ಹೊಸಕೋಟೆ, ಜು 25 : ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಪಡೆಯಲು ಆಧಾರ್ ಕಾರ್ಡ್ ಪ್ರಮುಖ ಪಾತ್ರವಹಿಸಿದೆ. ಆಧಾರ್ ಕಾರ್ಡ್ಗಳ ತಿದ್ದುಪಡಿಗಾಗಿ ನಾಡ ಕಚೇರಿಗಳಿಗೆ ನಿತ್ಯ ಅಲೆದಾಡುತ್ತಿರುವುದರಿಂದ ಜನರನ್ನು ನಿಯಂತ್ರಿಸುವುದು ಸಿಬ್ಬಂದಿಗೆ ತಲೆ ನೋವಾಗಿ ಪರಿಣಮಿಸಿದೆ.
ರಾಜ್ಯ ಕಾಂಗ್ರೆಸ್ ಸರ್ಕಾರ ಚುನಾವಣಾ ಪೂರ್ವದಲ್ಲಿ ಘೋಷಣೆ ಮಾಡಿದಂತೆ 5 ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಲು ಸರ್ಕಾರ ಮುಂದಾಗಿದೆ. ಆದರೆ, ಅವುಗಳನ್ನು ದಕ್ಕಿಸಿಕೊಳ್ಳಲು ಜನಸಾಮಾನ್ಯರಿಗೆ ಒಂದಲ್ಲಾ ಒಂದು ಸಮಸ್ಯೆ ಎದುರಾಗುತ್ತಿದೆ.
ಮೊಬೈಲ್ ಸಂಖ್ಯೆ ಲಿಂಕ್ ಕಡ್ಡಾಯ: ಬಹು ಮುಖ್ಯವಾಗಿ ಆಧಾರ್ ಅಪ್ ಡೇಟ್ ಮಾಡುವುದೇ ದೊಡ್ಡ ತಲೆನೋವಾಗಿದೆ. ಈ ಹಿಂದೆ ಆಧಾರ್ ಕಾರ್ಡ್ಗಳನ್ನು ಮಾಡಿಸುವ ಸಮಯದಲ್ಲಿ ಸೇವಾ ಪ್ರತಿನಿಧಿಗಳು ದಿನಾಂಕ, ಮೊಬೈಲ್ ಸಂಖ್ಯೆ, ಹೆಸರು ಇತ್ಯಾದಿಗಳನ್ನು ತಮ್ಮ ಇಷ್ಟಕ್ಕೆ ಬ೦ದ೦ತೆ ನಮೂದಿಸಿದ್ದಾರೆ. ಇಷ್ಟು ದಿನ ಅದರ ಸಮಸ್ಯೆ ಅಷ್ಟಾಗಿ ಗೊತ್ತಾಗಿರಲಿಲ್ಲ, ಆದರೆ, ಈಗ ಪಂಚ ಗ್ಯಾರಂಟಿಗಳನ್ನು ಪಡೆಯಲು ಹೋದಾಗ ಅದರ ಅರಿವಾಗುತ್ತಿದೆ.
ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ಅರ್ಜಿ ಸಲ್ಲಿಸಲು ಸೇವಾಸಿಂಧು, ಗ್ರಾಮಒನ್ ಕೇಂದ್ರಗಳಿಗೆ ಹೋದಾಗ ಮೊಬೈಲ್ ಗೆ ಒಟಿಪಿ ಬರದ ಯೋಜನೆಗಳಿಗೆ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತಿಲ್ಲ. ಗೃಹ ಜ್ಯೋತಿಗೆ ಅರ್ಜಿ ಸಲ್ಲಿಸಲು ಆಧಾರ್ ಸಂಖ್ಯೆಗೆ ಲಿಂಕ್ ಆಗಿರುವ ಮೊಬೈಲ್ಗೆ ಬರುವಂತಹ ಒಟಿಪಿಯನ್ನು ಸೇವಾ ಸಿಂಧು ಪೋರ್ಟಲ್ನಲ್ಲಿ ಅಪ್ ಲೋಡ್ ಮಾಡಬೇಕಿದೆ.
ಸರ್ಕಾರದ ಎರಡನೇ ಯೋಜನೆಯಾದ 5 ಕೆ.ಜಿ ಅಕ್ಕಿ ಬದಲಿಗೆ ನಗದು ನೇರವಾಗಿ ಫಲಾನುಭವಿಯ ಬ್ಯಾಂಕ್ ಖಾತೆಗೆ ಜಮೆ ಆಗಲಿದೆ ಇದಕ್ಕೂ ಸಹಾ ಬ್ಯಾಂಕಿನಲ್ಲಿ ಖಾತೆಗೆ ಆಧಾರ್ ಸಂಖ್ಯೆ ಜೋಡಣೆ ಆಗಿರಲೇಬೇಕು . ಇಲ್ಲವಾದರೆ, ಸರ್ಕಾರದಿಂದ ಡಿಬಿಟಿ ಮೂಲಕ ಬರುವ ಹಣ ಖಾತೆಗೆ ಜಮೆ ಆಗುವುದಿಲ್ಲ, ಸರಿಯಾಗಿ ಕೆವೈಸಿ ಆಗದ ಕಾರಣ ಬಹಳಷ್ಟು ಜನರು ಅಕ್ಕಿ ಬದಲಾಗಿ ಹಣಪಡೆಯಲು ಸಾಧ್ಯವಾಗಿಲ್ಲ .
