ಸುದ್ದಿಮೂಲ ವಾರ್ತೆ
ಬೆಂಗಳೂರು, ಆ.24: ಕೇಂದ್ರ ಸರ್ಕಾರದ ಸ್ವ-ನಿಧಿ ಯೋಜನೆ ಮುಖೇನ ಡಿಸೆಂಬರ್ ಅಂತ್ಯದ ವೇಳೆಗೆ ದೇಶಾದ್ಯಂತ 50 ಲಕ್ಷ ಫಲಾನುಭವಿಗಳಿಗೆ ಕನಿಷ್ಠ 10 ಸಾವಿರ ರೂಪಾಯಿ ಸಾಲ ಸೌಲಭ್ಯ ಕಲ್ಪಿಸುವ ಗುರಿ ಹೊಂದಲಾಗಿದೆ ಎಂದು ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಡಾ.ಭಗವಂತ್ ಕೃಷ್ಣರಾವ್ ಕರಡ್ ತಿಳಿಸಿದ್ದಾರೆ.
ದಕ್ಷಿಣ ಪ್ರಾಂತ್ಯದ ರಾಜ್ಯಗಳ ಬ್ಯಾಂಕ್ ಮತ್ತು ನಗರ ಪಾಲಿಕೆ ಅಧಿಕಾರಿಗಳೊಂದಿಗೆ ಸ್ವ-ನಿಧಿ ಪ್ರಗತಿ ಪರಿಶೀಲನಾ ಸಭೆ ನಡೆಸಿ, ನಂತರ ಸುದ್ದಿಗೋಷ್ಠಿಯಲ್ಲಿ ಸಚಿವರು ಮಾಹಿತಿ ನೀಡಿದರು.
ಕರ್ನಾಟಕದಲ್ಲಿ 3 ಲಕ್ಷದ 2 ಸಾವಿರ ಫಲಾನುಭವಿಗಳಿಗೆ 4.43 ಲಕ್ಷ ರೂಪಾಯಿಗಳು ಸಾಲ ವಿತರಿಸಲಾಗಿದೆ. ಇದರಲ್ಲಿ 1 ಲಕ್ಷದ 16 ಸಾವಿರ ರೂಪಾಯಿ ಮರುಪಾವತಿಯಾಗಿದೆ. ರಾಜ್ಯದಲ್ಲಿ ಸ್ವ-ನಿಧಿ ಯೋಜನೆಯ ಅನುಷ್ಠಾನ ಶೇಕಡ 68ರಷ್ಟಿದ್ದು, ಇದನ್ನು ಸುಧಾರಿಸಲು ಪ್ರತಿ ಬುಧವಾರ ಬೀದಿಬದಿ ವ್ಯಾಪಾರಗಳಿಂದ ಸ್ವ-ನಿಧಿ ಅರ್ಜಿ ಸಲ್ಲಿಕೆಗೆ ವ್ಯವಸ್ಥೆ ಕಲ್ಪಿಸಬೇಕೆಂದು ರಾಜ್ಯ ಸರ್ಕಾರಕ್ಕೆ ತಿಳಿಸಲಾಗಿದೆ ಎಂದು ಹೇಳಿದರು.
ಕೇರಳದಲ್ಲಿ ಸ್ವ-ನಿಧಿಯ ಅನುಷ್ಠಾನ ಕೇವಲ ಶೇಕಡ 21ರಷ್ಟಿದ್ದು, ಅಲ್ಲಿ ಹೆಚ್ಚಿನ ಬೀದಿಬದಿ ವ್ಯಾಪಾರಿಗಳಿಗೆ ಕೇವಲ ಶೇಕಡ 3ರಷ್ಟು ಬಡ್ಡಿದರಕ್ಕೆ ಸಾಲ ಸೌಲಭ್ಯ ಪೂರೈಸಲು ವಿಶೇಷ ಅಭಿಯಾನ ಆಯೋಜಿಸುವ ಚಿಂತನೆ ಇದೆ ಎಂದು ತಿಳಿಸಿದರು.
ಈ ಯೋಜನೆಯಡಿ ಡಿಜಿಟಲ್ ಪಾವತಿ ಸೌಲಭ್ಯ ಕಲ್ಪಿಸಿದ ಬೀದಿಬದಿ ವ್ಯಾಪಾರಿಗಳಿಗೆ ಪ್ರತಿ ತಿಂಗಳು 100 ರೂಪಾಯಿ ಪ್ರೋತ್ಸಾಹ ಧನ ನೀಡುವ ವ್ಯವಸ್ಥೆ ಇದೆ ಎಂದು ಸಚಿವರು ಹೇಳಿದರು.