ಸುದ್ದಿಮೂಲ ವಾರ್ತೆ
ಚಿಕ್ಕಬಳ್ಳಾಪುರ,ಅ.15: ಬಹಿರಂಗದ ಯಶಸ್ಸಿಗಿಂತ ಅಂತರಂಗದ ಶಾಂತಿ ಮುಖ್ಯವಾದುದು. ದೈವ ಚಿಂತನೆಯಿಂದ ಬದುಕು ಸರಳವಾಗುತ್ತದೆ ಎಂದು ಪ್ರವಚನಕಾರ ತಳಗವಾರ ಟಿ.ಎಲ್.ಆನಂದ್ ಅಭಿಪ್ರಾಯಪಟ್ಟರು.
ಜಿಲ್ಲೆಯ ಕೈವಾರದ ಶ್ರೀಯೋಗಿನಾರೇಯಣ ಮಠದಲ್ಲಿ ಬೆಂಗಳೂರಿನ ಬಸವ ಬಳಗದ ಸದಸ್ಯರು ಆಯೋಜಿಸಿದ್ದ ಧಾರ್ಮಿಕ ಶಿಬಿರದಲ್ಲಿ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.
ನೂರಾರು ವರ್ಷಗಳ ಹಿಂದೆ ಇದ್ದಂತಹ ಸಾಧು- ಸಂತ-ದಾಸರನ್ನು ಇಂದಿಗೂ ನೆನೆಸಿಕೊಳ್ಳುತ್ತೇವೆ.
ಕಾರಣವೆಂದರೆ ಸಾಧುಸಂತರು ತಮಗಾಗಿ ಬದುಕಲಿಲ್ಲ. ಇಡೀ ಸಮಾಜಕ್ಕಾಗಿ ಜೀವನ ಸವೆಸಿದರು ಅವರ ಬದುಕು ನಮಗೆ ಪಾಠವಾಗಬೇಕು ಮನಸ್ಸಿನ ನಿಯಂತ್ರಣವಿಲ್ಲದೆ ಬದುಕಿನಲ್ಲಿ ಸುಖವಾಗಿರಲು ಸಾಧ್ಯವಿಲ್ಲ ಎಂದು ಸಾರಿದ ಕೈವಾರ ಯೋಗಿನಾರೇಯಣ ತಾತಯ್ಯನವರ ಬೋಧನೆಗಳು ನಮಗೆ ಮಾರ್ಗದರ್ಶನ ಎಂದರು.
ಬಸವ ಬಳಗದ ಅಧ್ಯಕ್ಷ ಉದಯಶಂಕರ್ ಮಾತನಾಡಿ, ಧಾರ್ಮಿಕ ಕ್ಷೇತ್ರಗಳಲ್ಲಿ ಶಿಬಿರಗಳನ್ನು ಆಯೋಜಿಸುವುದರಿಂದ ಹಲವಾರು ಮಾನಸಿಕ ಲಾಭಗಳನ್ನು ಪಡೆದುಕೊಳ್ಳಬಹುದಾಗಿದೆ.
ಮಾನಸಿಕವಾದ ಸದೃಢತೆಗೆ ಇಂತಹ ಪ್ರವಾಸ ಸ್ಥಳಗಳು ಪೂರಕವಾಗಿದೆ. ಕಾಲಜ್ಞಾನಿ ಕೈವಾರ ತಾತಯ್ಯನವರ ಚಿಂತನೆಗಳು ನಮಗೆ ಸದಾ ದಾರಿದೀಪ ಎಂದರು.
ಕಾರ್ಯಕ್ರಮದಲ್ಲಿ ಬಳಗದ ಕಾರ್ಯದರ್ಶಿ ಶ್ರೀಧರ್ ಹಿರೇಮಠ್, ಸದಸ್ಯರುಗಳಾದ ಶಿವಶಂಕರ್,ಶಿವಾನಂದ್, ಬಸವರಾಜು ಉಪಸ್ಥಿತರಿದ್ದರು.