ಸುದ್ದಿಮೂಲ ವಾರ್ತೆ
ಕೆ.ಆರ್.ಪುರ. ಆ 11;ರಾಮಮೂರ್ತಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಎನ್.ಆರ್.ಐ ಬಡಾವಣೆ ಮುಖ್ಯರಸ್ತೆಯ ಇಂದಿರಾ ಕ್ಯಾಂಟಿನ್ ಸಮೀಪ ಇದೇ ತಿಂಗಳ 15 ರಂದು ಕ್ರಾಂತಿ ವೀರ ಸಂಗೊಳ್ಳಿರಾಯಣ್ಣ ಪುತ್ತಳಿ ಅನಾವರಣ ಮಾಡಲು ನಿರ್ಮಿಸಲಾಗಿದ್ದ ಕ್ರಾಂತಿ ವೀರ ಸಂಗೋಳ್ಳಿ ರಾಯಣ್ಣ ಪ್ರತಿಮೆಯನ್ನು ಸ್ಥಳೀಯರ ವಿರೋಧದ ನಡುವೆಯೂ ಬಿಬಿಎಂಪಿ ಅಧಿಕಾರಿಗಳು ತೆರವುಗೊಳಿಸಿದರು.
ಕೆ.ಆರ್.ಪುರ ಕ್ಷೇತ್ರದ ಎನ್.ಆರ್ ಐ ಬಡಾವಣೆಯಲ್ಲಿ ಶ್ರೀ ಕನಕ ಜನಜಾಗೃತಿ ಕುರುಬರ ಸಂಘ ಹಾಗೂ ಸ್ಥಳೀಯರ ಸಹಕಾರದಿಂದ ಸುಮಾರು 9 ಅಡಿ ಎತ್ತರದ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣರ ಪುತ್ತಳಿಯನ್ನು ನಿರ್ಮಿಸಿದ್ದರು. ಆಗಸ್ಟ್ 15 ರಂದು ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ಜಯಂತಿ ದಿನದಂದು ಪುತ್ತಳಿ ಅನಾವರಣಗೊಳಿಸಲು ಸಕಲ ಸಿದ್ಧತೆ ನಡೆಸಲಾಗಿತ್ತು. ಆದರೆ ಶುಕ್ರವಾರ ಮಧ್ಯಾಹ್ನ ಬಿಬಿಎಂಪಿ ಜಾಗದಲ್ಲಿ ಯಾವುದೇ ಅನುಮತಿ ಪಡೆಯದೆ ಸಂಗೋಳ್ಳಿ ರಾಯಣ್ಣ ಪ್ರತಿಮೆ ಸ್ಥಾಪನೆ ಮಾಡಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆಂದು ಬಿಬಿಎಂಪಿ ಅಧಿಕಾರಿಗಳು ಪೋಲಿಸ್ ಬಂದೋಬಸ್ತ್ ನಲ್ಲಿ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣರ ಪುತ್ತಳಿಯನ್ನು ತೆರವುಗೊಳಿಸಿ ಹೊರಮಾವು ಬಿಬಿಎಂಪಿ ಕಚೇರಿಗೆ ರವಾನಿಸಿದ್ದಾರೆ.
ಬಿಬಿಎಂಪಿ ಅಧಿಕಾರಿಗಳ ನಡೆ ವಿರುದ್ಧ ಸ್ಥಳೀಯರು ಕೆಲಕಾಲ ಪ್ರತಿಮೆ ತೆರವುಗೊಳಿಸಿದ ಜಾಗದಲ್ಲಿ ಪ್ರತಿಭಟನೆ ನಡೆಸಿದರು. ಇದೇ ಜಾಗದಲ್ಲಿ ಪ್ರತಿಮೆ ಪ್ರತಿಷ್ಠಾಪಿಸಬೇಕೆಂದು ಪಟ್ಟುಹಿಡಿದರು.
ಕಾಂತಿ ವೀರಸಂಗೊಳ್ಳಿ ರಾಯಣ್ಣ ಒಂದು ಸಮಾಜಕ್ಕೆ ಸೀಮತರಾದವರಲ್ಲ, ಅವರೊಬ್ಬ ಸ್ವಾತಂತ್ರ್ಯ ಹೋರಾಟಗಾರ ಅಂತಹವರ ಪುತ್ತಳಿಯನ್ನು ನಮ್ಮ ಸಂಘ ಹಾಗೂ ಸ್ಥಳೀಯ ನೆರವಿನಿಂದ ನಿರ್ಮಿಸಿದ್ದೇವೆ. ಆದರೆ ನಾವು ಅನುಮತಿ ಪಡೆಯದೆ ನಿರ್ಮಿಸಲಾಗಿದೆ ಎಂದು ನಮಗೂ ಯಾವುದೇ ಮಾಹಿತಿ ಇಲ್ಲದೆ ಏಕಾಏಕಿ ತೆರವುಗೊಳಿಸಿದ್ದಾರೆ ಎಂದು ಸಂಘದ ಅಧ್ಯಕ್ಷ ಕೃಷ್ಣಪ್ಪ ಆಕ್ಷೇಪ ವ್ಯಕ್ತಪಡಿಸಿದರು.