ಸುದ್ದಿಮೂಲ ವಾರ್ತೆ
ಬೆಂಗಳೂರು, ಮೇ 16: ಮುಖ್ಯಮಂತ್ರಿ ಆಯ್ಕೆಗಾಗಿ ಕಾಂಗ್ರೆಸ್ನಲ್ಲಿ ಬಿಕ್ಕಟ್ಟು ತೀವ್ರಗೊಂಡಿದ್ದು, ಈ ನಡುವೆ ಅಖಿಲ ಭಾರತ ವೀರಶೈವ ಮಹಾಸಭಾ ಕಾಂಗ್ರೆಸ್ ಹೈಕಮಾಂಡ್ಗೆ ಪತ್ರ ಬರೆದು ಸಮುದಾಯಕ್ಕೆ ಪ್ರತಿಷ್ಠಿತ ಹುದ್ದೆ ನೀಡುವಂತೆ ಒತ್ತಾಯಿಸಿದೆ.
ಕಾಂಗ್ರೆಸ್ನಿಂದ 34 ಲಿಂಗಾಯಿತ ಸಮುದಾಯದವರು ಶಾಸಕರಾಗಿ ಆಯ್ಕೆಯಾಗಿದ್ದು, ಈ ಹಿನ್ನೆಲೆಯಲ್ಲಿ ಸಮುದಾಯಕ್ಕೆ ಉತ್ತಮ ಅವಕಾಶ ಕಲ್ಪಿಸುವಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದೆ.
‘ಪಕ್ಷವು 46 ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದ್ದು, ಇತರ ಪಕ್ಷಗಳು ಒಳಗೊಂಡಂತೆ 50 ಸ್ಥಾನಗಳಲ್ಲಿ ಶಾಸಕರನ್ನು ಆಯ್ಕೆ ಮಾಡುವಲ್ಲಿ ಸಮುದಾಯವು ಪ್ರಮುಖ ಪಾತ್ರ ವಹಿಸಿದೆ. ಸಮುದಾಯವು ಬಿಜೆಪಿಯಿಂದ ಕಾಂಗ್ರೆಸ್ಗೆ ತನ್ನ ನಿಷ್ಠೆಯನ್ನು ಬದಲಾಯಿಸಿದೆ’ ಎಂದು ಪತ್ರದಲ್ಲಿ ಹೇಳಲಾಗಿದೆ.
ಈ ಮಧ್ಯೆ ವಿಧಾನ ಪರಿಷತ್ ವಿಪಕ್ಷ ನಾಯಕರಾದ ಬಿಕೆ ಹರಿಪ್ರಸಾದ್, ಶಾಸಕ ಮಧು ಬಂಗಾರಪ್ಪ ಸೇರಿದಂತೆ ಬಿಲ್ಲವ-ಈಡಿಗ ಸಮದಾಯದವರನ್ನ ಸಚಿವರನ್ನಾಗಿ ಮಾಡಬೇಕು ಸಮುದಾಯಕ್ಕೆ ಹೆಚ್ಚಿನ ಪ್ರಾತಿನಿಧ್ಯೆ ಕಲ್ಪಿಸಬೇಕೆಂದು ವಿಖ್ಯಾತಾನಂದ ಸ್ವಾಮೀಜಿ ಅವರು ಖರ್ಗೆ ಅವರಿಗೆ ಬರೆದಿದ್ದಾರೆ.
ಇದೇ ವೇಳೆ ಇತರ ಸಮುದಾಯದವರೂ ತಮ್ಮ ನಾಯಕರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡುವಂತೆ ಒತ್ತಾಯಿಸಿವೆ. ಕೆಪಿಸಿಸಿ ಕರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಬೆಳಗಾವಿ ಉತ್ತರ ಶಾಸಕ ಆಸೀಫ್ ಸೇಠ್ ಒತ್ತಾಯಿಸಿದ್ದಾರೆ.
ಉತ್ತರ ಕರ್ನಾಟಕದಲ್ಲಿ ಸತೀಶ್ ಜಾರಕಿಹೊಳಿ ನಾಯಕ. ಅವರಿಗೆ ಹುದ್ದೆ ನೀಡಬೇಕು. ಹಿರಿಯ ನಾಯಕ ಜಮೀರ್ ಅಹ್ಮದ್ ಖಾನ್ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡುವುದು ಪಕ್ಷದ ವಿವೇಚನೆಗೆ ಬಿಟ್ಟ ವಿಚಾರ ಎಂದು ಸೇಠ್ ಹೇಳಿದ್ದಾರೆ. ಇದೇ ವೇಳೆ ಕಾಂಗ್ರೆಸ್ ಹಿರಿಯ ಮುಖಂಡ ರಾಮಲಿಂಗಾರೆಡ್ಡಿ ಬೆಂಬಲಿಗರು ಕೂಡ ಅವರಿಗೆ ಸ್ಥಾನ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಕರ್ನಾಟಕ ರೆಡ್ಡಿ ಜನಸಂಘದ ಸಂಚಾಲಕ, ರಾಮಲಿಂಗಾರೆಡ್ಡಿ ಸಮುದಾಯದ ಹಿರಿಯ ನಾಯಕ. ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರಿಗಿಂತ ಹೆಚ್ಚು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ರಾಮಲಿಂಗಾ ರೆಡ್ಡಿ ಅವರು ಉಪಮುಖ್ಯಮಂತ್ರಿಯಾಗಲು ಅರ್ಹರು ಎಂದು ಹೇಳಿದರು.
ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಮೂವರನ್ನು ಸಚಿವರನ್ನಾಗಿಸಿದ್ದರು. ‘ಅವರ ನಂತರ ಒಂದೇ ಒಂದು ಸಚಿವ ಸ್ಥಾನ ನೀಡಿದ್ದು, ಬಿಜೆಪಿ ಅದಕ್ಕೀಗ ಬೆಲೆ ತೆತ್ತಿದೆ. ರಾಮಲಿಂಗಾ ರೆಡ್ಡಿ ಅವರನ್ನು ಡಿಸಿಎಂ ಮಾಡಬೇಕು ಹಾಗೂ ಸಮುದಾಯದ ಇಬ್ಬರನ್ನು ಸಚಿವರನ್ನಾಗಿ ಮಾಡಬೇಕು’ ಎಂದು ಆಗ್ರಹಿಸಿದರು.
ನಾವು ಕಾಂಗ್ರೆಸ್ ಹೈಕಮಾಂಡ್ಗೆ ಪತ್ರ ಬರೆದಿದ್ದೇವೆ. ಅವರು ಪ್ರತಿಕ್ರಿಯಿಸದಿದ್ದರೆ ಮುಂದಿನ ದಿನಗಳಲ್ಲಿ ಪಕ್ಷವು ಸಮುದಾಯದಿಂದ ತೀವ್ರ ಪ್ರತಿರೋಧವನ್ನು ಎದುರಿಸಬೇಕಾಗುತ್ತದೆ ಎಂದಿದ್ದಾರೆ.