ಸುದ್ದಿಮೂಲ ವಾರ್ತೆ
ತುಮಕೂರು ನ.21: ಗ್ರಂಥಾಲಯಗಳು ವಿದ್ಯಾರ್ಥಿಗಳ ಪಾಲಿಗೆ ಅಕ್ಷರ ದೇಗುಲವಿದ್ದಂತೆ. ಈ ದೇಗುಲದಲ್ಲಿ ಸತತವಾಗಿ ಅಧ್ಯಯನ ಮಾಡುವ ಮೂಲಕ ವಿದ್ಯಾರ್ಥಿಗಳು ಉತ್ತಮವಾದ ಭವಿಷ್ಯ ರೂಪಿಸಿಕೊಳ್ಳುವಂತೆ ಪಾಲಿಕೆ ಆಯುಕ್ತರಾದ ಅಶ್ವಿಜ ಕರೆ ನೀಡಿದರು.
ನಗರದ ಕೇಂದ್ರ ಗ್ರಂಥಾಲಯ ಆವರಣದಲ್ಲಿರುವ ಸಭಾಂಗಣದಲ್ಲಿ ಸಾರ್ವಜನಿಕ ಗ್ರಂಥಾಲಯ ಇಲಾಖೆ, ಗ್ರಂಥಾಲಯ ಸಪ್ತಾಹ-2023ರ ಅಂಗವಾಗಿ ನ.14 ರಿಂದ 20ರವರಗೆ ಹಮ್ಮಿಕೊಂಡಿದ್ದ ವಿವಿಧ ಸ್ಪರ್ಧೆಗಳ ಬಹುಮಾನ ವಿತರಣೆ ಹಾಗೂ ಗ್ರಂಥಾಲಯ ಸಪ್ತಾಹದ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಸರ್ಕಾರ ಆರ್.ಡಿ.ಪಿ.ಆರ್.ಮೂಲಕ ಗ್ರಾಮೀಣ ಭಾಗದಲ್ಲಿ ಲೈಬ್ರರಿಗಳನ್ನು ತೆರೆದು ಮಕ್ಕಳಿಗೆ ಅಧ್ಯಯನಕ್ಕೆ ಅವಕಾಶ ಕಲ್ಪಿಸಿದೆ. ಅದೇ ರೀತಿ ತುಮಕೂರು ನಗರದಲ್ಲಿ ಪ್ರಯೋಗಿಕವಾಗಿ ಪಾಲಿಕೆಯ
ಅನುದಾನದಲ್ಲಿಯೇ ಈಗಿರುವ 8-9 ಗ್ರಂಥಾಲಯಗಳ ಜೊತೆಗೆ ಪ್ರತಿ ವಾರ್ಡಿನಲ್ಲಿ ಗ್ರಂಥಾಲಯ ತೆರೆದು ಆಸಕ್ತರಿಗೆ ಮನೆ ಬಾಗಿಲಲ್ಲಿಯೇ ಓದಲು ಅವಕಾಶ ಕಲ್ಪಿಸಲು ಮುಂದಾಗಿದೆ. ಈ ನಿಟ್ಟಿನಲ್ಲಿ ಶೀಘ್ರವೇ ಪಾಲಿಕೆ ಸಭೆಯಲ್ಲಿ ಚರ್ಚೆ ನಡೆಸಿ, ಟಾಟಾ ಕಲಿಕಾ ಸಂಸ್ಥೆಯ ಸಹಯೋಗದಲ್ಲಿ ಹಳೆಯ ಗ್ರಂಥಾಲಯಗಳ ನವೀಕರಣದ ಜೊತೆಗೆ, ಹೊಸ ಗ್ರಂಥಾಲಯಗಳನ್ನು ಆರಂಭಿಸಲಾಗುವುದು ಎಂದು ಅವರು ಭರವಸೆ ನೀಡಿದರು.
ಸ್ಮಾರ್ಟ್ ಸಿಟಿ ಅಡಿಯಲ್ಲಿ ಇಡೀ ದೇಶದಲ್ಲಿ ಅತ್ಯುತ್ತಮವಾದ ಗ್ರಂಥಾಲಯವನ್ನು ನಿರ್ಮಾಣ ಮಾಡಿದ್ದು, ಎಲ್ಲಾ ರೀತಿಯ ಅಧ್ಯಯನಕ್ಕೂ ಅವಕಾಶವಿದೆ. ಪ್ರತಿ ಶನಿವಾರ, ಭಾನುವಾರ ನಿಮಗೊಸ್ಕರ ನಾನು ಲೈಬ್ರರಿಗೆ ಬರಲು ಸಿದ್ದ. ನೀವು ಬಂದರೆ ಸಂವಾದ ನಡೆಸಬಹುದು ಎಂದು ವಿದ್ಯಾರ್ಥಿಗಳಿಗೆ ಆಹ್ವಾನ ನೀಡಿದ ಅವರು, ದೇಶ ಸುತ್ತು, ಕೋಶ ಓದು ಎಂಬ ಗಾಧೆಯಿದೆ.