ಸೈಬರ್ ಕೇಂದ್ರಗಳತ್ತ ಜನರ ದಂಡು : ಇನ್ನು ಮೂರನೇ ಗ್ಯಾರಂಟಿ ಗೃಹಲಕ್ಷ್ಮೀಯೋಜನೆಗೂ ಸಹಾಕಡ್ಡಾಯವಾಗಿ ಆಧಾರ್ ಸಂಖ್ಯೆ ಮೊಬೈಲ್ ನಂಬರ್ ತಪ್ಪಾಗಿದ್ದರೆ ಅಥವಾ ಆಧಾರನಲ್ಲಿ ನಮೂದಾಗಿರುವ ಮೊಬೈಲ್ ಸಂಖ್ಯೆ ಕಳೆದು ಹೋಗಿದ್ದರೆ ಯೋಜನೆ ಪಡೆಯಲು ಸಾಧ್ಯವಾಗುವುದಿಲ್ಲ , ಆದ್ದರಿಂದ ಸರ್ಕಾರದ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಲು ಜನ ಆಧಾರ್ ಸೇವಾ ಕೇಂದ್ರಗಳು ಮತ್ತು ನಾಡಕಚೇರಿಗಳ ಮೊರೆ ಹೋಗಿದ್ದಾರೆ .
ಸರ್ವರ್ ಕಾಟ : ಕೇಂದ್ರಗಳಲ್ಲಿ ನಿತ್ಯ ಹೆಚ್ಚು ಜನ ಬರುತ್ತಿರುವ ಕಾರಣ ತಿದ್ದುಪಡಿಗಾಗಿ. ಕೆಲಸ ಕಾರ್ಯ ಬಿಟ್ಟು ದಿನ ಪೂರ್ತಿ ಕಾಯಬೇಕಾದ ಪರಿಸ್ಥಿತಿ. ಇತ್ತ ಆಧಾರ್ ಕೇಂದ್ರಗಳಲ್ಲಿ ಸಹ ಆಗಾಗ ಸರ್ವರ್ ಸೇರಿ ಇತರ ತಾಂತ್ರಿಕ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿದೆ. ಅಪ್ ಡೇಟ್ ಮಾಡಲು ನಾಲ್ಕೈದು ದಿನಗಳಿಗೂ ಹೆಚ್ಚು ಸಮಯ ಬೇಕಾಗಿದೆ. ಅದು ಅಪ್ ಡೇಟ್ ಆಗುವ ತನಕ ಯೋಜನೆ ಅರ್ಜಿಗಳನ್ನು ಸಲ್ಲಿಸಲು ಸಾಧ್ಯವಾಗುವುದಿಲ್ಲ. ಆಧಾರ್ ಕಾರ್ಡಗಳ ತಿದ್ದುಪಡಿಗೆ ಹೆಚ್ಚು ಹೆಚ್ಚು ಜನ ಬರುತ್ತಿರುವ ಕಾರಣದಿಂದ ಹೋಬಳಿಯ ನಾಡಕಛೇರಿ ಮತ್ತು ಪಟ್ಟಣಗಳಲ್ಲಿ ಜನರು ನೂಕುನುಗ್ಗಲು ಮಾಡುತ್ತಿರುವುದರಿಂದ ಸಿಬ್ಬಂದಿಗೆ ಅವರನ್ನು ನಿಯಂತ್ರಿಸುವುದು ಕಷ್ಟವಾಗಿದೆ.
ಕಳೆದ ಒಂದು ತಿಂಗಳಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನಸಾಮಾನ್ಯರು ತಮ್ಮ ಆಧಾರ್ ಕಾರ್ಡ್ಗಳಲ್ಲಿನ ಹೆಬ್ಬಟ್ಟು ಸರಿಪಡಿಸಲು, ಆಧಾರ್ ಕಾರ್ಡ್ ಅಪ್ಲೇಟ್ ಮಾಡಿಸಲು, ಮೊಬೈಲ್ ನಂಬರ್ ನಮೂದಿಸಲು ಪ್ರತಿ ದಿನ ಬರುತ್ತಿದ್ದಾರೆ. ರಾಜ್ಯ ಸರ್ಕಾರವು ಜಾರಿಗೆ ತಂದಿರುವ ಗ್ಯಾರಂಟಿಗಳಿಗೆ ಮುಖ್ಯವಾಗಿ ಆಧಾರ್ ಕಾರ್ಡ್ ಅವಶ್ಯಕತೆ ಇದೆ. ಅದನ್ನು ಸರಿಪಡಿಸಿಕೊಳ್ಳಲು ಹೆಚ್ಚಿನ ಸಂಖ್ಯೆಯಲ್ಲಿ ಜನ ಬರುತ್ತಿರುವುದರಿಂದ ಟೋಕನ್ ನೀಡಿ ಪ್ರತಿ ದಿನ ನೂರಕ್ಕೂ ಹೆಚ್ಚು ಜನರಿಗೆ ಸರ್ವರ್ ಸಮಸ್ಯೆ ನಡುವೆ ತಿದ್ದುಪಡಿ ಮಾಡಲಾಗುತ್ತಿದೆ.
ಮುನಿರಾಜು, ಕರ್ನಾಟಕ ಒನ್ ಸಮಗ್ರ ನಾಗರಿಕ ಸೇವ ಕೇಂದ್ರದ ಕಾರ್ಯನಿರ್ವಾಹಕ