಚರ್ಚೆ ನಡೆದಿಲ್ಲ. ಹಾಸನದಲ್ಲಿ ಯಾರನ್ನು ಅಭ್ಯರ್ಥಿ ಮಾಡಿದರೆ ಒಳ್ಳೆಯದು ಎಂಬ ಕುರಿತು ಇನ್ನೂ ತೀರ್ಮಾನಿಸಿಲ್ಲ. ವೈಯಕ್ತಿಕವಾಗಿ ಎಲ್ಲರ ಜೊತೆ ಚರ್ಚಿಸುತ್ತೇವೆ. ಅಂತಿಮವಾಗಿ ಹೈ ಕಮಾಂಡ್ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದರು.
ಜೆಡಿಎಸ್- ಬಿಜೆಪಿ ಮೈತ್ರಿಗೆ ಬಿಜೆಪಿ ಪ್ರೀತಂ ಗೌಡ ವಿರೋಧ ವ್ಯಕ್ತಪಡಿಸಿದ್ದು, ಮೈತ್ರಿ ಅಂತಿಮವಾಗಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. ರಾಜಕಾರಣದಲ್ಲಿ ಯಾವುದೇ ನಿರ್ಣಯ ತೀರ್ಮಾನ ಅಂತಿಮವಲ್ಲ ಎಂದು ಹೇಳಿದರು.
ಜೆಡಿಎಸ್ ಮಾಜಿ ಶಾಸಕ ಗೌರಿಶಂಕರ್ ಕಾಂಗ್ರೆಸ್ ಬರುವ ಬಗ್ಗೆ ನನಗೆ ಮಾಹಿತಿಯಿಲ್ಲ. ಎಸ್.ಟಿ ಸೋಮಶೇಖರ್, ಹೆಬ್ಬಾರ್ ಕಾಂಗ್ರೆಸ್ ಗೆ ಬರ್ತಾರೆ ಅಂತ ಮಾಹಿತಿಯಿದೆ. ತುಮಕೂರು ಲೋಕಸಭೆಗೆ ಕಾಂಗ್ರೆಸ್ ನಿಂದ ಸೋಮಣ್ಣ ಸ್ಪರ್ಧಿಸುತ್ತಾರೆ ಎಂಬುದು ಗಾಳಿ ಸುದ್ದಿ. ಮುದ್ದಹನುಮೇಗೌಡರು ಗೆಲ್ಲುವಿಗೆ ಯಾರೆಲ್ಲಾ ಶ್ರಮವಹಿಸಿದ್ದರೋ ಅವರಿಗೆ ಒಂದು ಮಾತು ಹೇಳದೆ ಪಕ್ಷ ಬಿಟ್ಟು ಹೋದರು. ಕಾಂಗ್ರೆಸ್ ನಲ್ಲಿ ಜಿಲ್ಲಾಧ್ಯಕ್ಷರು, ಶಾಸಕರು ಎಲ್ಲವೂ ಆಗಿದ್ದರು. ಜೆಡಿಎಸ್ ಗೆ ಹೋಗಿ ಲೋಕಸಭೆಗೆ ಸ್ಪರ್ಧಿಸಿ ಸೋತರು. ಬಳಿಕ ಕಾಂಗ್ರೆಸ್ ಗೆ ಬಂದು ಸಂಸದರಾದರು. ಈಗಾಗಲೇ ಒಂದು ಸುತ್ತು ಆಗಿದ್ದು, ಇದೀಗ ಮತ್ತೊಂದು ಸುತ್ತು ರಾಜಕಾರಣ ಮಾಡುತ್ತಿದ್ದಾರೆ. ಏನು ಮಾಡುತ್ತಾರೋ ನೋಡೋಣ ಎಂದರು.
ಬಿಜೆಪಿ ಹಾಲಿ ಸಂಸದರು ಕಾಂಗ್ರೆಸ್ ಸೇರುವ ಕುರಿತು ತಮ್ಮ ಬಳಿ ಮಾಹಿತಿ ಇಲ್ಲ. ಬಹುತೇಕ ಬಿಜೆಪಿ ಸಂಸದರು ಲೋಕಸಭೆಗೆ ಸ್ಪರ್ಧಿಸುವುದಿಲ್ಲ ಎಂದು ಬಿಜೆಪಿ ಹೈಕಮಾಂಡ್ ತಿಳಿಸಿದ್ದಾರೆ ಎಂಬ ಮಾಹಿತಿ ಇದೆ ಎಂದು ಹೇಳಿದರು.