ನಾವು ಯುಪಿಎಸ್ಸಿ ಪರೀಕ್ಷೆಗೆ ತಯಾರಿ ನಡೆಸುವಾಗ, ಈ ಗಾಧೆ ಅಕ್ಷರಶಃ ನಮಗೆ ಸಹಕಾರಿಯಾಯಿತು ಎಂದರು.
ಮೇಯರ್ ಪ್ರಭಾವತಿ ಸುಧೀಶ್ವರ್ ಮಾತನಾಡಿ, ವಿದ್ಯೆ ಕದಿಯಲಾಗದ ಸಂಪತ್ತು. ಅದಕ್ಕೆ ದೊಡ್ಡವರು ದುಡ್ಡೇ ದೊಡ್ಡಪ್ಪ ವಿದ್ಯೆ ಅದರಪ್ಪ ಎಂಬ ಮಾತಿದೆ. ಸ್ಮಾರ್ಟ್ ಸಿಟಿ ವತಿಯಿಂದ ಸುಮಾರು 29 ಕೋಟಿ ರೂ. ವೆಚ್ಚದಲ್ಲಿ ಅತ್ಯಾಧುನಿಕ ಡಿಜಿಟಲ್ ಲೈಬ್ರರಿಯನ್ನು ತೆರೆಯಲಾಗಿದೆ. ಇಲ್ಲಿ ಓದುವುದರ ಜೊತೆಗೆ, ಆಡಿಯೋ ಮೂಲಕವೂ ಕೇಳಬಹುದು. ಗ್ರಂಥಾಲಯಗಳನ್ನು ತೆರೆದರೆ ಲಕ್ಷಾಂತರ ವಿದ್ವಾಂಸರು
ಸೃಷ್ಟಿಯಾಗುತ್ತಾರೆ ಎಂಬ ಡಾ.ಬಿ.ಆರ್ ಅಂಬೇಡ್ಕರ್ ಅವರ ಮಾತನ್ನು ನಾವೆಲ್ಲರೂ ಪಾಲಿಸಬೇಕಾಗಿದೆ. ಸೋಲೆ ಗೆಲುವಿನ ಮೆಟ್ಟಿಲು, ಹಾಗಾಗಿ, ಗ್ರಂಥಾಲಯ ಸಪ್ತಾಹದ ಅಂಗವಾಗಿ ನಡೆದಿರುವ ಸ್ಪರ್ಧೆಗಳಲ್ಲಿ
ವಿಜೇತರು ಖುಷಿಯಾಗಿರಿ, ಸೋತವರು ಮುಂದಿನ ಬಾರಿ ಗೆಲುವು ನಿಮ್ಮದಾಗಿಸಲು ಶ್ರಮ ಪಡಿ ಎಂದು ಸಲಹೆ ನೀಡಿದರು.
ಸಾರ್ವಜನಿಕ ಇಲಾಖೆಯ ಉಪನಿರ್ದೇಶಕಿ ಸರೋಜಮ್ಮ ಎಂ. ಮಾತನಾಡಿ, ಯುವ ಜನರಲ್ಲಿ ಓದುವ ಹವ್ಯಾಸ ಬೆಳೆಸುವ ನಿಟ್ಟಿನಲ್ಲಿ ಸರಕಾರ ಗ್ರಂಥಾಲಯ ಸಪ್ತಾಹವನ್ನು ಆಚರಿಸಿಕೊಂಡು ಬರುತ್ತಿದೆ. ಮಕ್ಕಳಲ್ಲಿ ಓದಿನ ಆಸಕ್ತಿ ಹೆಚ್ಚಿಸುವ ನಿಟ್ಟಿನಲ್ಲಿ ವಿವಿಧ ಸ್ಪರ್ಧೆಗಳನ್ನು ಅವರನ್ನು ಗ್ರಂಥಾಲಯಗಳತ್ತ ಸೆಳೆಯುವ ಪ್ರಯತ್ನ ಇದಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಗ್ರಂಥಪಾಲಕ ಹೆಚ್.ಡಿ. ಬಸವರಾಜು, ಚಂದ್ರಣ್ಣ ಎಸ್. ಸೇರಿದಂತೆ ಗ್ರಂಥಾಲಯ ಸಿಬ್ಬಂದಿಗಳು ಉಪಸ್ಥಿತರಿದ್ದರು. ಇದೇ ವೇಳೆ ಗ್ರಂಥಾಲಯ ಸಪ್ತಾಹ ಅಂಗವಾಗಿ ಹಮ್ಮಿಕೊಂಡಿದ್ದ ವಿವಿಧ ಸ್ಪರ್ಧೆಗಳಲ್ಲಿ ಬಹುಮಾನ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.