ಸುದ್ದಿಮೂಲ ವಾರ್ತೆ
ಕೆ.ಆರ್.ಪುರ, ನ.25: ಕಾಡುಗುಡಿಯಲ್ಲಿ ವಿದ್ಯುತ್ ಶಾಕ್ನಿಂದ ತಾಯಿ-ಮಗು ಧಾರುಣವಾಗಿ ಮೃತಪಟ್ಟ ಘಟನೆ ಮಾಸುವ ಮುನ್ನವೇ ರಾಜಧಾನಿಯಲ್ಲಿ ಮತ್ತೊಂದು ವಿದ್ಯುತ್ ಅವಘಡ ನಡೆದಿದೆ. ಆವಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಚೀಮಸಂದ್ರದಲ್ಲಿ ವಿದ್ಯುತ್ ಶಾಕ್ನಿಂದ ಲೈನ್ಮ್ಯಾನ್ ಕೊನೆಯುಸಿರೆಳೆದಿದ್ದಾರೆ.
ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಮತ್ತೊಂದು ಬಲಿಯಾಗಿದ್ದು, ಘಟನೆಗೆ ಬಗ್ಗೆ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ. ಸಿದ್ದರಾಜು (40) ಮೃತ ಲೈನ್ಮ್ಯಾನ್. ಆವಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫ್ಯೂಸ್ ದುರಸ್ತಿಗಾಗಿ ಕಂಬ ಏರಿದ್ದಾಗ ವಿದ್ಯುತ್ ಶಾಕ್ನಿಂದ ಸಿದ್ದರಾಜು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೆಸ್ಕಾಂ ಅಧಿಕಾರಿಗಳು, ಸಿಬ್ಬಂದಿ ನಿರ್ಲಕ್ಷ್ಯದಿಂದಲೇ ಲೈನ್ಮ್ಯಾನ್ ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದರು.
ಸಿದ್ದರಾಜು ಅವರು ಬೆಸ್ಕಾಂನಲ್ಲಿ 15 ವರ್ಷದಿಂದ ಕೆಲಸ ಮಾಡುತ್ತಿದ್ದರು. 6 ತಿಂಗಳ ಹಿಂದೆ ಯಾವುದೋ ಕಿರಿಕಿರಿಯಿಂದ ಹೊಸಕೋಟೆ ವಿಭಾಗದಿಂದ ಆವಲಹಳ್ಳಿ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿತ್ತು. ಅವರಿಗೆ 15 ದಿನಗಳ ಹೆಣ್ಣು ಮಗು, 10 ವರ್ಷದ ಗಂಡು ಮಗು ಇದ್ದಾನೆ. ಪಿತೃತ್ವ ರಜೆಯಲ್ಲಿದ್ದರೂ ಕೆಲಸಕ್ಕೆ ಬರುವಂತೆ ಅಧಿಕಾರಿಗಳು ಒತ್ತಾಯಿಸಿದ್ದರು. ಬೆಳಗ್ಗೆ ಒಬ್ಬರನ್ನೇ ಕೆಲಸಕ್ಕೆ ಕಳುಹಿಸಿದ್ದಾರೆ. ವಿದ್ಯುತ್ ತಗುಲಿ ಟ್ರಾನ್ಸ್ಫಾರ್ಮ್ನಿಂದ ಬಿದ್ದಾಗ ಯಾವ ಸಿಬ್ಬಂದಿ, ಅಧಿಕಾರಿಗಳು ಸ್ಥಳಕ್ಕೆ ಬಂದೇ ಇಲ್ಲ ಎಂದು ನಾದಿನಿ ಚೈತ್ರಾ ಆರೋಪಿಸಿದರು.
ಎಇಇ, ಜೆಇಇ ಕಿರುಕುಳದಿಂದ ಈ ರೀತಿಯ ದುರಂತ ನಡೆದಿದೆ. ಅಧಿಕಾರಿಗಳು ಸುಖವಾಗಿ ಕಚೇರಿಯಲ್ಲಿ ಕುಳಿತಿರುತ್ತಾರೆ. ಸಿಬ್ಬಂದಿಯ ಕಷ್ಟ ಯಾರು ಕೇಳುತ್ತಾರೆ. ಘಟನೆ ನಡೆದ ಮೇಲೆ ಬೈಕ್ನಲ್ಲಿ ಲೈನ್ಮ್ಯಾನ್ ಅನ್ನು ಕರೆದುಕೊಂಡುಬಂದಿದ್ದಾರೆ. ಆಂಬುಲೆನ್ಸ್ಗೆ ಕೂಡ ಕರೆ ಮಾಡಿಲ್ಲ. ಸ್ಥಳೀಯರೇ ಆಸ್ಪತ್ರೆಗೆ ಸೇರಿಸಿದ್ದಾರೆ. ಇದರಿಂದ ಕುಟುಂಬಸ್ಥರಿಗೆ ಅನ್ಯಾಯವಾಗಿದೆ ಎಂದು ಅಸಮಾಧಾನ ಹೊರ ಹಾಕಿದರು.